ಬಾಲ್ಯಾವಸ್ಥೆ

 

ಬಾಲ್ಯಾವಸ್ಥೆ

ಅರ್ಥ:

       ಬೆಳವಣಿಗೆಯ ಕಲ್ಪನೆ:

       ಮಾನವನಲ್ಲಾಗುವ ದೈಹಿಕ ಅಥವಾ ಭೌತಿಕ ಅಭಿವೃದ್ಧಿ ಬದಲಾವಣೆಹಳನ್ನು ʼಬೆಳವಣಿಗೆʼ ಎನ್ನುವರು. ಉದಾ: ದೇಹದ ಗಾತ್ರ, ಉದ್ಧ, ಅವಯವಗಳ ಬದಲಾವಣೆ ಮುಂತಾದವುಗಳು. ಸ್ಕಾಟ್‌ ಹೇಳಿರುವಂತೆ “ಬೆಳವಣಿಗೆ ಒಂದು ನಿಶ್ಚಿತವಾದ ಬದಲಾವಣೆ. ವ್ಯಕ್ತಿಯ ಹುಟ್ಟಿನಿಂದ ಸಾಯುವವರೆಗೆ ಅನೇಕ ಬದಲಾವಣೆಗಳನ್ನು ಹೊಂದುವನು. ಈ ಬದಲಾವಣೆಗಳು ಜೀವಿಯ ಭೌತಿಕ ರಚನೆ, ಕಾರ್ಯಗಳ ನಿರ್ವಹಣೆಯಲ್ಲಿ ಕಂಡು ಬರುತ್ತದೆ” ಎಂದಿದ್ದಾರೆ. ಕೆಲವೊಮ್ಮೆ ವ್ಯಕ್ತಿಯ ಬೆಳವಣಿಗೆಯು ಪರಿಸರವನ್ನು ಅವಲಂಬಿಸಿರುತ್ತದೆ. ಉತ್ತಮ ಪರಿಸರವಿದ್ದಲ್ಲಿ ಬೆಳವಣಿಗೆ ಶೀಘ್ರಗತಿಯಲ್ಲಿರುತ್ತದೆ. ಬೆಳವಣಿಗೆಯು ಆಹಾರ ಮತ್ತು ಪೋಷಕಾಂಶಗಳಷ್ಟೇ ಅಲ್ಲದೇ ಅನುವಂಶೀಯತೆಯ ಮೇಲೂ ಅವಲಂಬಿಸಿರುತ್ತದೆ. ಮಕ್ಕಳಿಗೆ ಉತ್ತಮ ಪೋಷಕಾಂಶಗಳನ್ನು ಒದಗಿಸಿದರೆ ಬೆಳವಣಿಗೆ ಸಮರ್ಪಕವಾಗಿರುತ್ತದೆ. ಬೆಳವಣಿಗೆಯು ದೇಹದ ಎಲ್ಲಾ ಅಂಗಗಳು ಸಮನಾದ ಅಭಿವೃದ್ಧಿ ಹೊಂದಿದರೆ ಮಾತ್ರಾ ಅದನ್ನು ಸಾಮಾನ್ಯ ಬೆಳವಣಿಗೆ ಎನ್ನುತ್ತಾರೆ. ಆದರೆ ದೇಹದ ಯಾವುದೋ ಒಂದು ಭಾಗ ತ್ವರಿತಗತಿಯಲ್ಲಿ ಬೆಳವಣಿಗೆಯಾಗಿ ಉಳಿದ ಅಂಗಗಳ ಬೆಳವಣಿಗೆ ಕುಂಠಿತವಾದರೆ ಅಸಾಮಾನ್ಯ ಬೆಳವಣಿಗೆ ಎಂತಲೂ ದೇಹದ ಬೆಳವಣಿಗೆ ಸರಿಯಾಗಿ ಆಗದೆ ಕುಂಠಿತವಾದರೆ ಅದನ್ನು ಕ್ಷೀಣ ಬೆಳವಣಿಗೆ ಎಂದು ಕರೆಯುತ್ತಾರೆ. ದೈಹಿಕ ಬೆಳವಣಿಗೆ ಎಂದರೆ ಕೇವಲ ಗಾತ್ರ, ಉದ್ದ, ತೂಕ ಇಷ್ಟೇ ಅಲ್ಲ, ದೇಹ ಸಂಯೋಜನೆಯಲ್ಲೂ ಪರಿವರ್ತನೆಯಾಗಬೇಕು. ಬೆಳವಣಿಗೆಯ ಬಾಲ್ಯ ಮತ್ತು ತಾರುಣ್ಯದಲ್ಲಿ ಶೀಘ್ರವಾಗಿ ಜರುಗುತ್ತದೆ. ಬೆಳವಣಿಗೆಯು ದೈಹಿಕ ಬದಲಾವಣೆಗೆ ಮಾತ್ರ ಒಳಪಟ್ಟಿದ್ದು ಗಾತ್ರ, ತೂಕ, ಎತ್ತರ, ದೇಹದ ರಚನೆ, ಹೊಸ-ಹೊಸ ಅವಯವಗಳ ಸಂಯೋಜನೆಗೆ ಸೀಮಿತವಾಗಿದೆ,

 

 

 

ವಿಕಾಸದ ಕಲ್ಪನೆ:

      ವ್ಯಕ್ತಿಯಲ್ಲಾಗುವ ಗುಣಾತ್ಮಕ ಬದಲಾವಣೆಯೇ ʼವಿಕಾಸʼ. ಅಂದರೆ ವ್ಯಕ್ತಿಯು ಉತ್ತಮ ಆರೋಗ್ಯವಂತನಾಗುವುದು, ಸಾಮಾಜಿಕವಾಗಿ ಅಭಿವೃದ್ದಿಯಾಗುವುದು, ಉತ್ತಮ ಬುದ್ದಿಶಕ್ತಿಯನ್ನು ಹೊಂದುವುದು, ಉತ್ತಮ ಮನೋಭಾವನೆಯನ್ನು ಪಡೆಯುವುದು ಎಲ್ಲವೂ ವಿಕಾಸದ ಅಂಶಗಳೇ ಆಗಿವೆ. ಮಾನವನಲ್ಲಾಗುವ ಉತ್ತಮ ನಡುವಳಿಕೆ ಹಾಗೂ ಪರಿಜ್ಞಾನವನ್ನು ʼವಿಕಾಸʼ ಎನ್ನಬಹುದು. ಇದೊಂದು ವ್ಯಕ್ತಿಯಲ್ಲಾಗುವ ಸುವ್ಯವಸ್ಥಿತ ಹಾಗೂ ಸುಸಂಬದ್ದ ಪರಿವರ್ತನಾ ಸರಣಿ. ವಿಕಾಸವು ವ್ಯಕ್ತಿಯ ಮನಸ್ಸನ್ನು ಅವಲಂಬಿಸಿರುತ್ತದೆ. ವ್ಯಕ್ತಿಯಲ್ಲಾಗುವ ಕ್ರಮಬದ್ದ ಬದಲಾವಣೆಯನ್ನು ವಿಕಾಸ ಎನ್ನಬಹುದಾದರೂ ಆ ಬದಲಾವಣೆಗಳು ಉತ್ತಮಾಂಶಗಳಿಂದ ಕೂಡಿರಬೇಕು.

        ವಿಕಾಸವು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾವಣೆಯನ್ನು ಹೊಂದಿರುತ್ತದೆ. ವ್ಯಕ್ತಿಯ ವಯಸ್ಸಿಗೆ ತಕ್ಕಂತೆ ವಿಕಾಸವು ಕೆಲವರಲ್ಲಿದ್ದರೆ, ಕೆಲವರಲ್ಲಿ ಅವರ ದೈಹಿಕ ವಯಸ್ಸಿಗಿಂತ ವಿಕಾಸ ಕಡಿಮೆ ಇರುತ್ತದೆ. ಇವರು ಸಮಾನ ವಯಸ್ಕರೊಂದಿಗೆ ಸ್ಪಂದಿಸಲು ಕಷ್ಟಪಡುತ್ತಾರೆ ಮತ್ತೆ ಕೆಲವರು ತಮ್ಮ ವಯಸ್ಸಿಗೆ ಮೀರಿ ವಿಕಾಸವನ್ನು ಹೊಂದಿರುತ್ತಾರೆ. ಅವರನ್ನು ಬಹು ಬುದ್ದಿವಂತರು ಎಂತಲೂ ಪರಿಗಣಿಸಲಾಗುತ್ತದೆ. ವಿಕಾಸವು ವಯಸ್ಸಿನಿಂದ ವಯಸ್ಸಿಗೆ ಬದಲಾವಣೆ ಹೊಂದುತ್ತಾ ಹೋಗುತ್ತದೆ ಅಂದರೆ ಬಾಲ್ಯಾವಸ್ಥೆಯಲ್ಲಿ ಬೇಗ ಮೇಲೇರಿ, ನಡುವಯಸ್ಸಿನಲ್ಲಿ ತಟಸ್ಥವಾಗಿದ್ದು ವೃದ್ದಾಪ್ಯದಲ್ಲಿ ಕೆಳಗಿಳಿಯುತ್ತಾ ಬರುತ್ತದೆ. ರೇಖೆಯನ್ನು ರಚಿಸಿದರೆ ಗಂಟಾಕೃತಿ ಬರುತ್ತದೆ.

        ಒಟ್ಟಾರೆ ಹೇಳುವುದಾದರೆ “ವಿಕಾಸ ಎಂದರೆ ದೇಹದ ಉದ್ದ, ಗಾತ್ರ ಹಾಗೂ ತೂಕದಲ್ಲಿ ಹೆಚ್ಚಾಗುವುದು ಎಂದಲ್ಲ, ಅದು ಶರೀರದ ಅಂಗಾಂಗಗಳ ರಚನೆಗೆ ಹಾಗೂ ಕ್ರಿಯೆಗಳಿಗೆ ಸರಿಹೊಂದಿಕೊಳ್ಳುವಂತಹ ಒಂದು ಸಂಕೀರ್ಣ ಪ್ರಕ್ರಿಯೆ” ಎನ್ನಬಹುದು.

ಬೆಳವಣಿಗೆ ಮತ್ತು ವಿಕಾಸ ಒಂದೇ ನಾಣ್ಯದ ಎರಡು ಮುಖಗಳು:

         ಬೆಳವಣಿಗೆ ಮತ್ತುವಿಕಾಸಗಳು ಸಮಾನಾರ್ಥವನ್ನು ಹೊಂದಿವೆ. ಅವು ಒಂದನ್ನೊಂದು ಪರ್ಯಾಯ ಪದಗಳು. ಎಂದು ತಿಳಿದರೂ ಬೆಳವಣಿಗೆ ಮತ್ತು ವಿಕಾಸದಲ್ಲಿ ಕೆಲವು ವ್ಯತ್ಯಾಸಗಳನ್ನು ಕಾಣಬಹುದು. ಬೆಳವಣಿಗೆಯು ಮಾನವನ ದೇಹದ ಪರಿಮಾಣಾತ್ಮಕ ಬದಲಾವಣೆ ಅಂದರೆ ಎತ್ತರ, ತೂಕ, ಗಾತ್ರ ಇತ್ಯಾದಿ. ಆದರೆ ವಿಕಾಸ ಎಂಬುದು ಗುಣಾತ್ಮಕ ಬದಲಾವಣೆಯನ್ನು ಹೊಂದಿದೆ. ಅಂದರೆ ಮಾನಸಿಕ ಆರೋಗ್ಯ, ಸಾಮಾಜಿಕ ವರ್ತನೆ, ಬುದ್ದಿವಂತಿಕೆ ಇತ್ಯಾದಿ.

         ಬೆಳವಣಿಗೆಗೆ ಒಂದು ನಿರ್ದಿಷ್ಟ ಹಂತವಿದೆ. ಅಂದರೆ ಮಾನವನ ಬೆಳವಣಿಗೆಯು 19 ರಿಂದ 23 ವರ್ಷಗಳವರೆಗೆ ಮುಂದುವರೆದು ನಂತರ ಬೆಳವಣಿಗೆ ಕ್ರಮೇಣವಾಗಿ ನಿಂತು ಹೋಗುತ್ತದೆ. ಆದರೆ ವಿಕಾಸವು ಬ್ರೂಣದಿಂದ ಪ್ರಾರಂಭವಾಗಿ ಜೀವನದ ವಿವಿಧ ಹಂತಗಳನ್ನು ದಾಟಿ ಸಾವಿನೊಡನೆ ಸಮಾಪ್ತಿಯಾಗುತ್ತದೆ. ಈ ಅಂಶಗಳನ್ನು ಪರಿಗಣಿಸಿದಾಗ ವಿಕಾಸವು ಮನಸ್ಸಿಗೆ ಸಂಬಂಧಿಸಿದ್ದು, ವಿಸ್ತಾರವಾದ ವ್ಯಾಪ್ತಿಯನ್ನು ಹೊಂದಿದೆ.

      ಎಲಿಜಬೆತ್‌.ಬಿ. ಹರ್ಲಾಕ್‌ (1975) ಇವರು ಮಾನವನ ವಿಕಾಸದ ಅವಸ್ಥೆಗಳನ್ನು ಕೆಳಗಿನಂತೆ ಗುರ್ತಿಸಿದ್ದಾರೆ.

  1. ಪ್ರಸವ ಪೂರ್ವಾವಸ್ಥೆ     ------- ಗರ್ಭಧಾರಣೆಯಿಂದ ಜನನದವರೆಗೆ.
  2. ಶೈಶವ ಅವಸ್ಥೆ               ------- ಜನನದಿಂದ 2 ನೇ ವಾರದವರೆಗೆ.
  3. ಹಸುಳೆತನ                  -------    3 ನೇ ವಾರದಿಂದ 2 ನೇ ವರ್ಷದವರೆಗೆ.
  4. ಪೂರ್ವ ಬಾಲ್ಯಾವಸ್ಥೆ    ------   2ನೇ ವರ್ಷದಿಂದ 6 ನೇ ವರ್ಷದವರೆಗೆ.
  5. ಉತ್ತರ ಬಾಲ್ಯ               ------- 6 ನೇ ವರ್ಷದಿಂದ 10-12 ವರ್ಷದವರೆಗೆ
  6. ಲೈಂಗಿಕ ಪಕ್ವತೆಯ ಕಾಲ   ----- 10-12 ವರ್ಷದಿಂದ 13-14 ವರ್ಷದವರೆಗೆ.
  7. ತಾರುಣ್ಯ                       ------    13-14 ವರ್ಷದಿಂದ 18 ನೇ ವರ್ಷದವರೆಗೆ.
  8. ವಯಸ್ಕತನ            --------         18 ನೇ ವರ್ಷದಿಂದ 40 ನೇ ವರ್ಷದವರೆಗೆ.
  9. ಮದ್ಯವಯಸ್ಸು       -------          40 ನೇ ವರ್ಷದಿಂದ 60 ನೇ ವರ್ಷದವರೆಗೆ.
  10. ವೃದ್ದಾಪ್ಯ              ---------        60 ನೇ ವರ್ಷದಿಂದ ಸಾವಿನವರೆಗೆ.

        ಬೆಳವಣಿಗೆ ಮತ್ತು ವಿಕಾಸ ವನ್ನು ಕುರಿತು ಎಲಿಜಬೆತ್‌.ಬಿ. ಹರ್ಲಾಕ್‌ ರವರು-“ಮೂಲತಃ ಪರಸ್ಪರ ವಿರುದ್ದವಾದ ಎರಡು ಪ್ರಕ್ರಿಯೆಗಳು ಜೀವನದುದ್ದಕ್ಕೂ ಏಕಕಾಲದಲ್ಲಿ ನಡೆಯುತ್ತಾ ಇರುತ್ತವೆ” ಎಂದಿದ್ದಾರೆ.

ಬಾಲ್ಯಾವಸ್ಥೆಯ ಅರ್ಥ:

     ಹುಟ್ಟಿನಿಂದ ಕಿಶೋರಾವಸ್ತೆ/ಹದಿಹರೆಯದ ವಯಸ್ಸುಗಳ ನಡುವಿನ ಅಂತರವನ್ನು ಬಾಲ್ಯಾವಸ್ಥೆ ಎನ್ನುತ್ತೇವೆ

       ಮನೋವಿಜ್ಞಾನದ ಪ್ರಕಾರ ಮಗುವಿನ ದೈಹಿಕ ವಯಸ್ಸಿನ 2 ನೇ ವರ್ಷದಿಂದ ಪ್ರಾರಂಭಿಸಿ 12 ನೇ ವರ್ಷದ ಅಂತ್ಯದವರೆಗೆ ಬಾಲ್ಯಾವಸ್ಥೆ ಎಂದು ಹೇಳಲಾಗಿದೆ. ಮಗುವಿನ ಬೆಳವಣಿಗೆಯ ಈ ಹಂತವನ್ನು ಪೂರ್ವಬಾಲ್ಯಾ ಮತ್ತು ಉತ್ತರ ಬಾಲ್ಯಾ ಎಂದು ಎರಡು ಪ್ರಮುಖ ಘಟ್ಟಗಳಾಗಿ ವಿಂಗಡಿಸಲಾಗಿದೆ.

       ಪೂರ್ವಬಾಲ್ಯವು ಸಾಮಾನ್ಯವಾಗಿ ಮಗುವಿನ ಎರಡನೇ ವರ್ಷದ ಕೊನೆಯಿಂದ ಪ್ರಾರಂಭವಾಗಿ ಆರನೇ ವರ್ಷದ ಕೊನೆಯವರೆಗೆ ಮುಂದುವರೆಯುತ್ತದೆ. ಶೈಶವಸ್ಥೆಯಲ್ಲಿ ಬೆಳವಣಿಗೆ ವೇಗವಾಗಿ ನಡೆಯುತ್ತದೆ. ಆದರೆ ಪೂರ್ವ ಬಾಲ್ಯವಸ್ಥೆಯಲ್ಲಿ ಕ್ರೂಢೀಕರಣ ಹಂತ. ಇದನ್ನು ಶಾಲಾ ಪೂರ್ವಹಂತ ಎಂತಲೂ ಕರೆಯಲಾಗಿದೆ. ಕಾರಣ ಈ ಹಂತದಲ್ಲಿ ಮಗು ಇನ್ನೂ ಔಪಚಾರಿಕ ಶಿಕ್ಷಣ ಪ್ರಾರಂಭವಾಗುವುದು 5 ವರ್ಷ 10 ತಿಂಗಳ ನಂತರ. ಈ ಹಂತದಲ್ಲಿ ಮಗು ಶಿಶುವಿಹಾರ, ಅಂಗನವಾಡಿಗಳಿಗೆ ಪ್ರವೇಶ ಪಡೆದು ಅಕ್ಷರಾಭ್ಯಾಸ ಮಾಡುವುದುಂಟು. ಈ ಹಂತದಲ್ಲಿ ಮಗು ಔಪಚಾರಿಕ ಶಿಕ್ಷಣಕ್ಕೆ ದಾಖಲಾಗಲು ವಿವಿಧ ರೀತಿಯಲ್ಲಿ ಸಿದ್ದವಾಗುತ್ತದೆ.

        ಮಗುವಿನ 6ನೇ ವಯಸ್ಸಿನಿಂದ ಪ್ರಾರಂಭಿಸಿ ವ್ಯಕ್ತಿ ಲೈಂಗಿಕವಾಗಿ ಪರಿಪಕ್ವವಾಗುವವರೆಗೆ ಅಂದರೆ 12ನೇ ವರ್ಷದವರೆಗೆ ಉತ್ತರ ಬಾಲ್ಯ ಅಥವಾ ಪೂರ್ವತಾರುಣ್ಯಾವಸ್ಥೆ ಎಂದು ಕರೆಯುತ್ತಾರೆ. ಈ ಹಂತದಲ್ಲಿ ಮಗು ಮನೆಯಿಂದ ಶಾಲೆಯ ಕಡೆ ಸಾಗುತ್ತಾನೆ. ಅಂದರೆ ಔಪಚಾರಿಕವಾಗಿ ಶಿಕ್ಷಣ ಪಡೆಯಲು ಆರಂಭಿಸುತ್ತಾನೆ ಹಾಗೂ ಈ ಹಂತದಲ್ಲಿ ಮಗು ಸಾಕಷ್ಟು ಪದ ಸಂಪತ್ತನ್ನು ಪಡೆಯುವುದರಿಂದ ಔಪಚಾರಿಕವಾಗಿ ಶಾಲೆಯಲ್ಲಿ ಕಲಿಯಲು ಸಮರ್ಥನಾಗಿರುತ್ತಾನೆ. ಮಗುವಿನ ವೈಯಕ್ತಿಕ ಹಾಗೂ ಸಾಮಾಜಿಕ ಹೊಂದಾಣಿಕೆಗೆ ಪ್ರಭಾವ ಬೀರುವ ಹಲವಾರು ಅಂಶಗಳನ್ನು ಉತ್ತರಬಾಲ್ಯದಲ್ಲಿ ನೊಡಬಹುದು. ಸಮಾಜದೊಡನೆ ಸರಿಯಾದ ಹೊಂದಾಣಿಕೆ ಮಾಡಿಕೊಳ್ಳಲು ಪೋಷಕರು ಮತ್ತು ಶಿಕ್ಷಕರಿಂದ ಈ ಹಂತದಲ್ಲಿ ಉತ್ತಮ ಮಾರ್ಗದರ್ಶನ ಹಾಗೂ ಸಲಹೆಯ ಅವಶ್ಯಕತೆ ಇದೆ. ಮಗು ಈ ಹಂತದಲ್ಲಿ ವೇಗವಾಗಿ ಕಲಿಯುವುದರಿಂದ ಯಾವ ಭಾಷೆಯನ್ನಾದರೂ ಕಲಿಸಬಹುದು.

ಬಾಲ್ಯಾವಸ್ಥೆಯ ಲಕ್ಷಣಗಳು:

ಪೂರ್ವ ಬಾಲ್ಯದ ಲಕ್ಷಣಗಳು:

1.     ಪೂರ್ವ ಬಾಲ್ಯದ ವಯೋಮಾನವನ್ನು ಶಾಲಾ ಪೂರ್ವ ಹಂತ ಎಂದು ಪರಿಗಣಿಸಲಾಗಿದೆ. ಔಪಚಾರಿಕ ಶಾಲೆಯನ್ನು ಪ್ರವೇಶಿಸಲು ಅಗತ್ಯವಾದ ಪೂರ್ವ ಸಿದ್ದತೆ ಈ ಹಂತದಲ್ಲಿ ಆಗುತ್ತದೆ.

2.     ಇದು ಕೂಟ ಪೂರ್ವ ಯುಗ. ಈ ಹಂತದಲ್ಲಿ ಮಕ್ಕಳು ಸಂಘಟಿತ ಸಾಮಾಜಿಕ ಜೀವನಕ್ಕೆ ಅಗತ್ಯವಾದ ಸಾಮಾಜಿಕ ವರ್ತನೆಗಳನ್ನು ಕಲಿಯುತ್ತಾರೆ, ಈ ವರ್ತನೆಗಳು ಮಗು ಮೊದಲನೆಯ ತರಗತಿಯನ್ನು ತರಗತಿಯನ್ನು ಪ್ರವೇಶಿಸಿದಾಗ ಹೊಂದಾಣಿಕೆಗೆ ಸಹಾಯಕವಾಗುತ್ತದೆ.

3.     ಇದು ಅನ್ವೇಷಣಾ ಹಂತ, ಈ ಹಂತದ ಮಕ್ಕಳು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಯಾವುದೇ ವಸ್ತುವನ್ನು ಅರ್ಥಮಾಡಿಕೊಳ್ಳಬೇಕಾದಾಗ ಅದನ್ನು ಸ್ಪರ್ಶಿಸಿ ನೋಡಬಹುದು. ಅದು ಹೇಗೆ ಕೆಲಸ ಮಾಡುತ್ತದೆ, ಅದರ ಭಾಗಗಳೇನು? ಎಂದು ತಿಳಿಯಲು ಪ್ರಯತ್ನಿಸುತ್ತಾರೆ.

4.     ಇದನ್ನು ಪ್ರಶ್ನಿಸುವ ಹಂತ ಎಂತಲೂ ಕರೆಯುತ್ತಾರೆ. ಈ ಹಂತದ ಮಕ್ಕಳು ಅನ್ವೇಷಿಸುವ ಸಲುವಾಗಿ ಹಲವಾರು ಪ್ರಶ್ನೆಗಳನ್ನು ಕೇಳುತ್ತಾರೆ.

5.     ಪೂರ್ವ ಬಾಲ್ಯವನ್ನು ಅನುಕರಣೆಯ ಹಂತ ಎಂತಲೂ ಕರೆಯುತ್ತಾರೆ. ಏಕೆಂದರೆ ಈ ಹಂತದ ಮಕ್ಕಳು ಹಲವಾರು ವರ್ತನೆಗಳನ್ನು ತಮ್ಮ ಪೋಷಕರು ಹಾಗೂ ಹಿರಿಯರನ್ನು ಅನುಕರಿಸುವ ಮೂಲಕ ಕಲಿಯುತ್ತಾರೆ. ಉದಾಹರಣೆಗೆ ತಮ್ಮ ಕುಟುಂಬದ ಸದಸ್ಯರನ್ನು ವೀಕ್ಷಿಸುವ ಮೂಲಕ ಮಾತು ಮತ್ತು ಸಾಮಾಜಿಕ ವರ್ತನೆಗಳನ್ನು ಅನುಕರಣೆ ಮಾಡುವುದನ್ನು ಕಲಿಯುತ್ತಾರೆ.

6.     ಹೆಚ್ಚಿನ ಮಕ್ಕಳು ಪೂರ್ವಬಾಲ್ಯದ ತಮ್ಮ ಆಟಗಳಲ್ಲಿ ಸೃಜನಶೀಲತೆಯನ್ನು ಪ್ರದರ್ಶಿಸುತ್ತಾರೆ. ಆದ್ದರಿಂದ ಈ ಹಂತವನ್ನು ಸೃಜನಾತ್ಮಕ ಹಂತ ಎನ್ನುವರು.

ಉತ್ತರ ಬಾಲ್ಯ (ಪೂರ್ವ ತಾರುಣ್ಯದ) ದ ಲಕ್ಷಣಗಳು:

       ಉತ್ತರ ಬಾಲ್ಯವನ್ನು ಪೋಷಕರು ತೊಂದರೆಯನ್ನುಂಟುಮಾಡುವ ಅಥವಾ ಜಗಳಗಂಟಿತನದ ಹಂತ ಎಂತಲೂ, ಶಿಕ್ಷಣ ತಜ್ಙರು ಪ್ರಾಥಮಿಕ ಶಾಲಾ ಹಂತ ಎಂತಲೂ, ಮನೋವಿಜ್ಞಾನಿಗಳು ಕೂಟಯುಗ, ಅನುಸರಣೆಯ ಹಂತ ಹಾಗೂ ಸೃಜನಾತ್ಮಕ ಹಂತ ಎಂದು ಗುರ್ತಿಸುತ್ತಾರೆ.

1.     ಈ ಹಂತ ನಿಧಾನವಾದ ಹಾಗೂ ಏಕ ಪ್ರಕಾರವಾದ ಬೆಳವಣಿಗೆಯ ಹಂತ, ಇದು ಆರೋಗ್ಯ, ಪೋಷಣೆ, ನಿರೋಧಕ ಶಕ್ತಿ ಮತ್ತು ಅವರ ಲಿಂಗದಿಂದ ಪ್ರಭಾವಿತವಾಗುತ್ತದೆ.

2.     ಉತ್ತರ ಬಾಲ್ಯದ ಕೌಶಲಗಳೆಂದರೆ ಸ್ವಸಹಾಯ ಕೌಶಲಗಳು, ಸಾಮಾಜಿಕಾ ನೆರವಿನ ಕೌಶಲಗಳು, ಶಾಲಾ ಕೌಶಲಗಳು ಮತ್ತು ಆಟದ ಕೌಶಲಗಳು.

3.     ಈ ಹಂತದ ಮಕ್ಕಳು ತಮ್ಮ ಭಾವನೆಗಳ ಮೇಲೆ ನಿಯಂತ್ರಣ ಸಾಧಿಸಬಲ್ಲರು ಮತ್ತು ಸಮಾಜ ಒಪ್ಪುವ ರೀತಿಯಲ್ಲಿ ಅವುಗಳನ್ನು ವ್ಯಕ್ತಪಡಿಸಬಲ್ಲರು.

4.     ಉತ್ತರ ಬಾಲ್ಯವನ್ನು ಕೂಟ ಯುಗ ಎಂದು ಕರೆಯುತ್ತಾರೆ, ಏಕೆಂದರೆ ಮಕ್ಕಳು ಯಾವಾಗಲೂ ಸಮ ವಯಸ್ಕರೊಂದಿಗೆ ವಿವಿಧ ಚಟುವಟಿಕೆಗಳಲ್ಲಿ ಪಾಲ್ಗೋಳ್ಳಲು ಇಚ್ಚಿಸುತ್ತಾರೆ ಮತ್ತು ಯಾವಾಗಲೂ ತಮಗೆ ಇಷ್ಟವಾದ ಗುಂಪಿನಲ್ಲಿರಲು ಬಯಸುತ್ತಾರೆ.

5.     ಇದನ್ನು ಅನುಸರಣೆಯ ಹಂತ ಎನ್ನುವರು, ಏಕೆಂದರೆ ಈ ಹಂತದ ಮಕ್ಕಳು ತಮ್ಮ ನಡೆ ನುಡಿ, ಮಾತು ಮತ್ತು ವರ್ತನೆಗಳಲ್ಲಿ ತಮ್ಮ ಗುಂಪು ಒಪ್ಪಿಕೊಂಡ ಮಾನದಂಡಗಳನ್ನು ಅನುಸರಿಸುತ್ತಾರೆ.

6.     ಈ ಹಂತವನ್ನು ಸೃಜನಶೀಲ ಹಂತ ಎನ್ನುವರು, ಸೃಜನಶೀಲ ಅಭಿವ್ಯಕ್ತಿ ಪೂರ್ವಬಾಲ್ಯದಲ್ಲಿ ಪ್ರಾರಂಭವಾದರೂ ಸಹಾ, ಮೂಲ ಕಾರ್ಯದಲ್ಲಿ ಚಟುವಟಿಕೆಗಳನ್ನು ಕೈಗೊಳ್ಳುವ ಸಾಮರ್ಥ್ಯ ಈ ಹಂತದಲ್ಲಿ ಕಂಡುಬರುತ್ತದೆ.

7.     ಪರಿಕಲ್ಪನೆಗಳ ನಿಖರತೆ ಹಾಗೂ ಅವುಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಉತ್ತರ ಬಾಲ್ಯದಲ್ಲಿ ತೀವ್ರಗತಿಯಲ್ಲಿ ಹೆಚ್ಚಾಗುವುದು ಕಂಡುಬರುತ್ತದೆ. ಇದಕ್ಕೆ ಕಾರಣಗಳೆಂದರೆ ಅವರ ಬೌದ್ಧಿಕ ಸಾಮರ್ಥ್ಯದಲ್ಲಿ ಹೆಚ್ಚಳ ಮತ್ತು ಅವರಿಗೆ ದೊರೆಯುವ ಹೆಚ್ಚಿನ ಕಲಿಕೆಯ ಅವಕಾಶಗಳು.

8.     ಉತ್ತರ ಬಾಲ್ಯದಲ್ಲಿ ಮಕ್ಕಳ ನೀತಿ ಸಂಹಿತೆಗಳು ತಾವು ಪಾಲ್ಗೊಂಡಿರುವ ಗುಂಪಿನ ನೈತಿಕ ಮಾನದಂಡಗಳು ಮತ್ತು ಅವರ ಅಂತಃ ಪ್ರಜ್ಞೆಯಿಂದ ಪ್ರಭಾವಿತವಾಗುತ್ತವೆ, ನೈತಿಕ ಪ್ರಜ್ಞೆ ಉತ್ತರ ಬಾಲ್ಯದ ಮಕ್ಕಳಲ್ಲಿ ಕಂಡು ಬಂದರೂ ಸಹಾ, ಮನೆ, ಶಾಲೆ ಮತ್ತು ನೆರೆಹೊರೆಯಲ್ಲಿ ದುರ್ನಡತೆಗಳು ಸಾಮಾನ್ಯವಾಗಿ ಕಂಡುಬರುತ್ತವೆ.

ಬಾಲ್ಯದ ಸಾರ್ವತ್ರಿಕ ಲಕ್ಷಣಗಳು:

1.     ಪೋಷಕರ ದೃಷ್ಠಿಯಲ್ಲಿ ಬಾಲ್ಯ ಒಂದು ಸಮಸ್ಯೆಯ ಕಾಲ ಎಂದರೂ ತಪ್ಪಾಗಲಾರದು. ಈ ಹಂತದಲ್ಲಿ ಮಗುವಿನ ವೈಯಕ್ತಿಕ ಪ್ರಕಟವಾಗತೊಡಗುತ್ತದೆ. ತನ್ನಿಂದ ಅಸಾಧ್ಯವಾದ ಕಾರ್ಯಗಳನ್ನು ಮಾಡಲು ಕೂಡ ಈ ಹಂತದ ಮಗು ಪ್ರಯತ್ನಿಸುತ್ತದೆ. ಮಗುವಿನ ವರ್ತನೆಯನ್ನು ರೂಪಿಸುವ ಸಮಸ್ಯೆಗಳನ್ನು ಪೋಷಕರು ಎದುರಿಸಬೇಕಾಗುತ್ತದೆ.

2.     ಬಾಲ್ಯತನವು ಆಟಗಳಲ್ಲಿ ನಿರತವಾಗುವಂತಹ ಕಾಲ, ಆದ್ದರಿಂದ ಈ ಹಂತದ ಮಕ್ಕಳು ತಮ್ಮ ಹೆಚ್ಚಿನ ಸಮಯವನ್ನು ಆಟಿಕೆಗಳಲ್ಲಿ ಬಳಸಿ ಆಟವಾಡುವುದರಲ್ಲಿ ಕಾಲ ಕಳೆಯುತ್ತಾರೆ.

3.     ಬಾಲ್ಯವನ್ನು ಪೂರ್ವ ಬಾಲ್ಯ ಮತ್ತು ಉತ್ತರ ಬಾಲ್ಯ ಎಂದು ವಿಭಾಗಿಸಿದ್ದು, ಶಿಕ್ಷಣ ತಜ್ಞರ ತಜ್ಞರ ದೃಷ್ಠಿಯಲ್ಲಿ ಪೂರ್ವಬಾಲ್ಯ ಶಾಲಾ ಪೂರ್ವ ಯುಗ. ಈ ಹಂತದ ಮಕ್ಕಳು ಶಿಶುವಿಹಾರಗಳಲ್ಲಿ ಇದ್ದರೂ ಕೂಡ ಪ್ರಾಥಮಿಕ ಶಾಲೆಗಳಲ್ಲಿ ಇರುವ ಅಧ್ಯಯನದ ಒತ್ತಡಕ್ಕೆ ತುತ್ತಾಗುವುದಿಲ್ಲ. ಪ್ರಾಥಮಿಕ ಶಾಲೆಯನ್ನು ಪ್ರವೇಶಿಸಲು ಅಗತ್ಯವಾದ ಪೂರ್ವಸಿದ್ದತೆ ಮಾತ್ರ ಈ ಹಂತದಲ್ಲಿಆಗುತ್ತದೆ.

4.     ಮನೋವಿಜ್ಞಾನಿಗಳ ದೃಷ್ಠಿಯಲ್ಲಿ ಇದು ಕೂಡ ಪೂರ್ವ ಯುಗ. ಈ ಹಂತದ ಮಗು ಯಶಸ್ವಿ ಸಾಮಾಜಿಕ ಸಹಚರ್ಯಕ್ಕೆ ಅಗತ್ಯವಾದ ಕುಶಲತೆಗಳನ್ನು ಕಲಿಸುತ್ತದೆ. ಉತ್ತರ ಬಾಲ್ಯದ ಕೂಟಗಳ ಸದಸ್ಯರಾಗಲು ಇದು ಅತ್ಯಗತ್ಯ.

5.     ಪೂರ್ವಬಾಲ್ಯಾವಸ್ಥೆಯು ಅನ್ವೇಷಣಾ ಮತ್ತು ಅನುಕರಣೆಯ ಯುಗ. ಈ ಹಂತದಲ್ಲಿ ಮಗು ಇತರರ ನಡೆನುಡಿಗಳನ್ನು ಅನುಕರಿಸುವುದರ ಮೂಲಕ ಕಲಿಯುತ್ತದೆ. ಜೀವನದ ಇನ್ನಾವುದೇ ಹಂತದಲ್ಲಿ ಅನುಕರಿಸುವ ಪ್ರವೃತ್ತಿ ಬಾಲ್ಯದಲ್ಲಿರುವಷ್ಟು ಪ್ರಮಾಣದಲ್ಲಿರುವುದಿಲ್ಲ.

6.     ಪೂರ್ವಬಾಲ್ಯ ಮುಗಿಯುತ್ತಿದ್ದಂತೆ ಮಗುವಿನ ಉತ್ತರಬಾಲ್ಯ ಪ್ರಾರಂಭವಾಗಿ ಪ್ರಾಥಮಿಕ ಶಾಲೆಗೆ ಮಗು ದಾಖಲಾಗುತ್ತದೆ. ಪಠ್ಯ ಮತ್ತು ಸಹಪಠ್ಯ ಜ್ಞಾನವನ್ನು ಪಡೆಯಲು ತವಕಿಸುತ್ತದೆ.

7.     ಬಾಲ್ಯಾವಸ್ಥೆಯಲ್ಲಿ ಮಕ್ಕಳು ತಮ್ಮಸಮಾನ ಮಯಸ್ಕರ ಮನ್ನಣೆಗೆ ಪಾತ್ರರಾಗುವರು. ತಮ್ಮ ಓರಗೆಯವರ ಜೊತೆ ನಡೆನುಡಿಗಳನ್ನು ಹಂಚಿಕೊಳ್ಳುವರು.

8.     ಆಟಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡುವರಲ್ಲದೆ ಆಟಿಗೆಗಳನ್ನು ವಿನಿಮಯ ಮಾಡಿಕೊಳ್ಳುತ್ತಾ ಕೂಟದಲ್ಲಿ ಸದಸ್ಯತ್ವ ಪಡೆಯುವರು.

ಬಾಲ್ಯಾವಸ್ಥೆಯ ಗುಣಲಕ್ಷಣಗಳು

1.     ಪೂರ್ವಬಾಲ್ಯವು ನಿಧಾನ, ಸ್ಥಿರ ಹಾಗೂ ಏಕರೂಪದ ದೈಹಿಕ ಬೆಳವಣಿಗೆಯ ಅವಧಿಯಾಗಿದೆ.

2.     ಮಗುವು ಪೂರ್ವಶಾಲಾ ಹಂತದಲ್ಲಿ ನಡೆಯುವುದು, ಓಡುವುದು, ನೆಗೆಯುವುದು, ಕುಪ್ಪಳಿಸುವುದು, ಹತ್ತುವುದು ಮುಂತಾದ ಸ್ನಾಯು ಸಂಬಂಧ ಕೌಶಲ್ಯಗಳನ್ನು ಬೆಳೆಸಿಕೊಳ್ಳುತ್ತದೆ.

3.     ಗಂಡು, ಹೆಣ್ಣು ಎಂಬ ಭೇದವಿಲ್ಲದೆ ಒಟ್ಟಿಗೆ ಆಟದಲ್ಲಿ ತೊಡಗುವರು.

4.     ಇತರರೊಂದಿಗೆ ಸಹಕಾರದಿಂದ ನಡೆದುಕೊಳ್ಳಲು ಕಲಿಯುವರು.

5.     ಭಾವನೆಗಳು ತಾತ್ಕಾಲಿಕ, ಮಗುವು ಅದರ ಭಾವನೆಗಳನ್ನು ಬಹು ಬೇಗ ವರ್ಗಾಯಿಸುತ್ತದೆ.

6.     ನೆನಪಿನ ಶಕ್ತಿಯು ಶೀಘ್ರಗತಿಯಲ್ಲಿ ಜಾಸ್ತಿಯಾಗುತ್ತಾ ಹೋಗುತ್ತದೆ.

7.     ಸೃಜನಶೀಲತೆ ಮತ್ತು ಊಹಾಶಕ್ತಿ ಬೆಳೆಯಲು ಶುರುವಾಗುತ್ತದೆ.

8.     ಮೂರ್ತ ವಸ್ತುಗಳ ಸಂಬಂಧಿಸಿದಂತೆ ಆಲೋಚನಾ ಹಾಗೂ ತಾರ್ಕಿಕತೆಯು ವಿಕಾಸಗೊಳ್ಳುತ್ತದೆ.

9.     ಉತ್ತರ ಬಾಲ್ಯದಲ್ಲಿ ಸಾಮಾಜಿಕ ಅರಿವು ಹೆಚ್ಚಿನ ಪ್ರಮಾಣದಲ್ಲಿಇರುತ್ತದೆ.

10.   ಉತ್ತರ ಬಾಲ್ಯದಲ್ಲಿ ಹುಡುಗರು ಮತ್ತು ಹುಡುಗಿಯರು ಅವರ ಆಸಕ್ತಿ, ಹವ್ಯಾಸ ಮತ್ತು ಆಸೆಗಳಿಗನುಗುಣವಾಗಿ ಪ್ರತ್ಯೇಕ ಗುಂಪುಗಳಾಗಿ ಮಾಡಿಕೊಳ್ಳುವರು.

11.   ಉತ್ತರ ಬಾಲ್ಯದಲ್ಲಿ ಮಾತು, ಉಚ್ಚಾರಣೆ, ಶಬ್ಧಭಂಢಾರ, ಅರ್ಥೈಸುವಿಕೆ ಮುಂತಾದ ವಿಭಾಗಗಳಲ್ಲಿ ಶಿಘ್ರಗತಿಯಲ್ಲಿ ಸುಧಾರಣೆಯಾಗುತ್ತದೆ.

ದೈಹಿಕ ಮತ್ತು ಮಾನಸಿಕ ವಿಕಾಸ ಮತ್ತು ಶೈಕ್ಷಣಿಕ ನಿಹಿತಾರ್ಥಗಳು

ಪೂರ್ವಬಾಲ್ಯದಲ್ಲಿ ದೈಹಿಕ ವಿಕಾಸ:

  • ಹಸುಳೆತನದ ಶೀಘ್ರಗತಿಯ ಬೆಳವಣಿಗೆಯ ವೇಗಕ್ಕೆ ಹೋಲಿಸಿದಾಗ ಪೂರ್ವಬಾಲ್ಯದ ಬೆಳವಣಿಗೆ ನಿಧಾನ ಗತಿಯಲ್ಲಿ ಸಾಗುತ್ತದೆ. ಪೂರ್ವಬಾಲ್ಯದಲ್ಲಿ ಬೆಳವಣಿಗೆಯ ವೇಗ ಸಾಮಾನ್ಯವಾಗಿ ಒಂದೇ ವೇಗದಲ್ಲಿರುತ್ತದೆ. ಈ ಹಂತದ ಮಕ್ಕಳ ಎತ್ತರದಲ್ಲಿ ಆಗುವ ವಾರ್ಷಿಕ ಸರಾಸರಿ ಹೆಚ್ಚಳ ಸುಮಾರು 3 ಅಂಗುಲಗಳು, ಮಗುವಿನ ತೂಕದ ಹೆಚ್ಚಳ ಈ ಹಂತದಲ್ಲಿ ನಿಧಾನವಾಗಿರುತ್ತದೆ. ತೂಕದಲ್ಲಿ ಆಗುವ ವಾರ್ಷಿಕ ಸರಾಸರಿ ಹೆಚ್ಚಳ ಸುಮಾರು 2 ರಿಂದ 2 ½ ಕಿಲೋಗ್ರಾಂಗಳು 5 ನೇ ವರ್ಷದ ಕೊನೆಯಲ್ಲಿ ಹುಡುಗಿಯರು ಅದೇ ವಯಸ್ಸಿನ ಹುಡುಗರಿಗಿಂತ ಕಡಿಮೆ ಎತ್ತರ ಮತ್ತು ತೂಕ ಹೊಂದಿರುತ್ತಾರೆ.
  • ಮಗು ವಯಸ್ಕನ ರೀತಿಯ ದೇಹದ ಅಂಗಾಂಗಗಳ ಪ್ರಮಾಣವನ್ನು ಪಡೆಯಲು ಪ್ರಾರಂಭಿಸುತ್ತದೆ. ಕಾಲುಗಳ ಬೆಳವಣಿಗೆ ಶೀಘ್ರಗತಿಯಲ್ಲಿರುತ್ತದೆ ಮತ್ತು ಕಾಲುಗಳು ಅದರ ಎತ್ತರದ ಅರ್ಧದಷ್ಟನ್ನು ಸೂಚಿಸುತ್ತವೆ. ಶಿರದ ಬೆಳವಣಿಗೆ ನಿಧಾನ ಹಾಗೂ ಮುಂಡದ ಬೆಳವಣಿಗೆ ಮಧ್ಯಮ ವೇಗದಲ್ಲಿರುತ್ತದೆ.
  • ಈ ಹಂತದಲ್ಲಿ ಕಂಡುವರುವ ಗತಿಶೀಲನಾ ಚಟುವಟಿಕೆಗಳೆಂದರೆ ಏರುವುದು, ಜಿಗಿತ, ನೆಗೆಯುವುದು, ಸುತ್ತುವುದು, ಹಗ್ಗ ಹಾರುವುದು, ಬಾಲ್‌ ಎಸೆಯುವುದು ಮತ್ತು ಹಿಡಿಯುವುದು ಇತ್ಯಾದಿ.
  •  ಈ ಹಂತದ ಮಗು ಹಲವಾರು ದೈಹಿಕ ಹಾಗೂ ಶಾರೀರಿಕ ಬದಲಾವಣೆಗೊಳಗಾಗುತ್ತಾನೆ. ಸ್ನಾಯುಗಳು ಶೀಘ್ರಗತಿಯಲ್ಲಿ ಬೆಳೆಯುತ್ತದೆ. ದೊಡ್ಢ ಸ್ನಾಯುಗಳು, ಚಿಕ್ಕ ಹಾಗೂ ಸೂಕ್ಷ್ಮ ಸ್ನಾಯುಗಳಿಗಿಂತ ಹೆಚ್ಚು ಬೆಳವಣಿಗೆಯಾಗುತ್ತದೆ. ಉಸಿರಾಟ ಕ್ರಿಯೆ, ಹೃದಯ ಬಡಿತ ಮತ್ತು ರಕ್ತದ ಒತ್ತಡದಂತಹ ಶರೀರಿಕ ಬದಲಾವಣೆಗಳನ್ನು ಕಾಣುತ್ತೇವೆ. ಮೆದುಳು ಮಯಸ್ಕತನದಲ್ಲಿವ ಸಂಪೂರ್ಣ ತೂಕದ ಶೇ 90 ರಷ್ಟು ಬೆಳವಣಿಗೆಯಾಗಿರುತ್ತದೆ. ಮೆದುಳಿನ ಭಾಗದಲ್ಲಿ ಕಂಡುಬರುವ ನರಬಳ್ಳಿಗಳು ಈ ಹಂತದ ಕೊನೆಗೆ ಪರಿಪಕ್ವವಾಗುತ್ತದೆ.
  • ಪೂರ್ವ ಬಾಲ್ಯದ ಮಗು ಕೆಲವು ಗತಿ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳುತ್ತಾನೆ. ಅವುಗಳೆಂದರೆ ಸ್ವತಃ ಆಹಾರ ಸೇವನೆ, ಸ್ವತಃ ಉಡುಗೆ ಧರಿಸುವುದು, ಸ್ನಾನ ಮಾಡುವುದು, ಹಲ್ಲು ಉಜ್ಜುವುದು, ಗೊಂಬೆಗಳ ಜೊತೆ ಆಟವಾಡುವುದು ಮತ್ತು ಬರವಣಿಗೆಯ ಕೌಶಲಬೆಳೆಸಿಕೊಳ್ಳುವರು.
  • ಪೂರ್ವಬಾಲ್ಯದ ಕೊನೆಯ ವರ್ಷದಲ್ಲಿ ಮಗು ತನ್ನ ಹಾಲು ಹಲ್ಲುಗಳನ್ನು ಕಳೆದುಕೊಳ್ಳುತ್ತಾನೆ ಮತ್ತು ಆ ಜಾಗದಲ್ಲಿ ಶಾಶ್ವತ ಹಲ್ಲುಗಳು ರೂಪುಗೊಳ್ಳುತ್ತವೆ. ಹಾಲು ಹಲ್ಲುಗಳು ಬಿದ್ದು ಶಾಶ್ವತ ಹಲ್ಲುಗಳು ಬರಲು ಪ್ರಾರಂಭವಾಗುತ್ತದೆ.

ಉತ್ತರ ಬಾಲ್ಯದಲ್ಲಿ ದೈಹಿಕ ವಿಕಾಸ:

  • ಉತ್ತರ ಬಾಲ್ಯದ ದೈಹಿಕ ಬೆಳವಣಿಗೆ ನಿಧಾನವಾಗಿ ಹಾಗೂ ಏಕರೂಪವಾಗಿ ಸಾಗುವ ಹಂತ, ಲೈಂಗಿಕ ಪಕ್ವತೆಯ ಬದಲಾವಣೆಗಳು ಪ್ರಾರಂಭವಾದಾಗ ಬೆಳವಣಿಗೆಯ ವೇಗ ಗಣನೀಯವಾಗಿ ಹೆಚ್ಚುತ್ತದೆ. ಎತ್ತರದಲ್ಲಿ ಆಗುವ ವಾರ್ಷಿಕ ಸರಾಸರಿ ಹೆಚ್ಚಳ 2 ರಿಂದ 3 ಅಂಗುಲಗಳು. ತೂಕದ ಹೆಚ್ಚಳದಲ್ಲಿ ಎತ್ತರದ ಹೆಚ್ಚಳಕ್ಕಿಂತ ಹೆಚ್ಚು ವ್ಯತ್ಯಾಸಗಳು ಕಂಡುಬರುತ್ತದೆ. ತೂಕದಲ್ಲಿ ಆಗುವ ವಾರ್ಷಿಕ ಸರಾಸರಿ ಹೆಚ್ಚಳ 2 ರಿಂದ 3 ಕಿಲೋಗ್ರಾಂಗಳು. ಈ ಹಂತದ ಕೊನೆಯ ವೇಳೆಗೆ ಹುಡುಗಿಯರು ಅದೇ ವಯಸ್ಸಿನ ಹುಡುಗರಿಗಿಂತ ದೈಹಿಕ ಬೆಳವಣಿಗೆ ಮತ್ತು ವಿಕಾಸ ದಲ್ಲಿ ಮುಂದಿರುತ್ತಾರೆ. ಶಾರೀರಿಕವಾಗಿ 11 ನೇ ವರ್ಷದಲ್ಲಿ ಹುಡುಗಿಯರು ಹುಡುಗರಿಗಿಂತ ಒಂದು ವರ್ಷ ದೊಡ್ಢವರಾಗಿ ಕಾಣುತ್ತಾರೆ.
  • ಈ ಹಂತದ ಮಕ್ಕಳ ದೇಹದ ಎಲ್ಲಾ ಅಂಗಾಂಗಗಳ ಪ್ರಮಾಣಗಳಲ್ಲಿ ಬದಲಾವಣೆಗಳನ್ನು ಕಾಣುತ್ತೇವೆ. ಹಾಲು ಹಲ್ಲುಗಳು ಉದುರಿ ಶಾಶ್ವತ ಹಲ್ಲುಗಳು ಮೂಡುವುದರ ಮೂಲಕ ಮುಖದ ರೂಪವನ್ನು ಬದಲಾಯಿಸುತ್ತದೆ, ಹಣೆ ಚಪ್ಪಟೆಯಾಗುವುದು, ಮೂಗು ಚೂಪಾಗುವುದು ಮತ್ತು ಎದೆ ಅಗಲವಾಗುವುದು ವೀಕ್ಷಿಸಬಹುದಾದ ಕೆಲವು ಬದಲಾವಣೆಗಳು.
  • ಮಕ್ಕಳು ಕೆಲವು ಗತಿಶೀಲನಾ ಚಟುವಟಿಕೆಗಳ ಮೂಲಕ ಆನಂದಿಸುತ್ತಾರೆ. ಅವುಗಳೆಂದರೆ ಓಡುವುದು, ನೆಗೆಯುವುದು, ಬೆನ್ನಟ್ಟುವ ಆಟ ಹಾಗೂ ಜಾರುವ ಆಟ, ಯಾರ ಸಹಾಯವಿಲ್ಲದೆ ಸ್ನಾನ ಮಾಡುವುದು, ಬಟ್ಟೆ ಹಾಕಿಕೊಳ್ಳುವುದು ಇತ್ಯಾದಿ. ಚಿಕ್ಕ ಸ್ನಾಯುಗಳ ಸಮನ್ವಯದಿಂದ ಆಡುವ ಆಸಕ್ತಿ ತೋರುತ್ತಾರೆ. ಉದಾ: ಗೋಲಿ ಆಟ ಮತ್ತು ಚಲಿಸುತ್ತಿರುವ ವಸ್ತುಗಳನ್ನು ಗುರಿಯಿಟ್ಟು ಹೊಡೆಯುವುದು ಇತ್ಯಾದಿ. ಬರವಣಿಗೆ ಕೌಶಲ ಹೆಚ್ಚಾಗುತ್ತದೆ. ಕಲಿಕೆಗೆ ಅವಕಾಶ ದೊರೆತರೆ ಈಜುವುದು ಮತ್ತು ಸೈಕಲ್‌ ಸವಾರಿ ಮಾಡುವುದನ್ನು ಕಲಿಯಬಲ್ಲರು.
  • ಈ ಹಂತದಲ್ಲಿ ಕಂಡುಬರುವ ಗಮನಾರ್ಹ ಬದಲಾವಣೆಗಳೆಂದರೆ- ಹೆಚ್ಚಾದ ಕರಕೌಶಲ, ಹೆಚ್ಚಾದ ಶಕ್ತಿ ಹಾಗೂ ಆಯಾಸಕ್ಕೆ ಪ್ರತಿರೋಧ, ಆಟಗಳಿಗೆ ಸಂಬಂಧಿಸಿದಂತೆ ನಿಖರತೆ ಮತ್ತು ತಾಳ್ಮೆ ಬೆಳೆಸಿಕೊಳ್ಳುತ್ತಾರೆ.
  • ಈ ಹಂತದ ಕೊನೆಯ ಹೊತ್ತಿಗೆ ಕೆಲವು ಹುಡುಗಿಯರಲಿ ಲೈಂಗಿಕ ಪರಿಪಕ್ವತೆ ಕಂಡುಬರುತ್ತದೆ. ಹುಡುಗಿಯರು ತಮ್ಮ ಮೈಮಾಟದ ಬಗ್ಗೆಸ್ವಯಂ ಪ್ರಜ್ಞೆ ಬೆಳೆಸಿಕೊಳ್ಳುತ್ತಾರೆ. ಹಲವು ಮಕ್ಕಳು ಆಟಗಳು ಮತ್ತು ಕ್ರೀಡಗಳಲ್ಲಿ ನೇರವಾಗಿ ಪಾಲ್ಗೋಳ್ಳದೆ ಕೇವಲ ಪೋಷಕರಾಗಿರುತ್ತಾರೆ.

ಪೂರ್ವಬಾಲ್ಯದಲ್ಲಿ ಬೌದ್ಧಿಕ ವಿಕಾಸ:

        ಮಗುವಿನ ಬೌದ್ಧಿಕ ವಿಕಾಸವು 2 ವರ್ಷಗಳ ವಯಸ್ಸಿನ ನಂತರ ಹೆಚ್ಚು ಚುರುಕಾಗುತ್ತದೆ ಏಕೆಂದರೆ ಈ ಹಂತದಲ್ಲಿ ಮಗು ತನ್ನ ಪರಿಸರವನ್ನು ಅನ್ವೇಷಿಸಲು ಪ್ರಾರಂಭಿಸುತ್ತಾನೆ ಮತ್ತು ಅನುಭವಗಳನ್ನು ಪಡೆಯುತ್ತಾನೆ. ಪೂರ್ವಬಾಲ್ಯದ ಮಕ್ಕಳ ಬೌದ್ಧಿಕ ವಿಕಾಸದಲ್ಲಿ ಈ ಕೆಳಕಂಡ ಬದಲಾವಣೆಗಳನ್ನು ಕಾಣಬಹುದು.

  1. ಮಗು ಭೌತಿಕ ಹಾಗೂ ಕೌಟುಂಬಿಕ ಸಂಬಂಧಗಳಂತಹ ಸಾಮಾಜಿಕ ನೈಜತೆಯ ಪರಿಕಲ್ಪನೆಗಳನ್ನು ಬೆಳೆಸಿಕೊಳ್ಳುತ್ತಾನೆ.
  2. ಪೂರ್ವಬಾಲ್ಯದ ಅಂತ್ಯದ ವೇಳೆಗೆ ಮಗು ಗಾತ್ರ, ಆಕಾರ, ಬಣ್ಣ, ಸಮಯ ಮತ್ತು ದೂರ ಮುಂತಾದ ಪರಿಕಲ್ಪನೆಗಳನ್ನು ಪ್ರತ್ಯಕ್ಷಾನುಭವಗಳ ಮೂಲಕ ಪಡೆಯುತ್ತಾನೆ.
  3. ಭಾಷಾ ವಿಕಾಸ ತೀವ್ರಗತಿಯಲ್ಲಿರುತ್ತದೆ. ಈ ಹಂತದ ಕೊನೆಯ ವೇಳೆಗೆ ಮಗು ಸುಮಾರು 2500 ಪದಗಳ ಪದ ಸಂಪತ್ತನ್ನು ಹೊಂದಿರುತ್ತಾನೆ.
  4. ಜ್ಞಾಪಕ ಶಕ್ತಿ ತೀವ್ರಗತಿಯಲ್ಲಿ ಹೆಚ್ಚಾಗುತ್ತದೆ. ಈ ಹಂತದ ಮಕ್ಕಳು ಹೆಚ್ಚಾಗಿ ಕಂಠಪಾಠದ ಮೂಲಕ ಕಲಿಯುತ್ತಾರೆ.
  5. ಮಾಕ್ಕಳು ನರ್ಸರಿ ಪ್ರಾಸಪದ್ಯ ಗಳನ್ನು ಚೆನ್ನಾಗಿ ನೆನಪಿಟ್ಟುಕೊಳ್ಳಬಲ್ಲರು.
  6. ಮಕ್ಕಳಲ್ಲಿ ಸೃಜನಶೀಲತೆ ವಿಕಾಸವಾಗುತ್ತದೆ ಮತ್ತು ಕಲ್ಪನಾಶಕ್ತಿ ಬೆಳೆಯಲು ಪ್ರಾರಂಭವಾಗುತ್ತದೆ.
  7. ಮಕ್ಕಳ ಸೃಜನಶೀಲ ಸಾಮರ್ಥ್ಯವನ್ನು ಅವರ ಆಟಗಳಲ್ಲಿ ಕಾಣಬಹುದು. ಮಕ್ಕಳು ಮಣ್ಣಿನ, ಬಟ್ಟೆಯ, ಕಡ್ಡಿಗಳ ಹಾಗೂ ಇಟ್ಟಿಗೆಗಳಿಂದ ತಯಾರಿಸಬಲ್ಲರು. ಕೆಲವು ಮಕ್ಕಳು ಉತ್ತಮ ಚಿತ್ರರಚನೆಯ ಮೂಲಕ ತಮ್ಮ ಸೃಜನಶೀಲ ಸಾಮರ್ಥ್ಯವನ್ನು ವ್ಯಕ್ತಪಡಿಸಬಲ್ಲರು.
  8. ಸರಳ ವಿಷಯಗಳಿಗೆ ಸಂಬಂದಿಸಿದಂತೆ ಆಲೋಚನೆ ಹಾಗೂ ತಾರ್ಕಿದ ಸಾಮರ್ಥ್ಯಗಳ ಬೆಳವಣಿಗೆಯಾಗುತ್ತದೆ.
  9. ಹೆಚ್ಚುಕಾಲ ಒಂದೇ ಚಟುವಟಿಕೆಯಲ್ಲಿ ಪಾಲ್ಗೊಳ್ಳುವ ಸಾಮರ್ಥ್ಯ ಗಳಿಸಿಕೊಳ್ಳುತ್ತಾನೆ.
  10. ತನ್ನ ಪರಿಸರದ ಬಗ್ಗೆ ಹಲವಾರು ಪ್ರಶ್ನೆಗಳನ್ನು ಕೇಳುತ್ತಾನೆ.
  11. ಭಾಷೆಯಲ್ಲಿ, ಚಿತ್ರಗಳಲ್ಲಿ, ಸಾಂಕೇತಿಕ ಆಟಗಳಲ್ಲಿ ಮತ್ತು ಸಮಸ್ಯೆ ಪರಿಹಾರ ಸಂದರ್ಭಗಳಲ್ಲಿ ತನ್ನದೇ ಆದ ಸಂಕೇತಗಳನ್ನು ಬಳಸಿಕೊಳ್ಳಬಲ್ಲನು.
  12. ಈ ಹಂತದಲ್ಲಿ ಜ್ಞಾನಾತ್ಮಕ ವಿಕಾಸದ ಪ್ರಮುಖ ಲಕ್ಷಣವೆಂದರೆ ಹಲವಾರು ಹೊಸ ಪರಿಕಲ್ಪನೆಗಳು ರೂಪಿತವಾಗುವುದು.

ಉತ್ತರ ಬಾಲ್ಯದಲ್ಲಿ ಬೌದ್ಧಿಕ ವಿಕಾಸ:

ಉತ್ತರ ಬಾಲ್ಯದ ಮಕ್ಕಳ ಬೌದ್ದಿಕ ವಿಕಾಸದಲ್ಲಿ ಈ ಕೆಳಕಂಡ ಬದಲಾವಣೆಗಳನ್ನು ನಾವು ಕಾಣಬಹುದು.

  1. ಈ ಹಂತದ ಮಗು ತನ್ನ ಹಾಗೂ ಹೊರಗಿನ ವಿಶ್ವದ ಮಧ್ಯೆ ಸ್ಪಷ್ಟ ವ್ಯತ್ಯಾಸ ಕಾಣಲು ಪ್ರಾರಂಭಿಸುತ್ತದೆ. ತನ್ನ ಪರಿಸರದಲ್ಲಿ ನೈಜತೆಯನ್ನು ಕಾಣುತ್ತಾನೆ.
  2. ಈ ಹಂತದ ಕೊನೆಯ ವೇಳೆಗೆ ಸ್ವಾಭಾವಿಕ ನಿಯಮಗಳ ಪರಿಕಲ್ಪನೆ ಸಂಪೂರ್ಣ ವಿಕಾಸವಾಗುತ್ತದೆ.
  3. ಇದು ಶೀಘ್ರಗತಿಯ ಭಾಷಾ ವಿಕಾಸದ ಹಂತ. ಕ್ರಿಯಾತ್ಮಕ ಪದ ಸಂಪತ್ತು ಹೆಚ್ಚಾಗುವುದರೊಂದಿಗೆ, ತಮ್ಮ ಭಾವನೆಗಳು ಹಾಗೂ ವಿಚಾರಗಳನ್ನು ವ್ಯಕ್ತಪಡಿಸಲು ಸ್ವಂತ ವಾಕ್ಯಗಳನ್ನು ರಚಿಸಬಲ್ಲರು.
  4. ಇದು ಮಾಹಿತಿ ಮತ್ತು ವಿಚಾರಗಳನ್ನು ಸಂಗ್ರಹಿಸುವ ಹಂತ. ಮಗು ಈ ಹಂತಕ್ಕೆ ಶಾಲೆಯನ್ನು ತಲುಪುವುದರಿಂದ ಅವನ ಕಲಿಕಾ ಸಾಮರ್ಥ್ಯ ಮತ್ತು ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ.
  5. ತರ್ಕಿಕ ಆಲೋಚನಾ ಸಾಮರ್ಥ್ಯ ಹೆಚ್ಚಾಗುತ್ತದೆ. ಸರಳ ವಿಚಾರಗಳಿಗೆ ಸಂಬಂಧಿಸಿದಂತೆ ಜ್ಞಾನಾತ್ಮಕ ಕ್ರಿಯೆಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ, ಅಭಿವೃದ್ಧಿಪಡಿಸುವಲ್ಲಿ ಮತ್ತು ಅನ್ವಯಿಸಿಕೊಳ್ಳುವಲ್ಲಿ ಹೆಚ್ಚು ಸಮರ್ಥನಾಗುತ್ತಾನೆ.
  6. ಗಣಿತ ಕೌಶಲದ ಕಾರ್ಯಗಳಾದ ಕೂಡುವುದು, ಕಳೆಯುವುದು, ಗುಣಿಸುವುದು ಮತ್ತು ಭಾಗಿಸುವುದು ಇವುಗಳನ್ನು ಕಲಿಯುತ್ತಾರೆ. ಸರಳ ಭಿನ್ನರಾಶಿಗಳನ್ನು ಅರ್ಥ ಮಾಡಿಕೊಳ್ಳಬಲ್ಲರು ಹಾಗು ಬಳಸಬಲ್ಲರು.
  7. ವಿಜ್ಞಾನದಕಥೆಗಳು ಹಾಗೂ ಯಾಂತ್ರಿಕ ಕ್ರಿಯೆಗಳಲ್ಲಿ ಆಸಕ್ತಿ ಈ ಹಂತದಲ್ಲಿ ತುಂಬಾ ಹೆಚ್ಚಾಗಿರುತ್ತದೆ.
  8. ಕಲಾತ್ಮಕ ಆಟಗಳಲ್ಲಿ ಹೆಚ್ಚಿನ ಅಸಕ್ತಿ ತೋರುತ್ತಾರೆ. ಉದಾ: ಚೆಸ್‌, ಕ್ವಿಜ್‌, ಪದಬಂಧ, ಪದರಚನೆ, ಆಟಗಳು ಇತ್ಯಾದಿ.
  9. ನೈಜ ಘಟನೆಗಳು, ವೈಜ್ಞಾನಿಕ ಹಾಗೂ ಗಣಿತ ವಿಷಯ ಮತ್ತು ಸತ್ಯ ಘಟನೆ ಆಧರಿಸಿದ ಕಥೆಗಳನ್ನು ಓದಲು ಇಚ್ಚಿಸುತ್ತಾರೆ.
  10. ಸುಮಾರು 10 ರಿಂದ 12 ವರ್ಷದ ಮಕ್ಕಳಲ್ಲಿ ಸಾಮಾನ್ಯೀಕರಣಗೊಳಿಸವ ಸಾಮರ್ಥ್ಯ ಕಂಡುಬರುತ್ತದೆ. ಮಕ್ಕಳು ಪ್ರಸ್ತುತ ಘಟನೆಗಳು ಹಾಗೂ ಕಾರ್ಯಾಕಾರಣ ಸಂಬಂಧ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ.

ಮಗುವಿನ ಸಂವೇಗಾತ್ಮಕ ಮತ್ತು ಭಾವನಾತ್ಮಕ ವಿಕಾಸ ಪೂರ್ವಬಾಲ್ಯದಲ್ಲಿ

ಸಂವೇಗಾತ್ಮಕ ವಿಕಾಸ:

      ಸಂವೇಗ ಎಂಬುದು ದೇಹದ ಆಂತರಿಕ ಹಾಗೂ ಬಾಹ್ಯ ಬದಲಾವಣೆಗಳನ್ನೊಳಗೊಂಡ ವ್ಯಕ್ತಿಯ ಕಲಕಿದ ಮನಸ್ಥಿತಿ ಎಂದು ಹೇಳಬಹುದು.

     ಪಿ.ಟಿ. ಯೂಂಗ್‌ ರವರು ನೀಡಿರುವ ವ್ಯಾಖ್ಯೆಯ ಪ್ರಕಾರ “ಸಂವೇಗವೆಂದರೆ ಒಂದು ಜೀವಿಯ ವಿಚಲಿತ ಸ್ಥಿತಿ. ಸ್ವಾಯತ್ತ ನರವ್ಯೂಹದ ಹೆಚ್ಚಾದ ಕ್ರಿಯೆಯಿಂದ ಬಿಡುಗಡೆಯಾಗುವ ರಸ ವಿಶೇಷಗಳನ್ನು ಇದು ಒಳಗೊಂಡಿರುತ್ತದೆ ಮತ್ತು ಸಂವೇಗ ವ್ಯಕ್ತಿಯ ಮಾನಸಿಕ ಸನ್ನಿವೇಶದಲ್ಲಿಯೇ ಉಗಮವಾಗುತ್ತದೆ.” ಇದು ಪ್ರೀತಿ, ಭಯ, ಕೋಪ, ನಗು ಮತ್ತು ಕಣ್ಣೀರು ಇವುಗಳ ಮೂಲಕ ವ್ಯಕ್ತವಾಗುತ್ತದೆ. ಇದು ಸಂತೋಷದ ಅಥವಾ ಖಿನ್ನತೆಯ ಭಾವನೆ, ಮನಸ್ಸಿನ ಆವೇಗ ಹಾಗೂ ಸಂವೇದನೆಯ ಅರಿವನ್ನು ಸಹಾ ಒಳಗೊಳ್ಳುತ್ತದೆ.

ಪೂರ್ವಬಾಲ್ಯದಲ್ಲಿ ಕಂಡುಬರುವ ಸಂವೇಗಗಳ ಗುಣಲಕ್ಷಣಗಳು ಈ ಕೆಳಕಂಡಂತಿವೆ.

  1. ಸಂವೇಗಗಳು ಸರಳ ವಸ್ತುಗಳಿಗೆ ಸಂಬಂಧಿಸಿದಂತೆ ವ್ಯಕ್ತವಾಗುತ್ತದೆ.
  2. ಸಂವೇಗಗಳು ತಾತ್ಕಾಲಿಕವಾಗಿರುತ್ತವೆ. ಈ ಹಂತದ ಮಗು ತನ್ನ ಭಾವನೆಗಳನ್ನು ಬಹಳ ಬೇಗ ಬದಲಾಯಿಸುತ್ತದೆ. ಉದಾಹರಣೆಗೆ ಅಳುತ್ತಿರುವ 3 ವರ್ಷದ ಮಗುವಿಗೆ ಒಂದು ಚಾಕೊಲೇಟ್‌ ಕೊಟ್ಟರೆ, ಅದು ಅಳು ನಿಲ್ಲಿಸಿ ಸಂತೋಷಗೊಳ್ಳುತ್ತದೆ.
  3. ಪೂರ್ವಬಾಲ್ಯದ ಸಂವೇಗಗಳು ಉದ್ಧೀಪನದ ತೀವ್ರತೆಗೆ ಅನುಗುಣವಾಗಿರದೆ ಅತಿ ತೀವ್ರವಾಗಿರುತ್ತವೆ.
  4. ಮಕ್ಕಳಿಗೆ ತಮ್ಮ ಭಾವನೆಗಳನ್ನು ಹಿಡಿತದಲ್ಲಿಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ, ಅವರು ಅಳುವಿಕೆ, ಉಗುರು ಕಚ್ಚುವಿಕೆ, ಹೆಬ್ಬೆರಳು ಚೀಪುವುದು ಮತ್ತು ಮಾತಿನ ತೊಂದರೆ ಮುಂತಾದ ಚಟುವಟಿಕೆಗಳ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ.

ಪೂರ್ವಬಾಲ್ಯದ ಮಕ್ಕಳಲ್ಲಿ ಈ ಕೆಳಕಂಡ ಸಂವೇಗಗಳ ವಿನ್ಯಾಸಗಳನ್ನು ಕಾಣಬಹುದು:

  1. ಕೋಪ: ಮಕ್ಕಳ ಆಟಿಕೆಗಳನ್ನು ಇತರರು ತೆಗೆದುಕೊಂಡಾಗ, ಅವರ ಬಯಕೆಗಳು ಈಡೇರದಿದ್ದಾಗ ಅಥವಾ ಇತರ ಮಕ್ಕಳು ಅವರ ಮೇಲೆ ಆಕ್ರಮಣ ಮಾಡಿದಾಗ ಅವರು ಕೋಪಗೊಳ್ಳುತ್ತಾರೆ. ಈ ಉದ್ದೀಪನಗಳಿಗೆ ಅವರು ಅಳುವುದು, ಕೂಗಾಡುವುದು, ಕಿರುಚುವುದು, ಒಡೆಯುವುದು, ವಸ್ತುಗಳನ್ನು ಬಿಸಾಡುವುದುರ ಮೂಲಕ ತಮ್ಮ ಅನುಕ್ರಿಯೆ ತೋರುತ್ತಾರೆ.
  2. ಭಯ: ಅಪರಿಚಿತ ವ್ಯಕ್ತಿಗಳು, ವಸ್ತುಗಳು ಮತ್ತು ಪ್ರಾಣಿಗಳ ಬಗ್ಗೆ ಭಯಗೊಳ್ಳುತ್ತಾರೆ. ಕೆಲವು ಮಕ್ಕಳಲ್ಲಿ ಕಲ್ಪಿತ ಸೃಷ್ಟಿಗಳು, ದೆವ್ವಗಳು, ಅಪರಾಧಿಗಳ ಬಗ್ಗೆ ಹಾಗೂ ಒಂಟಿಯಾಗಿರಲು ಭಯಗೊಳ್ಳುತ್ತಾರೆ. ಈ ಉದ್ದೀಪನಗಳಿಗೆ ಮಕ್ಕಳು ಅಡಗಿಕೊಳ್ಳುವುದು, ಅಳುವುದು, ಕಿರಿಚುವುದು ಹಾಗೂ ಸನ್ನಿವೇಶದಿಂದ ಹಿಂದೆ ಸರಿಯುವ ಮೂಲಕ ಅನುಕ್ರಿಯೆ ತೋರಿಸುತ್ತಾರೆ.
  3. ಅಸೂಯೆ: ತಂದೆ ತಾಯಿಯರ ಗಮನವನ್ನು ತನ್ನಿಂದ ಕಸಿದುಕೊಳ್ಳಬಲ್ಲ ವ್ಯಕ್ತಿ, ಪ್ರಾಣಿ ಅಥವಾ ವಸ್ತು ಅಸೂಯೆಯ ಉದ್ದೀಪನಗಳು, ಕೆಲವೊಮ್ಮೆತನ್ನ ತಮ್ಮ ಅಥವಾ ತಂಗಿ, ತಂದೆ, ತಾಯಿಯ ಗಮನ ಸೆಳೆದಾಗ ಅವರ ಬಗ್ಗೆಯೂ ಅಸೂಯೆ ಪಡುತ್ತಾನೆ.
  4. ಕುತೂಹಲ: ಮಕ್ಕಳು ಹೊಸ ವಸ್ತುಗಳು ಮತ್ತು ತಮ್ಮ ಪರಿಸರವನ್ನು ಅನ್ವೇಷಿಸುವ ಕುತೂಹಲ ಹೊಂದಿರುತ್ತಾರೆ. ಪೋಷಕರಿಗೆ ಹಾಗೂ ಹಿರಿಯರಿಗೆ ಪ್ರಶ್ನೆಕೇಳುವುದರ ಮೂಲಕ ತಮ್ಮ ಕುತೂಹಲ ವ್ಯಕ್ತಪಡಿಸುತ್ತಾರೆ.
  5. ಮತ್ಸರ: ತನ್ನಲಿಲ್ಲದ ವಸ್ತುಗಳು, ಆಟಿಕೆಗಳು ಇತರರ ಹತ್ತಿರ ಇರುವುದು ಅಥವಾ ಅವರು ಹೆಚ್ಚಿನ ಸೌಲಭ್ಯ ಹೊಂದಿರುವುದು ಮತ್ಸರದ ಉದ್ದೀಪನಗಳು. ಇತರರ ಹತ್ತಿರ ಇರುವ ಆಟಿಕೆಗಳನ್ನು ಕಿತ್ತುಕೊಳ್ಳುವುದು. ಬೇರೆ ಮಕ್ಕಳೊಡನೆ ಜಗಳ ಮಾಡುವುದು ಹಾಗೂ ಹಟಮಾರಿತನ ಇವರ ಅನುಕ್ರಿಯೆಗಳು.
  6. ಹರ್ಷ (ನಲಿವು): ದೈಹಿಕ ದೃಢಕಾಯರಾಗುವುದು, ಆರೋಗ್ಯ ಉತ್ತಮವಾಗಿರುವುದು ಮತ್ತು ಅವರ ಅಗತ್ಯತೆಗಳ ಪೂರೈಕೆಯಾಗುವುದು ಅವರ ಹರ್ಷದ ಉದ್ದೀಪಕಗಳು, ಹಾಸ್ಯ ಹಾಗೂ ಇತರರನ್ನು ಅಣಕಿಸುವುದೂ ಸಹಾ ಅವರಲ್ಲಿ ನಲಿವನ್ನುಂಟುಮಾಡುತ್ತದೆ. ನಗು, ಮುಗುಳ್ನಗೆ, ಚಪ್ಪಾಳೆ, ಅಪ್ಪಿಕೊಳ್ಳುವುದು ಹರ್ಷಾನುಕ್ರಿಯೆಗಳು.
  7. ಪ್ರೀತಿ ಮತ್ತು ವಿಶ್ವಾಸ: ಮಕ್ಕಳು ತಂದೆ-ತಾಯಿಯರು, ಹಿರಿಯರು ಮತ್ತು ಸ್ನೇಹಿತರಿಂದ ಪ್ರೀತಿ ಮತ್ತು ವಿಶ್ವಾಸ ಪಡೆಯುತ್ತಾರೆ. ಇವರು ಸಹಾ ಪೋಷಕರಿಗೆ, ಕುಟುಂಬದ ಹಿರಿಯರಿಗೆ, ಸ್ನೇಹಿತರಿಗೆ, ಸಾಕು ಪ್ರಾಣಿಗಳಿಗೆ ಹಾಗೂ ತಮಗೆ ಸಂತೋಷವನ್ನುಂಟು ಮಾಡುವ ಕೆಲವು ನಿರ್ಜೀವ ವಸ್ತುಗಳಿಗೂ (ಉದಾ: ಟೆಡ್ಡಿ ಗೊಂಬೆ) ಸಹ ಪ್ರೀತಿ ಮತ್ತು ವಿಶ್ವಾಸ ತೋರುತ್ತಾರೆ.

ಸಂವೇಗಾತ್ಮಕ ವಿಕಾಸ- ಉತ್ತರ ಬಾಲ್ಯದಲ್ಲಿ:

    ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿಯೂ ಸಂವೇಗಗಳು ಪ್ರಮುಖ ಪ್ರಾಮುಖ್ಯತೆಯನ್ನು ಪಡೆದಿದೆ. ಭಾವನೆಗಳಿಲ್ಲದಿದ್ದರೆ ಜೀವನ ಬೇಸರ ಹಾಗೂ ನೀರಸ. ಮಗುವಿಗೆ ವಯಸ್ಸಾಗುತ್ತಿದ್ದಂತೆ ಭಾವನೆಗಳು ಸಹ ಬದಲಾಗುತ್ತವೆ.

  1. ಭಾವನೆಗಳನ್ನು ವ್ಯಕ್ತಪಡಿಸುವಿಕೆಯಲ್ಲಿ ಹಿಂದಿನ ಹಂತಕ್ಕೆ ಹೋಲಿಸಿದಾಗ ಈಗ ಬದಲಾವಣೆ ಕಾಣುತ್ತೇವೆ. ಈ ಹಂತದ ಕೊನೆಯ ವೇಳೆಗೆ ಮಗು ಸಾಮಾಜಿಕ ಸನ್ನಿವೇಶಗಳಲ್ಲಿ ತನ್ನ ಭಾವನೆಗಳನ್ನು ವ್ಯಕ್ತಪಡಿಸುವುದರ ಮೇಲೆ ಹಿಡಿತ ಸಾಧಿಸುತ್ತಾನೆ.
  2. ಸರಳ ವಸ್ತುಗಳ ಹೊರತಾಗಿಯೂ ಭಾವನೆಗಳು ವ್ಯಕ್ತವಾಗುತ್ತವೆ.
  3. ಉತ್ತರ ಬಾಲ್ಯದ ಸಂವೇಗಗಳು ಸಾಂಸರ್ಗಿಕವಾಗಿರುತ್ತವೆ. ಏಕೆಂದರೆ ಈ ಹಂತದ ಮಕ್ಕಳು ಇರತತ ಸಲಹೆ ಕೇಳುವವರು ಮತ್ತು ಇತರರ ಮೇಲೆ ಅವಲಂಬಿತರಾಗಿರುತ್ತಾರೆ.
  4. ಈ ಹಂತದ ಮಕ್ಕಳಲ್ಲಿ ಕೋಪ ಉಂಟಾಗಲು ಕಾರಣಗಳೆಂದರೆ ಆಟಗಳಲ್ಲಿ ಸೋಲುವುದರಿಂದ, ಇತರರು ಅಣಕಿಸುವುದರಿಂದ, ಇತರ ಮಕ್ಕಳೊಡನೆ ಹೋಲಿಸಿದಾಗ ಅವರ ಚಟುವಟಿಕೆಗಳ ಮದ್ಯೆ ಹಿರಿಯರು ತಲೆ ಹಾಕಿದಾಗ, ಹಿರಿಯರು ಮತ್ತು ಸ್ನೇಹಿರತು ಬಯ್ಯುವುದರಿಂದ ಹಾಗೂ ಇವರನ್ನು ಕಡೆಗಣಿಸುವುದರಿಂದ.
  5. ಪೂರ್ವ ಬಾಲ್ಯದಲ್ಲಿದ್ದಂತೆ ಪ್ರಾಣಿಗಳ ಭಯ, ಎತ್ತರದ ಪ್ರದೇಶದ ಭಯ ಹಾಗೂ ಶಬ್ದಗಳ ಭಯ ಈ ಹಂತದಲ್ಲಿ ಮತೆಯಾಗುತ್ತದೆ. ಆದರೆ ಅಗೋಚರ ವಸ್ತುಗಳ ಭಯ, ಕಲ್ಪಿತ ಭಯ, ಅನುತ್ತೀರ್ಣನಾಗುವ ಭಯ, ಬಯ್ಯಿಸಿಕೊಳ್ಳಬಹುದೆಂಬ ಭಯ, ಕತ್ತಲೆಯ ಭಯ ಹಾಗೂ ಒಂಟಿಯಾಗಿರಲು ಭಯ ಈ ಹಂತದಲ್ಲಿ ಕಾಣಿಸಿಕೊಳ್ಳುತ್ತವೆ.
  6. ತಂದೆ-ತಾಯಿಯರು ಮಕ್ಕಳಲ್ಲಿ ಭೇಧ-ಭಾವವನ್ನೆಣಿಸುವುದು ಉತ್ತರ ಬಾಲ್ಯದ ಮಕ್ಕಳಲ್ಲಿ ಅಸೂಯೆಗೆ ಕಾರಣವಾಗುತ್ತದೆ.
  7. ಹರ್ಷ, ನಲಿವು, ಪ್ರೀತಿ, ವಿಶ್ವಾಸ ಮತ್ತು ಕುತೂಹಲದ ಸಂವೇಗಗಳು ಸಹ ಈ ಹಂತದಲ್ಲಿ ಕಂಡುಬರುತ್ತವೆ. ಉತ್ತರ ಬಾಲ್ಯದ ಮಗು ಪ್ರೀತಿ ವಿಶ್ವಾಸವನ್ನು ಪಡೆಯುವಲ್ಲಿ ಮತ್ತು ನೀಡುವಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳುತ್ತಾನೆ. ಸ್ನೇಹಿತರಿಂದ ಪಡೆಯುವಷ್ಟು ಪ್ರೀತಿ ವಿಸ್ವಾಸವನ್ನು ಅವರಿಗೂ ತೋರುತ್ತಾನೆ.

ಸಾಮಾಜಿಕ ವಿಕಾಸ- ಪೂರ್ವ ಬಾಲ್ಯದಲ್ಲಿ

      ಸಾಮಾಜಿಕ ವಿಕಾಸವೆಂದರೆ ಸಮಾಜದ ನಿರೀಕ್ಷಣೆಗಳಿಗೆ ಅನುಗುಣವಾಗಿವರ್ತಿಸುವ ಸಾಮರ್ಥ್ಯವನ್ನುಗಳಿಸುವುದು ಎಂದರ್ಥ, ಸಾಮಾಜಿಕ ಹೊಂದಾಣಿಕೆ ಸಾಮಾಜಿಕ ಹೊಂದಾಣಿಕೆ ಸಮಾಜಿಕ ವಿಕಾಸದ ಅಗತ್ಯವಿದೆ. ಇದು ಮಾನಸಿಕ ಹೊಂದಾಣಿಕೆಯೊಂದಿಗೆ ಸಂಬಂಧ ಹೊಂದಿದೆ. ಏಕೆಂದರೆ ವ್ಯಕ್ತಿ ತನ್ನ ಸಮಾಜ ಹಾಗೂ ಸಂಸ್ಕೃತಿಯ ಚೌಕಟ್ಟಿಗನುಸಾರವಾಗಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಪೂರ್ವ ಬಾಲ್ಯದಲ್ಲಿ ಈ ಕೆಳಕಂಡ ಸಮಾಜಿಕ ಗುಣಲಕ್ಷಣಗಳನ್ನು ಕಾಣಬಹುದಾಗಿದೆ.

  1. ಈ ಹಂತದ ಮಕ್ಕಳಲ್ಲಿ ಸ್ವಾಯತ್ತತೆಯ ಭಾವನೆ ಬೆಳೆಯುತ್ತದೆ. ಸ್ವತಂತ್ರವಾಗಿ ಅವರು ಪರಿಸರವನ್ನು ಅನ್ವೇಷಿಸಲು ಪ್ರಾರಂಭಿಸುತ್ತಾರೆ.
  2. ಸಾಮಾಜಿಕ ಪರಿಸರ ಮನೆಯಿಂದ ಹೊರಗೆ ವಿಸ್ತರಿಸುತ್ತದೆ.
  3. ಈ ಹಂತದ ಮಕ್ಕಳು ಲಿಂಗ ಭೇದವಿಲ್ಲದೆ ಒಟ್ಟಿಗೆ ಆಟವಾಡುತ್ತಾರೆ. ಸಮೂಹ ಆಟಗಳಾದ ಕಣ್ಣಾಮುಚ್ಚಾಲೆ, ಲಗೋರಿ, ಅಡಿಗೆ ಆಟ ಮುಂತಾದವುಗಳಲ್ಲಿ ಚಟುವಟಿಕೆಯಿಂದ ಪಾಲ್ಗೋಳ್ಳುತ್ತಾರೆ. 
  4. ಮಕ್ಕಳು ಇತರರೊಡನೆ ಸಹಕರಿಸುವುದನ್ನು ಕಲಿಯುತ್ತಾರೆ ಮತ್ತು ಸಮಾನ ಆಸಕ್ತಿ ಹಾಗೂ ವ್ಯಕ್ತಿತ್ವದ ಗುಣವುಳ್ಳವರೊಡನೆ ಸ್ನೇಹ ಬೆಳೆಸುತ್ತಾರೆ.  
  5.  ಮಾಯಾಲೋಕದ ಕಥೆಗಳು, ಹಾಸ್ಯದ ಕಥೆಗಳು ಮತ್ತು ಪ್ರಾಣಿಗಳ ಕಥೆಗಳಲ್ಲಿ ಆಸಕ್ತಿ ತೋರುತ್ತಾರೆ.
  6. 3 ರಿಂದ 6 ವರ್ಷದ ಅವಧಿಯಲ್ಲಿ ಆಕ್ರಮಣ ಪ್ರವೃತ್ತಿ, ಜಗಳಗಂಟಿತನ, ವಿರೋಧ ಪ್ರವೃತ್ತಿ ಮುಂತಾದ ಋಣಾತ್ಮಕ ಭಾವನೆಗಳು ಹೆಚಾಗುತ್ತವೆ. ಇವು ಸಾಮಾಜಿಕ ಸನ್ನಿವೇಶದ ಉತ್ಪನ್ನಗಳು. ಹಿರಿಯರ ಹಸ್ತಕ್ಷೇಪ ಹೆಚ್ಚಾದಷ್ಟು ಮಗುವಿನಲ್ಲಿ ಹತಾಶ ಭಾವನೆ ಹೆಚ್ಚಾಗುತ್ತದೆ ಮತ್ತು ಅವನ ವರ್ತನೆ ಹೆಚ್ಚು ಋಣಾತ್ಮಕವಾಗುತ್ತದೆ.
  7. ಮಗು ಸಾಮಾಜೀಕರಣಗೊಳ್ಳುವುದು ಆಟಗಳ ಮೂಲಕ ಒಂಟಿ ಆಟಗಳ ಆಸಕ್ತಿ ಕ್ರಮೇಣ ಬದಲಾಗಿ ಗುಂಪು ಆಟಗಳ ಕಡೆ ಆಸಕ್ತಿ ಹೆಚ್ಚಾಗುತ್ತದೆ. ನರ್ಸರಿ ಶಾಲೆಯ ಪ್ರವೇಶ ಮಕ್ಕಳನ್ನು ತಂದೆ ತಾಯಿಗಳ ಬಂಧನದಿಂದ ಬಿಡಿಸಿ, ಇತರ ಮಕ್ಕಳ ಜೊತೆ ಬೆರೆಯಲು ಹಾಗೂ ಆನಂದಿಸಲು ಅವಕಾಶ ಮಾಡಿಕೊಡುತ್ತದೆ.
  8. ಈ ಹಂತದ ಕೊನೆಗೆ ಅಹಂಕೇಂದ್ರಿತ ಪ್ರವೃತ್ತಿ ಕಡಿಮೆಯಾಗುತ್ತದೆ ಮತ್ತು ಇತರ ಭಾವನೆಗಳಿಗೆ ಸಹಾನುಭೂತಿ ಪ್ರಕಟಿಸುವ ಪ್ರವೃತ್ತಿ ಕಂಡುಬರುತ್ತದೆ.
  9. ಈ ಹಂತದ ಮಗು ತನ್ನ ಎಲ್ಲಾ ಕ್ರಿಯೆಗಳಿಗೂ ಸಾಮಾಜಿಕ ಒಪ್ಪಿಗೆಯನ್ನು ಪಡೆಯಲು ಬಯಸುತ್ತಾರೆ.

ಸಾಮಾಜಿಕ ವಿಕಾಸ- ಉತ್ತರ ಬಾಲ್ಯದಲ್ಲಿ

    ಉತ್ತರ ಬಾಲ್ಯದ ಮಗು ಮಯಸ್ಕರ ಪ್ರಪಂಚಕ್ಕೆ ಅಡಿಯಿಡುವ ಕಾಲವಿದು. ಏಕೆಂದರೆ ಅವರು ಈ ಹಂತದ ಕೊನೆಗೆ ದೈಹಿಕ ಪರಿಪಕ್ವತೆ ಹಾಗೂ ಸಂವಹನ ಕೌಶಲ್ಯಗಳನ್ನು ಕಲಿಯುತ್ತಾನೆ. ಮಗುವಿಗೆ 6 ವರ್ಷಗಳಾದಾಗ ಅವನು ಸ್ವತಂತ್ರವಾಗಿರಲು, ಸ್ವತಃ ಆಹಾರ ಸೇವನೆ ಮಾಡಲು, ಬಟ್ಟೆ ಹಾಕಿಕೊಳ್ಳಲು ಹಾಗೂ ಸ್ನಾನ ಮಾಡಲು ಇಚ್ಚಿಸುತ್ತಾನೆ. ಕುಟುಂಬ ಹಾಗೂ ಶಾಲೆಯಲ್ಲಿ ಇತರ ಮಕ್ಕಳೊಡನೆ ಬೆರೆಯುವ ಸಾಮರ್ಥ್ಯವನ್ನು ಗಳಿಸುತ್ತಾನೆ.

  1. ಸ್ನೇಹ ಈ ಹಂತದ ಮಕ್ಕಳ ಸಾಮಾಜಿಕ ಬೆಳವಣಿಗೆಯಲ್ಲಿ ಸಹಾಯ ಮಾಡುತ್ತದೆ. ಅವರು ಸ್ನೇಹ ಕೂಟಗಳನ್ನು ರಚಿಸಿಕೊಳ್ಳಲು ದಾರಿ ಮಾಡಿಕೊಡುತ್ತದೆ. ಆದ್ದರಿಂದ ಈ ಹಂತವನ್ನು ಕೂಟಯುಗ ಎನ್ನುವರು.
  2. ಈ ಹಂತದ ಮಕ್ಕಳು ತಮ್ಮ ಲಿಂಗದ ಸಮ ವಯಸ್ಕ ಗುಂಪುಗಳನ್ನು ರಚಿಸಿಕೊಳ್ಳುತ್ತಾರೆ ಮತ್ತು ಮನೆಯಿಂದ ಹೊರಗಿರಲು ಬಯಸುತ್ತಾರೆ. ಸಮ ವಯಸ್ಕ ಗುಂಪು ಈ ಹಂತದ ಸಾಮಾಜೀಕರಣದ ಪ್ರಮುಖ ಮಾಧ್ಯಮ.
  3. ಮನೆ ಮತ್ತು ಶಾಲೆಗಳಲ್ಲಿ ನಿಯಮಗಳನ್ನು ಪಾಲಿಸದಿರುವುದು ಈ ಹಂತದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಅವಿಧೇಯತೆಯ ಪ್ರಕರಣಗಳು ತುಂಬಾ ಹೆಚ್ಚಾಗಿರುತ್ತವೆ.
  4. ಹಿರಿಯರ ಮಾನದಂಡಗಳನ್ನು ಮಕ್ಕಳು ತಿರಸ್ಕರಿಸುತ್ತಾರೆ ಮತ್ತು ಸ್ನೇಹವಲಯ ವಿಸ್ತರಿಸುತ್ತದೆ.
  5. ತಾರುಣ್ಯಾವಸ್ಥೆಗಿಂತ ಹೆಚ್ಚು ಬಾಲಾಪರಾಧಗಳು ಈ ಹಂತದಲ್ಲಿ ಪ್ರಾರಂಭವಾಗುತ್ತವೆ.
  6. ಲೈಂಗಿಕ ಭಿನ್ನತೆ ಈ ಹಂತದಲ್ಲಿ ಹೆಚ್ಚು ತೀಕ್ಷಣವಾಗಿರುತ್ತದೆ. ಹುಡುಗಿಯರು ಹುಡುಗಿಯರೊಂದಿಗೆ, ಹುಡುಗರು, ಹುಡುಗರೊಂದಿಗೆ ಮಾತ್ರಾ ಆಟವಾಡುತ್ತಾರೆ. ಅವರ ಆಟಗಳಲ್ಲಿ ಲೈಂಗಿಕ ವ್ಯತ್ಯಾಸವನ್ನು ಕಾಣಬಹುದು.
  7. ಆಟಗಳು ಮತ್ತು ಕ್ರೀಡಗಳು ಸಮಾಜಿಕ ವಿಕಾಸಕ್ಕೆ ಅತ್ಯುತ್ತಮ ಅವಕಾಶ ಒದಗಿಸುತ್ತದೆ. ಮಕ್ಕಳು ಗುಂಪು ಆಟಗಳಲ್ಲಿ ಆಸಕ್ತರಾಗಿರುತ್ತಾರೆ. ಹುಡುಗರು ಮತ್ತು ಹುಡುಗಿಯರು ಅವರದೇ ಆದ ಗುಂಪುಗಳನ್ನು ರಚಿಸಿಕೊಳ್ಳುತ್ತಾರೆ. ಸಮೂಹ ಪ್ರಜ್ಞೆ ವಿಕಾಸವಾಗುತ್ತದೆ ಮತ್ತು ಇದರಿಂದ ಮಗುವಿನಲ್ಲಿ ಸ್ವಾರ್ಥತೆ, ಅಹಂ ಪ್ರವೃತ್ತಿ ಮತ್ತು ಆಕ್ರಮಣ ಪ್ರವೃತ್ತಿ ಕಡಿಮೆಯಾಗುತ್ತದೆ. ಇತರರೊಡನೆ ಸ್ಪರ್ಧಿಸಲು ಮತ್ತು ಸಹಕರಿಸಲು ಕಲಿಯುತ್ತಾನೆ.
  8. ಸಾಮಾಜಿಕ ಪ್ರಜ್ಞೆ ತೀವ್ರವಾಗಿ ವಿಕಾಸವಾಗುತ್ತದೆ. ಮಗು ತನಗೆ ಇಷ್ಟವಾದ ಸಮ ವಯಸ್ಕ ಗುಂಪನ್ನು ಆರಿಸಿಕೊಂಡು, ಅದರಲ್ಲಿ ತಾನು ಭಾಗಿಯಾಗುತ್ತಾನೆ. ತನ್ನ ಕೂಟಕ್ಕೆ ನಷ್ಟನಾಗಿರುತ್ತಾನೆ ಮತ್ತು ಕೂಟದ ನಿಯಮಾವಳಿಗಳಿಗೆ ಬದ್ಧನಾಗಿರುತ್ತಾನೆ.

ನೈತಿಕ ವಿಕಾಸ- ಪೂರ್ವ ಬಾಲ್ಯದಲ್ಲಿ:

        ʼನೈತಿಕʼ ಎಂಬ ಪದ ವ್ಯಕ್ತಿಯ ಆಂತರಿಕ ಸ್ವರೂಪ ಮತ್ತು ಸಮಾಜ ಒಪ್ಪಿದ ಮೌಲ್ಯಗಳಿಗೆ ಅನುಗುಣವಾಗಿರುವ ವೈಯಕ್ತಿಕ ಗುಣಗಳ ವ್ಯವಸ್ಥೆಯನ್ನು ಸೂಚಿಸುತ್ತದೆ. ಕೋಹ್ಲಬರ್ಗ್‌ (1967) ರವರ ಪ್ರಕರ ಮಕ್ಕಳು ತಮ್ಮದೇ ಆದ ನೈತಿಕ ಮಾನಗಳನ್ನು ರೂಪಿಸಿಕೊಳ್ಳುತ್ತಾರೆ. ಈ ನೈತಿಕ ಮಾನಗಳು ಪೋಷಕರು ಅಥವಾ ಸಮವಯಸ್ಕರಿಂದಲೇ ಬರುವ ಅಗತ್ಯವಿಲ್ಲ ಆದರೆ ಅವು ಸಾಮಾಜಿಕ ಪರಿಸರ ಮತ್ತು ಮಕ್ಕಳ ಜ್ಞಾನಾತ್ಮಕ ಸಂರಚನೆಯ ಅಂತರ್‌ ಕ್ರಿಯೆಯಿಂದ ಉದ್ಭವಿಸುತ್ತವೆ.

     ನೈತಿಕ ವಿಕಾಸವೆಂದರೆ, ಸಾಮಾಜಿಕ ಮತ್ತು ನೈತಿಕ ಮೌಲ್ಯಗಳನ್ನು ಕಲಿಯುವುದಾಗಿದೆ. ಇದು ಪ್ರಾಮಾಣಿಕತೆ, ದಯಾಳುತನ, ದಾನ, ಧರ್ಮ, ಸೇವೆ, ವಿಧೇಯತೆ ಇತ್ಯಾದಿ ವಿಷಯಗಳ ಕಲಿಕೆಯನ್ನೊಳಗೊಂಡಿದೆ. ನೈತಿಕ ವಿಕಾಸ ಯಾವುದು ಸರಿ ಮತ್ತು ಯಾವುದು ತಪ್ಪು ಮತ್ತು ಯಾವುದು ಒಳ್ಳೆಯದು ಮತ್ತು ಯಾವುದು ಕೆಟ್ಟದ್ದು ಎಂದು ತಿಳಿಯುವುದಾಗಿದೆ. ಇದು ಆಟಗಳ ನಿಯಮವನ್ನು ಮತ್ತು ಮಕ್ಕಳು ಹಾಗೂ ಅವರ ಸಮವಯಸ್ಕರ ಸಂಬಂಧ, ಮಕ್ಕಳು ಮತ್ತು ಹಿರಿಯರ ಸಂಬಂಧಕ್ಕೆ ಸಂಬಂಧಿಸಿದ ನಿಯಮಗಳನ್ನು ಚರ್ಚಿಸುತ್ತದೆ. ಪೂರ್ವಬಾಲ್ಯದಲ್ಲಿ ವಿಕಾಸಗೊಳ್ಳುವ ನೈತಿಕ ಪರಿಕಲ್ಪನೆಗಳು ಈ ಕೆಳಕಂಡಂತಿವೆ.

  1. ಚಿಕ್ಕ ಮಗು ತನ್ನ ಕ್ರಿಯೆಗಳ ಪರಿಣಾಮಗಳನ್ನು ಆಧರಿಸಿ ಕ್ರಿಯೆಗಳನ್ನು ತಪ್ಪುಗಳೆಂದು ತೀರ್ಮಾನಿಸುತ್ತಾನೆ. ಏಕೆಂದರೆ ಈ ಹಂತದ ಮಗು ಇನ್ನೂ ಮಾನಸಿಕ ಪರಿಪಕ್ವತೆಯನ್ನು ಪಡೆಯದೆ ಇರುವುದರಿಂದ, ಯಾವುದೇ ಕೆಲಸವನ್ನು ಏಕೆ ಮಾಡುತಿದ್ದೇನೆ ಎಂಬುದನ್ನು ತಿಳಿದುಕೊಳ್ಳದೇ ಕೇವಲ ಹೇಗೆ ಮಾಡುವುದು ಎಂಬುದನ್ನು ಮಾತ್ರಾ ಕಲಿಯುತ್ತಾನೆ. ಮಗುವಿಗೆ ಏಕೆ ಕೆಲವು ಕ್ರಿಯೆಗಳು ಮಾತ್ರಾ ಒಳ್ಳೆಯವು ಮತ್ತು ಕೆಲವು ಕೆಟ್ಟವು ಎಂದು ತಿಳಿದಿದ್ದರೂ ಸಹಾ, ಅನುಕರಣೆಯಿಂದ ಕೆಲವು ಒಳ್ಳೆಯವು ಮತ್ತು ಕೆಟ್ಟವು ಎಂದು ತಿಳಿದುಕೊಳ್ಳುತ್ತಾನೆ. ಈ ಜ್ಞಾನ ಅವನು ಬೆಳೆದ ಹಾಗೆ ಅವನ ವರ್ತನೆಯನ್ನು ರೂಪಿಸಿಕೊಳ್ಳಲು ಸಹಾಯಮಾಡುತ್ತದೆ.
  2. ಶಿಸ್ತು ಪಾಲನಾ ವಿಧಾನಗಳು ಮಗುವಿನ ವರ್ತನೆಯ ಮೇಲೆ ಪರಿಣಾಮ ಬೀರುತ್ತವೆ. ನಿರ್ಬಂಧರಹಿತ ಪರಿಸರದಲ್ಲಿ ಬೆಳೆದ ಮಕ್ಕಳು ಸ್ವಾರ್ಥಿಗಳು, ಇತರರ ಹಕ್ಕುಗಳನ್ನು ಮಾನ್ಯ ಮಾಡದವರು, ಆಕ್ರಮಣ ಪ್ರವೃತ್ತಿಯವರು ಆಗಿರುತ್ತಾರೆ ಹಾಗೂ ಸಮವಯಸ್ಕರೊಡನೆ ಉತ್ತಮ ಸಂಬಂಧ ಹೊಂದಿರುವುದಿಲ್ಲ.

           ಅತಿ ನಿರ್ಭಂಧಿತ ಪರಿಸರದಲ್ಲಿ ಬೆಳೆದ ಮಕ್ಕಳು ಹಿರಿಯರ ಎದುರು ವಿಧೇಯರು ಸಮ ವಯಸ್ಕರೊಡನೆ ಆಕ್ರಮಣಶೀಲರು ಆಗಿರುತ್ತಾರೆ. ಆದರೆ ಪ್ರಜಾಪ್ರಭುತ್ವವಾದಿ ಶಿಸ್ತುಪಾಲನಾ ವಿಧಾನದಲ್ಲಿ ಬೆಳೆದ ಮಕ್ಕಳು ಯಾವುದೇ ಕೆಲಸ ತಪ್ಪು ಎಂದು ತಿಳಿದಾಗ ತಮ್ಮನ್ನು ತಾವು ನಿಯಂತ್ರಿಸಿಕೊಳ್ಳುತ್ತಾರೆ, ಬೇರೆಯವರ ಹಕ್ಕುಗಳನ್ನು ಮಾನ್ಯಮಾಡುತ್ತಾರೆ. ಮನೆಯಲ್ಲಿ ಉತ್ತಮ ಸಾಮಾಜಿಕ ವರ್ತನೆ ಹೊಂದಿರುತ್ತಾರೆ ಮತ್ತು ಪೋಷಕರೊಡನೆ ಉತ್ತಮ ಸಂಬಂಧ ಬೆಳೆಸಿಕೊಳ್ಳುತ್ತಾರೆ.

     ಮಗುವಿನ ವ್ಯಕ್ತಿತ್ವದ ಮೇಲೆ ಶಿಸ್ತುಪಾಲನಾ ವಿಧಾನದ ಪ್ರಭಾವ ತುಂಬಾ ಪ್ರಮುಖವಾದುದು. ಅತಿ ದೈಹಿಕ ಶಿಕ್ಷೆಗೆ ಗುರಿಯಾದ ಮಕ್ಕಳ ಮುನಿಸು, ಹಠಮಾರಿತನ ಮತ್ತು ಋಣಾತ್ಮಕ ಮನೋಧೋರಣೆಯ ವರ್ತನೆಯನ್ನು ರೂಢಿಸಿಕೊಳ್ಳುತ್ತಾರೆ. ಚಿಕ್ಕ ಮಯಸ್ಸಿನಲ್ಲಿ ಅತಿ ನಿರ್ಬಂಧಿತ ಶಿಸ್ತು ಇದ್ದರೆ ಅದು ಮಕ್ಕಳಲ್ಲಿ ಅಸಂತೋಷ, ಅಪಸಮಾಯೋಜನೆ ಹಾಗೂ ಬಲಾಪರಾಧಿ ವರ್ತನೆಗಳು ಬೆಳೆಯಲು ಕಾರಣವಾಗುತ್ತದೆ.

ನೈತಿಕ ವಿಕಾಸ- ಉತ್ತರ ಬಾಲ್ಯದಲ್ಲಿ:

      ಉತ್ತರ ಬಾಲ್ಯದ ಮಗುವಿನ ನೀತಿ ಸಂಹಿತೆಯ ನಿರ್ಮಾಣದ ಮೇಲೆ ಅವನು ಸದಸ್ಯನಾಗಿರುವ ಕೂಟದ ನೀತಿ ಸಂಹಿತೆ ಪ್ರಬಲ ಪ್ರಭಾವ ಬೇರುತ್ತದೆ.

  1. ಹೆಚ್ಚಿನ ಬುದ್ದಿಶಕ್ತಿ ಸೂಚ್ಯಾಂಕ ಹೊಂದಿರುವ ಮಕ್ಕಳು ನೈತಿಕ ತೀರ್ಮಾನಗಳನ್ನು ಕೈಗೊಳ್ಳುವಲ್ಲಿ ಮತ್ತು ನೈತಿಕ ವರ್ತನೆಯಲ್ಲಿ ಪರಿಪಕ್ವರಾಗಿರುತ್ತಾರೆ.
  2. ಈ ಹಂತದ ಪ್ರತಿಯೊಂದು ಮಗುವಿಗೂ ಶಿಸ್ತಿನ ಅಗತ್ಯವಿದೆ. ಮಗು ಇನ್ನೂ ಸಂಪೂರ್ಣ ಪರಿಪಕ್ವನಾಗಿರುವುದರಿಂದ ಅಥವಾ ಅನುಭವಗಳ ಕೊರತೆಯಿರುವುದರಿಂದ ವಯಸ್ಕರ ಮಾರ್ಗದರ್ಶನ ಹಾಗೂ ನಿಯಂತ್ರಣವಿಲ್ಲದೆ ಅವನ ಕೆಲಸಗಳನ್ನು ಸಮರ್ಪಕವಾಗಿ ನಿರ್ವಹಿಸಿಕೊಳ್ಳಲಾರ.
  3. ಮಕ್ಕಳು ಚಿಕ್ಕವರಾಗಿದ್ದಾಗ ಪೋಷಕರು ಎಲ್ಲಾ ತಿಳಿದಿದ್ದಾರೆಂದು ಭಾವಿಸುತ್ತಾರೆ. ಉತ್ತರ ಬಾಲ್ಯದ ಕೊನೆಗೆ ವಿವಿಧ ಮಾನದಂಡಗಳ ಅರಿವು ಮತ್ತು ವಿವಿಧ ಶಿಸ್ತಿನ ವಿಧಾನಗಳನ್ನು ಅವರ ಸ್ನೇಹಿತರಿಗೆ ಬಳಸುವುದನ್ನು ತಿಳಿದಾಗ ಇವರು ಪೋಷಕರು ಮತ್ತು ಪೋಷಕರ ಮಾನದಂಡಗಳ ವಿರುದ್ದ ಪ್ರತಿಭಟಿಸುತ್ತಾರೆ.
  4. ಮಗುವಿನ ಪಾಪ ಪುಣ್ಯ ಪ್ರಜ್ಞೆ ಹಾಗೂ ಕ್ಷಮಾಧಾನದ ಪರಿಕಲ್ಪನೆ ಅವನ ಧಾರ್ಮಿಕ ಆಚರಣೆಗಳು ಹಾಗೂ ಅವನು ತಪ್ಪು ಮಾಡಿದಾಗ ಅವನನ್ನು ನಡೆಸಿಕೊಂಡ ರೀತಿಯ ಮೇಲೆ ಅವಲಂಬಿಸಿರುತ್ತದೆ.
  5. ಉತ್ತರ ಬಾಲ್ಯದಲ್ಲಿ ಬಾಲಾಪರಾಧಗಳು ಕಂಡುಬರುತ್ತವೆ. ಸಾಮಾಜಿಕ ಅಂಶಗಳ ಕಾರಣದಿಂದ ಹುಡುಗರಲ್ಲಿ ಹುಡುಗಿಯರಿಗಿಂತ ಹೆಚ್ಚು ಬಾಲಾಪರಾಧಗಳು ಕಂಡುಬರುತ್ತವೆ. ಬಾಲಾಪರಾಧಗಳು ಗ್ರಾಮೀಣ ಪ್ರದೇಶಗಳಿಗಿಂತ ಪಟ್ಟಣ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ.

ಪೂರ್ವ ಬಾಲ್ಯದ ಮಕ್ಕಳಿಗಾಗಿ ಶೈಕ್ಷಣಿಕ ಕ್ರಮಗಳು:

       ಪೂರ್ವ ಬಾಲ್ಯದ ಮಕ್ಕಳಲ್ಲಿ ದೈಹಿಕ, ಬೌದ್ಧಿಕ, ಸಾಮಾಜಿಕ, ಸಂವೇಗಾತ್ಮಕ ಹಾಗೂ ನೈತಿಕ ವಿಕಾಸಗಳು ಪರಿಪೂರ್ಣವಾಗಿ ಆಗುವಂತೆ ಮಾಡಲು ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆಗಳು ಈ ಕೆಳಕಂಡಂತೆ ಕೆಲವು ನಿರ್ದಿಷ್ಟ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ.

  1. ಭಾಷಾವಿಕಾಸ ಪೂರ್ವ ಬಾಲ್ಯದ ಶಿಕ್ಷಣದ ಪ್ರಮುಖ ಲಕ್ಷಣ. ಮಕ್ಕಳಲ್ಲಿ ಭಾಷಾ ಸಾಮರ್ಥ್ಯವನ್ನು ಹೆಚ್ಚಿಸಲು ಶ್ರವಣ ಸಾಮರ್ಥ್ಯ ಮತ್ತು ವಾಕ್‌ ಕೌಶಲಗಳನ್ನು ಬೆಳೆಸಬೇಕು. ಇದರಿಂದ ಮಕ್ಕಳು ಸಾಮಾಜಿಕ ಸಂಪರ್ಕ ಗಳಿಸಿಕೊಳ್ಳಲು ಸಾಧ್ಯವಾಗುತ್ತದೆ.
  2. ಆರೋಗ್ಯಕರವಾದ ದೈಹಿಕ ಬೆಳವಣಿಗೆಗಾಗಿ ದೈಹಿಕ ಶಿಕ್ಷಣಕ್ಕೆ ಹೆಚ್ಚು ಗಮನ ಕೊಡಬೇಕು.
  3. ಆಟಗಳು, ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಅಪೇಕ್ಷಿತ ಸಾಮಾಜಿಕ ಗುಣಗಳನ್ನು ಬೆಳೆಸಬೇಕು.
  4. ಪೂರ್ವ ಬಾಲ್ಯದಲ್ಲಿ ನರ್ಸರಿ ಶಿಕ್ಷಣ ನೀಡಲು ಮನೋವೈಜ್ಞಾನಿಕ ಬೋಧನಾ ವಿಧಾನಗಳು (ಮಾಂಟೆಸ್ಸೋರಿ ವಿಧಾನ, ಕಿಂಡರ್‌ ಗಾರ್ಟನ್‌ ಇತ್ಯಾದಿ) ಸಹಾಯಕವಾಗುತ್ತವೆ. ತರಗತಿಯ ಭಾವನಾತ್ಮಕ ಹಾಗೂ ಸಾಮಾಜಿಕ ವಾತಾವರಣ ಉತ್ತಮವಾಗಿರುವಂತೆ ನೋಡಿಕೊಳ್ಳಬೇಕು. ಕ್ರೀಡಾ ವಿಧಾನ ಮತ್ತು ಚಟುವಟಿಕಾ ವಿಧಾನಗಳ ಮೂಲಕ ಚಿಕ್ಕ ಮಕ್ಕಳಿಗೆ ಶಿಕ್ಷಣ ನೀಡಬೇಕು.
  5. ಪೋಷಕರು ಮತ್ತು ಶಿಕ್ಷಕರು ಮಕ್ಕಳನ್ನು ಪ್ರೋತ್ಸಾಹಿಸಬೇಕು ಮತ್ತು ಅವರಲ್ಲಿರುವ ಉತ್ತಮ ಹವ್ಯಾಸಗಳನ್ನು ಪುರಸ್ಕರಿಸಬೇಕು. ಸಾಧ್ಯವಾದಷ್ಟು ಶಿಕ್ಷೆಗೆ ಅವಕಾಶವಿಲ್ಲದಂತೆ ನೋಡಿಕೊಳ್ಳಬೇಕು.
  6. ಪೂರ್ವ ಪ್ರಾಥಮಿಕ ಶಾಲೆಯ ಶಿಕ್ಷಕರು ಮಕ್ಕಳಿಗೆ ಪರ್ಯಾಯ ಪೋಷಕರಾಗಿದ್ದು ಅವರಲ್ಲಿ ಭದ್ರತೆಯ ಭಾವನೆ ಮೂಡಿಸಬೇಕು ಮತ್ತು ಅವರಿಗೆ ಪೋಷಕರಷ್ಟೇ ಪ್ರೀತಿ ವಿಶ್ವಾಸ ಶಾಲೆಯಲ್ಲಿ ದೊರೆಯುವಂತಾಗಬೇಕು.
  7. ಮಕ್ಕಳು ಧನಾತ್ಮಕ ಭಾವನೆಗಳನ್ನು ರೂಢಿಸಿಕೊಳ್ಳಲು ಮತ್ತು ಭಾವನೆಗಳ ಮೇಲೆ ನಿಯಂತ್ರಣ ಸಾಧಿಸಲು ಅವಕಾಶವಾಗುವಂತ ಭಾವನಾತ್ಮಕ ಶಿಕ್ಷಣ ಮತ್ತು ನೈತಿಕತೆಯನ್ನು ಬೆಳೆಸಲು ನೀತಿ ಶಿಕ್ಷಣ ನೀಡಬೇಕು.

ಉತ್ತರ ಬಾಲ್ಯದ ಮಕ್ಕಳಿಗಾಗಿ ಶಿಕ್ಷಣ:

        ಉತ್ತರ ಬಾಲ್ಯದ ಮಕ್ಕಳು ವಿಭಿನ್ನ ಆಸಕ್ತಿ ಮತ್ತು ಅಭಿರುಚಿಗಳನ್ನು ಹೊಂದಿರುತ್ತಾರೆ. ಅವರ ಶಿಕ್ಷಣಕ್ಕಾಗಿ ಯೋಜನೆ ರೂಪಿಸಿಕೊಳ್ಳುವಾಗ ಅವರ ಆಸಕ್ತಿಗಳು, ಸಾಮರ್ಥ್ಯ ಹಾಗೂ ಅಭಿರುಚಿಗಳನ್ನು ಗಮನದಲ್ಲಿರಿಸಿಕೊಳ್ಳಬೇಕು. ಇವರ ಶಿಕ್ಷಣಕ್ಕಾಗಿ ಕೈಗೊಳ್ಳಬಹುದಾದ ಕೆಲವು ಕ್ರಮಗಳು ಈ ರೀತಿ ಇವೆ.

  1. ಈ ಹಂತದ ಮಕ್ಕಳ ಉತ್ತಮ ದೈಹಿಕ ವಿಕಾಸಕ್ಕಾಗಿ ಶಿಕ್ಷಣ ಹಾಗೂ ಪ್ರಾಯೋಗಿಕ ಚಟುವಟಿಕೆಗಳಿಗೆ ಹೆಚ್ಚು ಒತ್ತು ಕೊಡಬೇಕು. ಈ ಹಂತದ ಮಕ್ಕಳು ಗುಂಪು ಚಟುವಟಿಕೆಗಳಲ್ಲಿ ಹೆಚ್ಚು ಆಸಕ್ತರಾಗಿರುತ್ತಾರೆ. ಆದ್ದರಿಂದ ಶಾಲೆಯಲ್ಲಿ ಗುಂಪು ಆಟಗಳು ಮತ್ತು ಚಟುವಟಿಕೆಗಳನ್ನು ವ್ಯವಸ್ಥೆಗೊಳಿಸಬೇಕು.
  2. ಪ್ರತ್ಯಕ್ಷಾನುಭವಗಳು ಮತ್ತು ಪರಿಕಲ್ಪನೆಯ ಬೆಳವಣಿಗೆ ಬೌದ್ಛಿಕ ವಿಕಾಸದ ಮೂಲಾಧಾರಗಳು. ಆದ್ದರಿಂದ ಮಕ್ಕಳಿಗೆ ವಿವಿಧ ಅನುಭವಗಳನ್ನು ಒದಗಿಸಬೇಕು. ಮಕ್ಕಳು ತಮ್ಮ ವೀಕ್ಷಣೆಗಳು ಮತ್ತು ಅನುಭವಗಳ ಆಧಾರಗಳ ಮೇಲೆ ಪರಿಕಲ್ಪನೆಗಳನ್ನು ರೂಪಿಸಿಕೊಳ್ಳಲು ಸಹಾಯ ಮಾಡಬೇಕು.
  3. ಮಕ್ಕಳಲ್ಲಿ ಭಾವನಾತ್ಮಕ ಪರಿಪಕ್ವತೆ ಮತ್ತು ಸಾಮಾಜಿಕ ಸಾಮರ್ಥ್ಯ ಬೆಳೆಸಲು ಅಗತ್ಯವಾದ ಸಹಪಠ್ಯ ಚಟುವಟಿಕೆಗಳನ್ನು ಯೋಜಿಸಬೇಕು. ಮಕ್ಕಳಲ್ಲಿ ಜವಾಬ್ದಾರಿ, ಆತ್ಮವಿಶ್ವಾಸ, ವಿಧೇಯತೆ, ಸೌಜನ್ಯ ಇತ್ಯಾದಿ ಗುಣಗಳನ್ನು ಬೆಳೆಸಿಕೊಳ್ಳಲು ಪ್ರೋತ್ಸಾಹಿಸಬೇಕು. ಇದಕ್ಕಾಗಿ ಗುಂಪು ಆಟಗಳು, ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಶೈಕ್ಷಣಿಕ ಪ್ರವಾಸಗಳನ್ನು ಏರ್ಪಡಿಸಬೇಕು.
  4. ಮಕ್ಕಳು ಓದುವ ಸಾಮರ್ಥ್ಯ ಗಳಿಸಿಕೊಂಡ ನಂತರ ತಾವು ವಾಸಿಸುತ್ತಿರುವ ವಿಶ್ವ ಹಾಗೂ ಅಲ್ಲಿಯ ಜನಗಳ ಬಗ್ಗೆ ತಿಳಿದುಕೊಳ್ಳಲು ಬಯಸುತ್ತಾರೆ. ಶಾಲಾ ಗ್ರಂಥಾಲಯಗಳಲ್ಲಿ ಮಕ್ಕಳಲ್ಲಿ ಆಸಕ್ತಿ ಕೆರಳಿಸುವಂತಹ ಪುಸ್ತಕಗಳಿರಬೇಕು ಮತ್ತು ಪ್ರತಿಶಾಲೆಯೂ ಮಕ್ಕಳ ಪತ್ರಿಕೆಗಳು, ಮ್ಯಾಗಝೀನ್‌ ಮುಂತಾದ ಓದುವ ಸಾಮಗ್ರಿಗಳು ದೊರೆಯುವಂತೆ ನೋಡಿಕೊಳ್ಳಬೇಕು. ರೇಡಿಯೋ ಕೇಳುವ ಹಾಗೂ ದೂರದರ್ಶನ ಕಾರ್ಯಕ್ರಮಗಳನ್ನು ವೀಕ್ಷಿಸುವ ಮೂಲಕ ಪರಿಸರದ ಜ್ಞಾನವನ್ನು ಪಡೆಯಲು ಅವಕಾಶ ನೀಡಬೇಕು.
  5. ಮಕ್ಕಳಲ್ಲಿ ಭಾವನಾತ್ಮಕ ಸ್ಥಿರತೆಯನ್ನು ಸ್ಥಾಪಿಸುವ ದೃಷ್ಟಿಯಿಂದ ಅವರ ಸ್ವಯಂ ಅಭಿವ್ಯಕ್ತಿಗೆ ಅವಕಾಶ ದೊರಕಿಸಿಕೊಡಬೇಕು. ಸಮರ್ಪಕವಾದ ಸಾಹಿತ್ಯದ ಚಟುವಟಿಕೆಗಳು, ಆಟ ಮತ್ತು ಕ್ರೀಡೆಗಳ ಸೌಲಭ್ಯ, ಚರ್ಚೆಗಳು, ಭಾಷಣಗಳು, ನಾಟಕಗಳು ಇತ್ಯಾದಿ ಚಟುವಟಿಕೆಗಳನ್ನು ವ್ಯವಸ್ಥೆಗೊಳಿಸಬೇಕು. ಈ ಚಟುವಟಿಕೆಗಳ ಮೂಲಕ ತಮ್ಮ ಅಂತರ್ಗತ ಭಾವನೆಗಳನ್ನು ವ್ಯಕ್ತಪಡಿಸಲು ಅವಕಾಶ ನೀಡಬೇಕು.
  6. ಮಕ್ಕಳು ಕೂಟದ ಸದಸ್ಯತ್ವವನ್ನು ಪಡೆಯುವುದನ್ನು ಪೋಷಕರು ಹಾಗೂ ಶಿಕ್ಷಕರು ಪ್ರೋತ್ಸಾಹಿಸಬೇಕು, ಕೂಟಗಳು ಅವರ ಸ್ವಯಂ ಅಭಿವ್ಯಕ್ತಿಗೆ ಅವಕಾಶ ನೀಡುತ್ತವೆ, ಒಂಟಿತನದಿಂದ ಹೊರತರುತ್ತವೆ ಮತ್ತು ಭದ್ರತೆಯ ಭಾವನೆಯನ್ನು ಮೂಡಿಸುತ್ತವೆ.
  7. ಬೆಳೆಯುತ್ತಿರುವ ಮಕ್ಕಳ ವ್ಯಕ್ತಿತ್ವವನ್ನು ಗೌರವಿಸಬೇಕು ಮತ್ತು ಅವರ ಸಾಮರ್ಥ್ಯಗಳಲ್ಲಿ ವಿಶ್ವಾಸವಿಡಬೇಕು. ಮಕ್ಕಳಲ್ಲಿ ಕಂಡುಬರುವ ಅಪೇಕ್ಷಿತ ಪರ್ತನೆಗಳನ್ನು ಪುರಸ್ಕರಿಸಬೇಕು.
  8. ಸರಳ ಪ್ರಯೋಗಗಳನ್ನು ಕೈಗೊಳ್ಳಲು ಅವಕಾಶಗಳನ್ನು ಒದಗಿಸಬೇಕು.
  9. ಉತ್ತರ ಬಾಲ್ಯದಲ್ಲಿ ನೈತಿಕ ಹಾಗೂ ಸಾಮಾಜಿಕ ಮೌಲ್ಯಗಳು ಮೂಡುತ್ತವೆ. ಮಕ್ಕಳಲ್ಲಿ ಅಪೇಕ್ಷಿತ ನೈತಿಕ ಮತ್ತು ಸಾಮಾಜಿಕ ಮೌಲ್ಯಗಳನ್ನು ಬೆಳೆಸಲು ಶಿಕ್ಷಕರು ಸೂಕ್ತ ಮಾರ್ಗದರ್ಶನ ಹಾಗೂ ಸಹಾಯ ಮಾಡಬೇಕು.
  10. ಈ ಹಂತದ ಮಕ್ಕಳು ಭಾವನಾತ್ಮಕವಾಗಿ ಕೆರಳಿದಾಗ ಅವರನ್ನು ಶಾಂತ ಚಿತ್ತತೆಯಿಂದ ಮತ್ತು ಚತುರತೆಯಿಂದ ಸಮಾಧಾನಗೊಳಿಸಬೇಕು ಹಾಗೂ ಸಂದರ್ಭೋಚಿತವಾಗಿ ಭಾವನೆಗಳ ಮೇಲೆ ನಿಯಂತ್ರಣ ಸಾಧಿಸುವುದನ್ನು ಕಲಿಸಬೇಕು.
  11. ಶಾಲೆಗಳಲ್ಲಿ ಶೈಕ್ಷಣಿಕ ಮತ್ತು ವೈಯಕ್ತಿಕ ಮಾರ್ಗದರ್ಶನ ಮತ್ತು ಸಲಹೆ ಅತ್ಯಂತ ಅಪೇಕ್ಷಣೀಯವಾಗಿದೆ. ಶಾಲಾ ಮಕ್ಕಳೊಡನೆ ಶಿಕ್ಷಕರು ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಬೇಕು ಮತ್ತು ಅವರ ಪ್ರೀತಿ ವಿಶ್ವಾಸ ಗಳಿಸಬೇಕು. ಆಗ ಮಕ್ಕಳು ತಮ್ಮ ವೈಯಕ್ತಿಕ ಸಮಸ್ಯೆಗಳನ್ನು ಶಿಕ್ಷಕರೊಡನೆ ಚರ್ಚಿಸುವರು. ಶೈಕ್ಷಣಿಕ ಮಾರ್ಗದರ್ಶನ ಕಾರ್ಯಕ್ರಮಗಳ ಮೂಲಕ ಅವರ ಶೈಕ್ಷಣಿಕ ಸಮಸ್ಯೆಗಳಿಗೆ ಪರಿಹಾರ ಒದಗಿಸಿ ಉತ್ತಮ ಓದುವ ಕೌಶಲಗಳನ್ನು ರೂಢಿಸಬಹುದು ಮತ್ತು ವೈಯಕ್ತಿಕ ಮಾರ್ಗದರ್ಶನ ನೀಡುವ ಮೂಲಕ ಮಕ್ಕಳ ವೈಯಕ್ತಿಕ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಬೇಕು.

ಬಾಲ್ಯಾವಸ್ಥೆಯ ವಿಕಾಸಾತ್ಮಕ ಕಾರ್ಯಗಳು

    ವ್ಯಕ್ತಿಯು ಪ್ರತಿಯೊಂದು ವಯೋಮಾನದಲ್ಲೂ ತನ್ನಲ್ಲಾಗುವ ಕೆಲವು ವಿಶಿಷ್ಟ ದೈಹಿಕ ಮತ್ತು ಮಾನಸಿಕ ಬದಲಾವಣೆಗಳು, ಪರಿಸರದ ಸ್ಥಿತಿಗತಿಗಳು ಮತ್ತು ಸಾಮಾಜಿಕ ಅಭಿವ್ಯಕ್ತಿಗಳಿಗೆ ಹೊಂದಿಕೊಂಡು ತನ್ನ ಜೀವನವನ್ನು ಸಾಗಿಸಬೇಕಾಗುತ್ತದೆ ಇಂತಹ ನಿರೀಕ್ಷಿತ ಬದಲಾವಣೆಗಳಿಗೆ, ಸಮರ್ಪಕವಾಗಿ ಹೊಂದಿಕೊಳ್ಳಲು ಅನುಕೂಲವಾಗುವಂತೆ, ಆತನು ಆಯಾಯ ವಯೋಮಾನಗಳಿಗೆ ತಕ್ಕಂತಹ ನೈಪುಣ್ಯಗಳನ್ನು ಮತ್ತು ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಇಂತಹ ನೈಪುಣ್ಯಗಳು ಅಥವಾ ಕೌಶಲ್ಯಗಳನ್ನು ವಿಕಾಸಾತ್ಮಕ ಕಾರ್ಯಗಳು ಎನ್ನುವರು.

       ಈ ಪರಿಕಲ್ಪನೆಯನ್ನು ಮೊದಲು ಪರಿಚಯಿಸಿದವರು ರಾಬರ್ಟ್‌ ಹ್ಯಾವಿಗ್ ಹರ್ಸ್ಟ್. ‌ ಇವರ ಪ್ರಕಾರ ವಿಕಾಸಾತ್ಮಕ ಕಾರ್ಯಗಳೆಂದರೆ “ವ್ಯಕ್ತಿಯ ಜೀವನದ ನಿರ್ದಿಷ್ಟ ಕಾಲದಲ್ಲಿ ಉದ್ಬವಿಸುವ ಕ್ರಿಯೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದರೆ ತೃಪ್ತಿ ದೊರೆಯುತ್ತದೆ ಮತ್ತು ಮುಂದಿನ ಹಂತದ ಕಾರ್ಯಗಳ ನಿರ್ವಹಣೆ ಸುಲಭವಾಗುತ್ತದೆ. ಒಂದು ವೇಳೆ ಆ ಕಾರ್ಯವನ್ನು ನಿರ್ವಹಿಸಲು ಸಾಧ್ಯವಾಗದಿದ್ದಲ್ಲಿ ಅದು ಅವನಲ್ಲಿ ಅತೃಪ್ತಿಯನ್ನುಂಟುಮಾಡುತ್ತದೆ. ಸಮಾಜ ಅವನನ್ನು ತಿರಸ್ಕರಿಸಬಹುದು ಮತ್ತು ಮುಂದಿನ ಹಂತದ ಕಾರ್ಯಗಳ ನಿರ್ವಹಣೆ ಕಷ್ಟವಾಗುತ್ತದೆ”.

‌       ಕೆಲವು ವಿಕಾಸಾತ್ಮಕ ಕಾರ್ಯಗಳು ದೈಹಿಕ ಪರಿಪಕ್ವತೆ ಪರಿಣಾಮವಾಗಿ ಉದಯಿಸುತ್ತದೆ. ಉದಾ: ನಡಿಗೆಯ ಕಲಿಕೆ. ಇನ್ನು ಕೆಲವು ಸಮಾಜದ ಸಾಂಸ್ಕೃತಿಕ ಒತ್ತಡದಿಂದ ಉದಯಿಸುತ್ತದೆ. ಉದಾ: ಓದುವುದನ್ನು ಕಲಿಯುವುದು. ಮತ್ತೆ ಕೆಲವು ವ್ಯಕ್ತಿಯ ವೈಯಕ್ತಿಕ ಆಕಾಂಶೆಗಳು ಮತ್ತು ಅವನು ಹೊಂದಿರುವ ಮೌಲ್ಯಗಳಿಂದ ಉದಯಿಸುತ್ತದೆ. ಉದಾ: ವೃತ್ತಿಯೊಂದನ್ನು ಆಯ್ಕೆ ಮಾಡಿಕೊಳ್ಳುವುದು. ಹೆಚ್ಚಿನ ವಿಕಾಸಾತ್ಮಕ ಕಾರ್ಯಗಳು ಈ ಮೂರು ಅಂಶಗಳು ಒಟ್ಟಾಗಿ ನಿರ್ವಹಿಸುವುದರ ಪರಿಣಾಮ.

ವಿಕಾಸಾತ್ಮಕ ಕಾರ್ಯಗಳ ಉದ್ದೇಶಗಳು:

ವಿಕಾಸಾತ್ಮಕ ಕಾರ್ಯಗಳ ಮೂರು ಪ್ರಮುಖ ಉದ್ದೇಶಗಳೆಂದರೆ,

  1. ವಿವಿಧ ವಯೋಮಾನಗಳಲ್ಲಿ ತನ್ನಿಂದ ಸಮಾಜವು ಯಾವ ನಡವಳಿಕೆಯನ್ನು ನಿರೀಕ್ಷಿಸುತ್ತದೆ ಎಂಬುದನ್ನು ತಿಳಿದುಕೊಳ್ಳಲು ಇವು ಮಾರ್ಗದರ್ಶನ ನೀಡುತ್ತವೆ. ಪೋಷಕರು ತಮ್ಮ ಮಕ್ಕಳಿಂದ ಸಮಾಜ ಯಾವ ಕೌಶಲ್ಯಗಳನ್ನು ನಿರೀಕ್ಷಿಸುತ್ತದೆ ಎಂಬುದನ್ನು ತಿಳಿದು ಮಕ್ಕಳಿಗೆ ಸೂಕ್ತ ಕೌಶಲಗಳನ್ನು ಕಲಿಸಲು ಮತ್ತು ತನ್ಮೂಲಕ ಹೊಂದಾಣಿಕೆ ಮಾಡಿಕೊಳ್ಳಲು ಅವು ಸಹಾಯ ಮಾಡುತ್ತವೆ.
  2. ವಿಕಾಸಾತ್ಮಕ ಕಾರ್ಯಗಳು ಸಾಮಾಜಿಕ ಗುಂಪು ವಿವಿಧ ವಯೋಮಾನಗಳಲ್ಲಿ ಏನನ್ನು ನಿರೀಕ್ಷಿಸುತ್ತದೆ ಎಂಬುದನ್ನು ತಿಳಿದು ಅದರಂತೆ ಕಾರ್ಯ ಪ್ರವೃತ್ತರಾಗಲು ಅಭಿಪ್ರೇರಿಸುತ್ತವೆ.
  3. ತನ್ನ ಜೀವನದ ಮುಂದಿನ ಹಂತಗಳಲ್ಲಿ ಏನಿದೆ? ಮತ್ತು ತಾನು ಏನು ಮಾಡಬೇಕಾಗಿದೆ? ಎಂಬುದನ್ನು ಅರಿತು ಕಾರ್ಯನಿರತನಾಗಲು ವ್ಯಕ್ತಿಗೆ ವಿಕಾಸಾತ್ಮಕ ಕಾರ್ಯಗಳ ಅರಿವು ಅನುಪಮ ರೀತಿಯಲ್ಲಿ ನೆರವಾಗುತ್ತದೆ.

ಹಸುಳೆತನ ಮತ್ತು ಪೂರ್ವ ಬಾಲ್ಯದ ವಿಕಾಸಾತ್ಮಕ ಕಾರ್ಯಗಳು:

  1. ಗಟ್ಟಿಯಾದ ಆಹಾರವನ್ನು ಸೇವಿಸಲು, ನಡೆಯಲು ಮತ್ತು ಮಾತನಾಡಲು ಕಲಿಯುವುದು.
  2. ಮಲ ಮೂತ್ರ ವಿಸರ್ಜನೆಯ ಮೇಲೆ ಹತೋಟಿಯನ್ನು ಬೆಳೆಸಿಕೊಳ್ಳುವುದು.
  3. ಗಂಡು ಹೆಣ್ಣುಗಳ ಸಾಮಾನ್ಯ ಭೇದ ಗ್ರಹಿಸಿ, ಗಂಡು ಅಥವಾ ಹೆಣ್ಣಿಗೆ ಸಹಜವಾದ ಗಾಂಭೀರ್ಯ ಮತ್ತು ವಿನಯಶೀಲತೆಗಳನ್ನು ಬೆಳೆಸಿಕೊಳ್ಳುವುದು.
  4. ಶಾರೀರಿಕ ದೃಢತೆಯನ್ನು ಸಂಪಾದಿಸುವುದು.
  5. ಭೌತಿಕ ಮತ್ತು ಸಾಮಾಜಿಕ ನೈಜತೆಯ ಸರಳ ಪರಿಕಲ್ಪನೆಗಳನ್ನು ರೂಪಿಸಿಕೊಳ್ಳುವುದು.
  6. ತಂದೆ ತಾಯಿಗಳು, ಒಡಹುಟ್ಟಿದವರು ಮತ್ತು ಇತರರ ಭಾವ ಜೀವನದಲ್ಲಿ ಒಂದಾಗಿ ಬೆರೆಯಲು ಕಲಿಯುವುದು.
  7. ಸರಿ-ತಪ್ಪುಗಳ ಭೇದವನ್ನು ಗುರುತಿಸಲು ಕಲಿತು, ಅಂತಃ ಪ್ರಜ್ಞೆಯನ್ನು ಬೆಳೆಸಿಕೊಳ್ಳಲು ಪ್ರಾರಂಭಿಸುವುದು.

ಉತ್ತರ ಬಾಲ್ಯದ ವಿಕಾಸಾತ್ಮಕ ಕಾರ್ಯಗಳು:

1.     ದೈನಂದಿನ ಆಟಗಳಿಗೆ ಅಗತ್ಯವಾದ ದೈಹಿಕ ಕುಶಲತೆಗಳನ್ನು ಕಲಿಯುವುದು.

2.     ತಾನು ಒಬ್ಬ ಪ್ರಗತಿಶೀಲ ವ್ಯಕ್ತಿಯೆಂದು ನಂಬಿ, ತನ್ನ ಬಗ್ಗೆ ಒಂದು ಪರಿಪೂರ್ಣ ಮನೋಭಾವ ಬೆಳೆಸಿಕೊಳ್ಳುವುದು.

3.     ತನ್ನ ಸಮ ವಯಸ್ಕರೊಡನೆ ಹೊಂದಿಕೊಂಡು ಹೋಗಲು ಕಲಿಯುವುದು.

4.     ಗಂಡು ಅಥವಾ ಹೆಣ್ಣಿನ ಸಾಮಾಜಿಕ ಪಾತ್ರವನ್ನು ಸಮರ್ಪಕವಾಗಿ ನಿರ್ವಹಿಸಲು ಕಲಿಯುವುದು.

5.     ಓದು, ಬರಹ ಮತ್ತು ಲೆಕ್ಕ ಮಾಡುವಂತಹ ಮೂಲಭೂತ ಕೌಶಲಗಳನ್ನು ಬೆಳೆಸಿಕೊಳ್ಳುವುದು

6.     ನಿತ್ಯ ಜೀವನಕ್ಕೆ ಅಗತ್ಯವಾದ ಪರಿಕಲ್ಪನೆಗಳನ್ನು ಬೆಳೆಸಿಕೊಳ್ಳುವುದು.

7.     ಅಂತಃ ಪ್ರಜ್ಞೆ, ನೈತಿಕ ಪ್ರಜ್ಞೆ ಮತ್ತು ಮೌಲ್ಯ ಮಾನದಂಡವನ್ನು ಬೆಳೆಸಿಕೊಳ್ಳುವುದು.

8.     ಸಾಮಾಜಿಕ ಗುಂಪುಗಳು ಮತ್ತು ವಿವಿಧ ಸಂಘ ಸಂಸ್ಥೆಗಳ ಬಗ್ಗೆ ಮುಕ್ತ ಮನೋಭಾವ ಬೆಳೆಸಿಕೊಳ್ಳುವುದು.

9.     ವೈಯಕ್ತಿಕ ಸ್ವಾತಂತ್ರ್ಯವನ್ನು ಸಾಧಿಸುವುದು.

ಅಥವಾ

1.     ನಡೆಯುವುದನ್ನು ಕಲಿಯುವುದು.

2.     ಗಟ್ಟಿ ಆಹಾರವನ್ನು ತೆಗೆದುಕೊಳ್ಳುವುದನ್ನು ಕಲಿಯುವುದು.

3.     ಮಾತನಾಡುವುದನ್ನು ಕಲಿಯುವುದು.

4.     ಶೌಚದ ಅಭ್ಯಾಸ ಮತ್ತು ನಿಯಂತ್ರಣ.

5.     ಲಿಂಗ ವ್ಯತ್ಯಾಸ ಮತ್ತು ಇತರೇ ಲಿಂಗದವರೊಂದಿಗೆ ನಮ್ರತೆಯಿಂದ ನಡೆದುಕೊಳ್ಳುವುದು.

6.     ಓದುವುದಕ್ಕೆ ಅಣಿಯಾಗುವುದು.

7.     ಸಾಮಾನ್ಯ ಆಟಗಳನ್ನು ಆಡಲು ಅಗತ್ಯವಿರುವ ದೈಹಿಕ ಕೌಶಲ್ಯಗಳನ್ನು ಕಲಿಯುವುದು.

8.     ಸಮ ವಯಸ್ಕರೊಂದಿಗೆ ಬೆರೆಯುವುದು.

9.     ಗಂಡು ಮತು ಹೆಣ್ಣಿನ ಸೂಕ್ತ ಸಾಮಾಜಿಕ ಪಾತ್ರವನ್ನು ಕಲಿಯುವುದು.

10.   ಬೆಳೆಯುತ್ತಿರುವ ಜೀವಿಯಾಗಿ ಪರಿಪೂರ್ಣ ಮನೋವೃತ್ತಿಯನ್ನು ತನ್ನಲ್ಲಿ ಬೆಳೆಸಿಕೊಳ್ಳುವುದು.

 


Comments

Popular posts from this blog

ಶೈಕ್ಷಣಿಕ ಮನೋವಿಜ್ಙಾನ-ಅರ್ಥ

ಕಲಿಕೆ