ಕಲಿಕೆ

 

ಕಲಿಕೆ

ಅರ್ಥ/ವ್ಯಾಖ್ಯಾನಗಳು:

         ಕಲಿಕೆ ಎಂದರೆ ವ್ಯಕ್ತಿಯ ವರ್ತನೆಯಲ್ಲಿ ಬದಲಾವಣೆಗಳನ್ನು ತರುವುದಾಗಿದೆ. ಮಾನವರುತಮ್ಮ ಜೀವನ ಪೂರ್ತಿ ಅನೇಕ ಬದಲಾವಣೆಗಳನ್ನು ಹೊಂದುತ್ತಿರುತ್ತಾರೆ. ಮಾನವನಿಗೆ ಕಲಿಕೆ ಅನಿವಾರ್ಯ ಹಾಗೂ ಅಗತ್ಯ. ಅವನ ಭವಿಷ್ಯ, ಅವನು ಮಾಡಿಕೊಳ್ಳುವ ನಾನಾ ಬಗೆಯ ಕಲಿಕೆಯ ಮೇಲೆಯೇ ಅವಲಂಬಿಸಿರುತ್ತದೆ. ಈ ರೀತಿಯ ಕಲಿಕೆ ಜ್ಞಾನ, ಕುಶಲತೆ, ಆಸಕ್ತಿ ನಾನಾ ಬಗೆಯ ಸಾಮರ್ಥ್ಯಗಳು ಮತ್ತು ಅಭಿರುಚಿಗಳಿಗೆ ಸಂಬಂಧಪಟ್ಟಿರಬಹುದು. ಇವುಗಳನ್ನು ವ್ಯವಸ್ಥಿತ ರೀತಿಯಲ್ಲಿ ಮಕ್ಕಳಿಗೆ ಒದಗಿಸಿಕೊಡುವುದೇ ಶಿಕ್ಷಣದ ಮುಖ್ಯ ಕರ್ತವ್ಯವಾಗಿರುತ್ತದೆ. ಆದುದರಿಂದ ಶಿಕ್ಷಣದ ಯಾವುದೇ ಹಂತದಲ್ಲಿ ಕಲಿಕೆ ಮುಖ್ಯವಾಗುತ್ತದೆ. ವಿವಿಧ ಅನುಭವಗಳಿಂದ ಮಕ್ಕಳು ಕಲಿಯುತ್ತಾರೆ, ಇದರಿಂದ ಅವರ ವರ್ತನೆಯಲ್ಲಿ ಸೂಕ್ತ ಬದಲಾವಣೆಗಳಾಗುತ್ತವೆ. ಇದನ್ನೇ ಕಲಿಕೆ ಇನ್ನುತ್ತಾರೆ.

ಅರ್ಥ/ವ್ಯಾಖ್ಯಾನಗಳು:

1.     “ಅನುಭವಗಳ ಮೂಲಕ ನಡವಳಿಕೆಯಲ್ಲುಂಟಾಗುವ ಬದಲಾವಣೆಯೇ ಕಲಿಕೆ”

                                                                                                  --- ಗೇಟ್ಸ್‌ ಮತು ಇತರರು.

2.     “ಕಲಿಕೆಯು ಹೊಸ ನಡವಳಿಕೆಯನ್ನು ಗಳಿಸುವುದು ಅಥವಾ ಹಳೆಯ ನಡವಳಿಕೆಯನ್ನು ಗಟ್ಟಿಗೊಳಿಸುವುದು ಅಥವಾ ದುರ್ಬಲಗೊಳಿಸುವುದಾಗಿದೆ”.  --- ಹೆನ್ರಿ.ಪಿ. ಸ್ಮಿತ್

3.     “ವರ್ತನೆಯಲ್ಲಿ ಕಂಡುಬರುವ ಬದಲಾವಣೆ” ಕಲಿಕೆಯಾಗಿದೆ.  ----- ನಾರ್ಮಲ್‌ ವಿಲ್ಡಮರ್‌

4.     “ನಿರ್ದಿಷ್ಟ ಪ್ರಚೋಧನೆಗೆ ನಿರ್ದಿಷ್ಟ ಪ್ರತಿಕ್ರಿಯೆಗಳ ಸಂಪರ್ಕ ಸಂಬಂಧವೇ ಕಲಿಕೆ”.

                                                                                     -----ಎಡ್ವರ್ಡ ಲೀಥಾರ್ನ ಡೈಕ್

5.     “ಚಟುವಟಿಕೆಗಳನ್ನು ವ್ಯವಸ್ಥೆಗೊಳಿಸುವ ಕ್ರಮ”     ------- ಹಿಲ್‌ ಗಾರ್ಡ

6.     “ಅನುಭವಗಳು ವ್ಯಕ್ತಿಯ ವರ್ತನೆಯಲ್ಲಿ ಬದಲಾವಣೆ ತರುವ ಚಟುವಟಿಕೆಯೇ ಕಲಿಕೆ”

                                                                                ----- ವುಡ್‌ವರ್ತ್‌

7.     “ಅಭ್ಯಾಸ ನಿರ್ವಹಣೆಗಳ ಸಂಗ್ರಹಣೆ ಹಾಗೂ ಸನ್ನಿವೇಶಗಳನ್ನು ಅನುಭವಕ್ಕನುಗುಣವಾಗಿ ಬದಲಾವಣೆ ಮಾಡಿಕೊಳ್ಳುವುದಕ್ಕೆ ಕಲಿಕೆ ಎನ್ನಬಹುದು”     ----- ಹೆನ್ರಿ ಪಿ. ಸ್ಮಿತ್

8.     “ಚಟುವಟಿಕೆಗಳನ್ನು ವ್ಯವಸ್ಥೆಗೊಳಿಸುವ ಕ್ರಮವೇ ಕಲಿಕೆ”   ---- ಹಿಲ್‌ ಗಾರ್ಡ್

ಕಲಿಕೆಯ ಲಕ್ಷಣಗಳು:

1.     ಪ್ರತಿಯೊಂದು ಜೀವಿಯಲ್ಲಿಯೂ ಕಲಿಕೆ ಏರ್ಪಡುವುದರಿಂದ ಕಲಿಕೆ ಸಾರ್ವತ್ರಿಕವಾಗುತ್ತದೆ.

2.     ಕಲಿಕೆ ಕೆಳವರ್ಗದ ಪ್ರಾಣಿಗಳಲ್ಲಿ ಕಡಿಮೆ ಇದ್ದು ಮನುಷ್ಯನಲ್ಲಿ ಗರಿಷ್ಟ ಮಟ್ಟದಲ್ಲಿರುತ್ತದೆ.

3.     ಕಲಿಕೆ ಜೀವಿಗಳಲ್ಲಿ ಮಾನಸಿಕ ಬೆಳವಣಿಗೆಯ ಚಿಹ್ನೆಯಾಗಿದೆ. ಅಷ್ಟೇ ಅಲ್ಲದೇ ಮನಸ್ಸು ನಿರ್ಮಲವಾಗಿದ್ದರೆ ಕಲಿಕೆ ಪ್ರಮಾಣ ಹೆಚ್ಚುತ್ತದೆ.

4.     ಕಲಿಕೆಯು ವ್ಯಕ್ತಿಯ ವಯಸ್ಸು, ಪರಿಸರ, ಬೌದ್ದಿಕ ಸಾಮರ್ಥ್ಯ ಹಾಗೂ ಅನುವಂಶೀತೆಯನ್ನು ಅವಲಂಬಿಸಿರುತ್ತದೆ.

5.     ಕಲಿಕೆಯು ವ್ಯಕ್ತಿಗೆ ಕೌಶಲವನ್ನು ಉಂಟುಮಾಡಿ ಜೀವನದ ಮಹತ್ಕಾರ್ಯವನ್ನುಸಾಧಿಸುವ ಸಾಧನವಾಗುತ್ತದೆ. ಇದನ್ನು ಅಸಾಧಾರಣ ಕಲಿಕೆ ಎನ್ನಬಹುದು.

6.     ಜೀವಿಯನ್ನು ಹೊಸ ಪರಿಸರಕ್ಕೆ ಹೊಂದಿಕೊಳ್ನುವಂತೆ ಸಹಾಯ ಮಾಡುವ ಸಾಧನ ಕಲಿಕೆ.

7.     ಕಲಿಕೆ ಬೆಳವಣಿಗೆಯನ್ನು ಮನೋವಿಜ್ಞಾನಿಗಳು ವಿವಿಧ ಹಂತಗಳಾಗಿ ವಿಂಗಡಿಸಿರುವರು. ಅದಕ್ಕೆ ತಕ್ಕಂತೆ ಕಲಿಕೆಯೂ ವಿಕಾಸಗೊಳ್ಳುತ್ತದೆ.

 

ಅಥವಾ

ಕಲಿಕೆಯ ಗುಣಲಕ್ಷಣಗಳು.

1.     ಕಲಿಕೆಯು ವರ್ತನೆಯ ನಿರಂತರ ಬದಲಾವಣೆ, ಜೀವನ ಪೂರ್ತಿ ಅದು ನಡೆಯುತ್ತಲೇ ಇರುತ್ತದೆ.

2.     ಕಲಿಕೆ ವ್ಯಾಪಕವಾದುದು, ಅದು ಜೀವನದ ಎಲ್ಲಾ ಪ್ರಕಾರಗಳಿಗೂ ಸಂಬಂಧಪಟ್ಟಿರುತ್ತದೆ.

3.     ಕಲಿಕೆಯು ವ್ಯಕ್ತಿಯ ಬೌಧ್ಧಿಕ, ಸಾಮಾಜಿಕ ಹಾಗೂ ಸಂವೇಗಾತ್ಮಕ ವಲಯಗಳಿಗೆ ಸಂಬಂಧಿಸಿರುತ್ತದೆ.

4.     ವರ್ತನೆಯ ಸರಿಯಾದ ರೂಪಣೆಯೇ ಕಲಿಕೆ.

5.     ಕಲಿಕೆ ವಿಕಾಸಾತ್ಮಕವಾದುದು.

6.     ಕಲಿಕೆ ಯಾವಾಗಲೂ ಗುರಿಗಳಿಗೆ ಸಂಬಂಧಿಸಿರುತ್ತದೆ. ಈ ಗುರಿಗಳನ್ನು ವೀಕ್ಷಣಾ ಸಾಧ್ಯವಾದ ವರ್ತನೆಗಳನ್ನಾಗಿ ನಿರೂಪಿಸಬಹುದು.

7.     ಕಲಿಕೆಗೂ ಹಾಗೂ ಆಸಕ್ತಿಗಳಿಗೂ ನಿಕಟವಾದ ಸಂಬಂಧವಿದೆ. ವ್ಯಕ್ತಿ, ಅವನಿಗೆ ಆಸಕ್ತಿಯಿರುವ ವಿಷಯಗಳನ್ನು ಬೇಗ ಕಲಿಯುತ್ತಾನೆ.

8.     ಕಲಿಕೆಯು ಸಿದ್ಧತೆ ಮತ್ತು ಪ್ರೇರಣೆಯನ್ನು ಅವಲಂಬಿಸಿರುತ್ತದೆ.

ಕಲಿವಿನ ಮೇಲೆ ಪ್ರಭಾವ ಬೀರುವ ಅಂಶಗಳು

ಪಕ್ವತೆ

     ಪಕ್ವತೆಯು ನೈಸರ್ಗಿಕ ಕ್ರಿಯೆಯಾಗಿದ್ದು, ಇದು ಕಲಿಕೆಯ ಮೇಲೆ ಮಹತ್ತರವಾದ ಪ್ರಭಾವ ಬೀರುತ್ತದೆ. ಪಕ್ವತೆ ಹಾಗೂ ಕಲಿಕೆ ಒಂದಕ್ಕೊಂದು ಅಂತರ ಅವಲಂಬನೆ ಹಾಗೂ ಅಂತರ ಸಂಬಂಧವನ್ನು ಹೊಂದಿವೆ.

     ಕೆಲವೊಮ್ಮೆ ವರ್ತನೆ ಬದಲವಣೆಯು ಕಲಿಕೆಯಿಂದಾದದ್ದೋ ಅಥವಾ ಪಕ್ವತೆಯಿಂದಾಗಿದೆಯೋ ಎಂದು ಗುರುತಿಸುವುದು ಕಷ್ಟ ಸಾಧ್ಯ.

ಉದಾ: ಮಗುವು ಮಾತು ಕಲಿಯುವುದು ಒಂದು ನಿರ್ದಿಷ್ಟ ವಯಸ್ಸು ತಲುಪಿದಾಗ ಇದನ್ನೇ ಪಕ್ವತೆ ಎಂದು ಕರೆಯುವರು. ಕೆಲವೊಮ್ಮೆ ಕಲಿಕೆಯಿಲ್ಲದೆ ವಯಸ್ಸಾದರೂ ಮಾತು ಬರುವುದಿಲ್ಲ.

      ಪಕ್ವತೆ ಎಂದರೆ ವ್ಯಕ್ತಿಯ ಬೆಳವಣಿಗೆ ಪ್ರಕ್ರಿಯೆಯು ದೇಹದ ರಚನೆ ಹಾಗೂ ಕಾರ್ಯವನ್ನು ಪ್ರೌಢಾವಸ್ಥೆಗೆ ತಲುಪಿಸುವುದೆಂದರ್ಥ.

     ಎಲಿಜೆಬೆತ್‌ ಹರ್‌ ಲಾಕ್‌ ರ ಪ್ರಕಾರ “ಮಗುವಿನ ಭೌತಿಕ ಮತ್ತು ಮಾನಸಿಕ ಅನುವಂಶೀಯ ಗುಣ ವಿಶೇಷಣೆಗಳ ಸ್ವಾಭಾವಿಕ ವಿಕಾಸವೇ ಪಕ್ವತೆ”.

       ಪಕ್ವತೆ ಅನುವಂಶೀಯತೆಯ ಪ್ರಭಾವದಿಂದಾಗಿದ್ದು, ವ್ಯಕ್ತಿಯ ವರ್ತನಾ ಬದಲಾವಣೆಗಳು ಕೇವಲ ಕಲಿಕೆಯಿಂದ ಮಾತ್ರ ಉಂಟಾಗದೆ ಪಕ್ವತೆಯಿಂದಲೂ ವ್ಯಕ್ತಿಯ ವರ್ತನೆಯಲ್ಲಿ ಬದಲಾವಣೆ ಉಂಟಾಗುತ್ತದೆ. ವ್ಯಕ್ತಿಯಲ್ಲಿ ಉಂಟಾಗುವ ಸಹಜ ಪ್ರವೃತ್ತಿಗಳು. ಸಂವೇದನ ಶಕ್ತಿ ಭಾವನಾತ್ಮಕ ಗುಣಗಳಂತಹ ವರ್ತನೆಗಳೆಲ್ಲಾ ಪಕ್ವತೆಯಿಂದ ಉಂಟಾದ ಕಾರ್ಯಗಳು. ಇವುಗಳು ಕಲಿಕಾ ರಹಿತ ಕಾರ್ಯಗಳೆನ್ನುವರು.

 ‘ಕಲಿಕೆʼ ಎಂಬುದು ಒಂದು ನಿರ್ದಿಷ್ಟ ವರ್ಗದ ಬದಲಾವಣೆಗಳ ಹೆಸರು. ವಿಕಾಸದ ಮೇಲೆ ತರಬೇತಿಯ ಪರಿಣಾಮವಾಗಿ ವ್ಯಕ್ತಿಯ ಪರಿಪಕ್ವದ ಮಟ್ಟವನ್ನು ಅವಲಂಬಿಸಿರುತ್ತದೆ. ದೇಹದ ಅಂಗಾಂಗಗಳು ಅನೈಚ್ಚಿಕವಾಗಿ ಸ್ವಾಭಾವಿಕವಾಗಿ ಬದಲಾಗುತ್ತವೆ. ಇದರ ಪರಿಣಾಮವಾಗಿ ವ್ಯಕ್ತಿಯ ವರ್ತನೆಗಳು ಬದಲಾಗುತ್ತವೆ. ಪರಿಪಕ್ವದ ಪರಿಣಾಮವಾಗಿ ಜೀವನದ ನಿರ್ದಿಷ್ಟ ಹಂತಗಳಲ್ಲಿ ನಿರ್ದಿಷ್ಟ ವರ್ತನೆಗಳನ್ನು ಪ್ರಕಟಿಸುವ ಸಾಮರ್ಥ್ಯ ಲಭಿಸುತ್ತದೆ.

     ಕಲಿಕೆ ಯಾವುದೇ ರೀತಿಯಲ್ಲಿ ಅದು ಫಲಿಸಬೇಕಾದರೆ ನರಮಂಡಲ ಮತ್ತು ಮಾಂಸಖಂಡಗಳು ಪದ್ವವಾಗಿರಬೇಕು. ಪಕ್ವತೆ ಎಂದರೆ ಕಲಿಯಲು ಅಗತ್ಯವಾದ ದೈಹಿಕ ರಚನೆಗಳು ಪೂರ್ಣ ವಿಕಾಸ ಹೊಂದಿರಬೇಕು. ಆರು ತಿಂಗಳ ಮಗವನ್ನು ನಡೆಸಲು ಎಷ್ಟೇ ಪ್ರಯತ್ನಿಸಿದರೂ ಅದು ಸಾದ್ಯವಾಗುವುದಿಲ್ಲ ಕಾರಣ ಅದರ ಮಾಂಸಖಂಡಗಳು ಇನ್ನೂ ಸರಿಯಾಗಿ ಬಲಿತಿರುವುದಿಲ್ಲ. ಅದರಂತೆಯೇ ಮೆದುಳಿನ ಮಾಂಸಖಂಡಗಳೂ ಬಲಿಯದಿದ್ದರೆ ಕಲಿಕೆ ಮಂದಗತಿಯಾಗಿರುತ್ತದೆ.

ಶೈಕ್ಷಣಿಕ ಮಹತ್ವ

1.     ಪರಿಪಕ್ವದ ಮಟ್ಟವನ್ನು ಗಮನದಲ್ಲಿಟ್ಟುಕೊಂಡು ತರಬೇತಿ ಕಾರ್ಯಕ್ರಮ ರೂಪಿಸಿದರೆ ಉತ್ತಮ ಫಲ ಲಭಿಸುತ್ತದೆ. ಉದಾ: ಸುಮಾರು 12 ತಿಂಗಳ ವಯಸ್ಸಿನ ಹಸುಳೆ ಪರಿಪಕ್ವದ ಪರಿಣಾಮವಾಗಿ ನಡೆಯಲು ಯತ್ನಿಸುತ್ತದೆ. ಆಗ ನಡೆಯಲು ತರಬೇತಿ ನೀಡಬಲ್ಲ ಮೂರು ಚಕ್ರದ ತಳ್ಳುಗಾಡಿ ಒದಗಿಸಿದರೆ ನಡೆಯುವ ಕಲೆ ಸುಲಭವಾಗಿ ಕರಗತವಾಗುತ್ತದೆ. ಇದಕ್ಕೆ ಬದಲಾಗಿ 6 ತಿಂಗಳ ಹಸುಳೆಗೆ ಈ ತಳ್ಳುಗಾಡಿಯ ಮೂಲಕ ತರಬೇತಿ ನೀಡುವುದು ಸಾಧ್ಯವಿಲ್ಲ. ತರಬೇತಿಯ ಪರಿಣಾಮ ಪರಿಪಕ್ವದ ಮಟ್ಟವನ್ನು ಅನುಸರಿಸುತ್ತದೆ, ಎಂಬುದಕ್ಕೆ ಪ್ರಾಯೋಗಿಕ ಸಾಕ್ಷಾಧಾರಗಳಿವೆ. ಅಂದಮೇಲೆ ಕಲಿಕೆಯ ವೇಳಾಪಟ್ಟಿ ಹೇಗಿರಬೇಕು ಎಂಬುದನ್ನು ಪರಿಪಕ್ವ ಬಹುಮಟ್ಟಿಗೆ ನಿರ್ಧರಿಸುತ್ತದೆ.

2.     ಪರಿಪಕ್ವತೆ ಹೊಂದಿದ ಮಕ್ಕಳಲ್ಲಿ ಕಲಿಕೆ ಶೀಘ್ರವಾಗಿ ಉಂಟಾಗುತ್ತದೆ. ಪಕ್ವತೆ ಕಲಿಕೆಯು ಸಿದ್ದತೆಯನ್ನು ತೋರಿಸುತ್ತದೆ. ಉದಾ: ಮಗು ಸರಿಯಾಗಿ ಓದಲು, ಬರೆಯಲು ಕಲಿಯಬೇಕಾದ ಪರಿಪಕ್ವದ ವಯಸ್ಸು 5 ವರ್ಷ 10 ತಿಂಗಳು.

3.     ಒಬ್ಬ ವ್ಯಕ್ತಿ ಸಂಪೂರ್ಣ ಜ್ಞಾನವಂತ, ವಿವೇಕಿ ಎಂದು ಹೇಳಬೇಕಾದರೆ ಆತನು ಸರಿಯಾದ ಪರಿಪಕ್ವತೆಯನ್ನು ಪಡೆದಿರಬೇಕಾಗುತ್ತದೆ. ಪರಿಪಕ್ವತೆ ಕಲಿವಿನಿಂದ ಬರುತ್ತದೆ. ಕಲಿವಿಗೂ ಮತ್ತು ಪರಿಪಕ್ವತೆಗೂ ನಿಕಟವಾದ ಸಂಬಂಧವಿದೆ.

4.     ಪಕ್ವತೆ ಮತ್ತು ಕಲಿಕೆಯಿಂದ ವಿಕಾಸಕ್ರಿಯೆಗಳುಂಟಾಗುತ್ತವೆ. ಪಕ್ವತೆ ಮತ್ತು ಕಲಿಕೆಗಳೆರಡೂ ವಿಕಾಸಕ್ಕೆ ಕಾರಣಗಳಾಗಿವೆ. ಇವೆರಡೂ ಒಂದಕ್ಕೊಂದು ಸಹಕಾರಿಯಾಗಬಲ್ಲವು ಅಥವಾ ಅದನ್ನು ಕುಂಠಿತಗೊಳಿಸಬಲ್ಲವು.

5.     ಕಲಿಕೆ ಫಲಿಸಬೇಕಾದರೆ ಪಕ್ವತೆ ಅನಿವಾರ್ಯ, ಪಕ್ವವಾಗಿಲ್ಲದ ಮಗುವಿಗೆ ಕಲಿಸಲು ಪ್ರಯತ್ನಿಸಿದರೆ ಪ್ರಯೋಜನವಾಗುವುದಿಲ್ಲ.

6.     ಪಕ್ವತೆ ಜನ್ಮದತ್ತವಾಗಿ ಅಥವಾ ಅನುವಂಶೀಯತೆಯಿಂದ ಬಂದ ಸಾಮರ್ಥ್ಯಗಳನ್ನು ಅರಳುವಂತೆ ಮಾಡುತ್ತದೆ. ಅದಕ್ಕೆ ತರಬೇತಿಯ ಅವಶ್ಯಕತೆ ಇದೆ.

7.     ಅಪಕ್ವತೆಯುಳ್ಳ ಮಕ್ಕಳಿಗೆ ಅಂದರೆ ತೀರ ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳನ್ನು ಶಾಲೆಗೆ ಸೇರಿಸುವುದು ಅಥವಾ ವಯಸ್ಸಿಗೆ ಮೀರಿದ ತರಬೇತಿಗೆ ಸೇರಿಸಿ ಶಕ್ತಿಮೀರಿ ತರಬೇತಿಯನ್ನು ನೀಡುವುದರಿಂದ, ವಯಸ್ಸಿಗೆ ಮೀರಿದ ಪಠ್ಯ ವಸ್ತುವನ್ನು ಕಲಿಯಲು ಒತ್ತಾಯ ಪಡಿಸುವುದರಿಂದ ಮಗುವಿನ ದೈಹಿಕ, ಬೌದ್ದಿಕ ಹಾಗೂ ಸಾಮಾಜಿಕ ಬೆಳವಣಿಗೆಯು ಕುಂಠಿತವಾಗಿ ಮಗು ಕಲಿಕೆಯಲ್ಲಿ ಹಿಂದುಳಿಯುವುದರಲ್ಲಿ ಸಂಶಯವಿಲ್ಲ.

8.     ಕಲಿಕೆ-ಪಕ್ವತೆ ಹಾಗೂ ವಿಕಾಸ ಇವುಗಳ ನಡುವೆ ಪರಸ್ಪರ ಸಂಬಂಧ ಏರ್ಪಡಿಸಿ ಮಗುವಿನ ತರಬೇತಿಗೊಳಿಸುವುದರಿಂದ ಕಲಿಕೆ ಯಶಸ್ವಿಯಾಗುತ್ತದೆ.

ಪಕ್ವತೆಯ ಶೈಕ್ಷಣಿಕ ನಿಹಿತಾರ್ಥಗಳು/ಕಲಿಕೆ ಮತ್ತು ಪಕ್ವತೆಗಿರುವ ಸಂಬಂಧ

1.     ಪಕ್ವತೆ ಹಾಗೂ ಕಲಿಕೆಗಳೆರಡೂ ಅಂತರ ಸಂಬಂಧ ಹಾಗೂ ಅಂತರಾವಲಂಬನೆ ಹೊಂದಿವೆ ಎಂದು ತಿಳಿಯುತ್ತದೆ.

2.     ಪಕ್ವತೆಯು ಕಲಿಕೆಯನ್ನು ಸುಲಭಗೊಳಿಸುವುದು.

3.     ಪಕ್ವತೆ ತಲುಪುವವರೆಗೂ ಕಲಿಕೆಗೆ ಒತ್ತಾಯಿಸಬಾರದು.

4.     ತರಗತಿಯ ಪ್ರವೇಶಕ್ಕೆ ವಯಸ್ಸನ್ನು ನಿಗದಿಪಡಿಸುತ್ತದೆ.

5.     ದೈಹಿಕ ಮತ್ತು ಮಾನಸಿಕ ಪಕ್ವತೆಯಾಗದೆ ಕಲಿಕೆ ಉಂಟಾಗಲಾರದು.

6.     ಪಕ್ವತೆಗನುಸಾರವಾಗಿ ಪಠ್ಯಕ್ರಮ ನಿರ್ಧರಿಸುವುದು ಸೂಕ್ತ.

7.     ಪಕ್ವತೆಯು ವ್ಯಕ್ತಿಯಲ್ಲಿ ಕಲಿಕಾ ಸಾಮರ್ಥ್ಯ, ಗ್ರಹಿಕೆಯನ್ನು ಹೆಚ್ಚಿಸುತ್ತದೆ.

8.     ಪಕ್ವತೆಗನುಸಾರವಾಗಿ ಕಲಿಕಾ ಚಟುವಟಿಕೆಯನ್ನು ನಿಯೋಜಿಸಬೇಕು.

ಪಕ್ವತೆಯ ಶೈಕ್ಷಣಿಕ ಉಪಯುಕ್ತತೆ/ಶೈಕ್ಷಣಿಕ ನಿಹಿತಾರ್ಥಗಳು

1.     ಶಿಕ್ಷಕರು ಮಕ್ಕಳ ವಯೋಮಿತಿಗಳಿಗನುಸಾರವಾಗಿ ಶಾಲೆಗೆ ಸೇರಿಸಿಕೊಳ್ಳುವುದಕ್ಕೆ ಸಹಾಯಕವಾಗುತ್ತದೆ.

2.     ಮಕ್ಕಳ ವಯೋಮಿತಿ, ಆಸಕ್ತಿ, ಅಭಿರುಚಿಗಳಿಗೆ ಅನುಸಾರವಾಗಿ ಪಠ್ಯಕ್ರಮವನ್ನು ರಚಿಸಲು ಉಪಯುಕ್ತವಾಗಿದೆ.

3.     ವಿದ್ಯಾರ್ಥಿಗಳ ಪಕ್ವತೆಗಳ ಆಧಾರದ ಮೇಲೆ ಶಿಕ್ಷಕರು ಬೋಧನೆಗಳನ್ನು ಅಳವಡಿಸಿಕೊಳ್ಳಲು ಸಹಾಯಕವಾಗಿದೆ.

4.     ಮಗು ಪಕ್ವತೆಯ ವಯಸ್ಸಿನ ಹಂತಕ್ಕೆ ಬರುವವರೆಗೂ ಕಲಿಸುವ ಪ್ರಯತ್ನ ಮಾಡಬಾರದೆಂದು ತಿಳಿಸುತ್ತದೆ.

5.     ಮಗುವಿನ ದೈಹಿಕ, ಬೌಧ್ಧಿಕ ಮತ್ತು ಸಂವೇಗಾತ್ಮಕ ಪಕ್ವತೆಯಾಗದೆ ಕಲಿಕೆಯು ಉಂಟಾಗುವುದಕ್ಕೆ ಸಾಧ್ಯವಿಲ್ಲ ಎಂಬ ವಿಚಾರ ತಿಳಿಯುವುದಕ್ಕೆ ಉಪಯುಕ್ತವಾಗಿದೆ.

6.     ಪಕ್ವತೆಯು ಅನುವಂಶೀಯ ಮತ್ತು ಪರಿಸರಗಳ ಮೇಲೆ ಪ್ರಭಾವ ಬೀರುತ್ತದೆಂಬುದನ್ನು ತಿಳಿಸುವುದರಿಂದ ಶಾಲೆಯಲ್ಲಿ ಉತ್ತಮ ಪರಿಸರವನ್ನು ಒದಗಿಸಲು ಸಾಧ್ಯವಾಗುತ್ತದೆ.

7.     ಪಕ್ವತೆ ಹೊಂದಿಲ್ಲದ ಮಗುವನ್ನು ಗುರುತಿಸಿ ಸಲಹೆ, ಸೂಚನೆ ಮತ್ತು ಮಾರ್ಗದರ್ಶನವನ್ನು ನೀಡಲು ಸಹಾಯಕವಾಗಿದೆ.

8.     ಪಕ್ವತೆಗಳ ಆಧಾರದ ಮೇಲೆ ಮಗುವಿನ ಬುದ್ಧಿಶಕ್ತಿಯನ್ನುಗಮನಿಸಿ, ವಿಶೇಷವಾದ ಚಟುವಟಿಕೆಗಳನ್ನು ನೀಡಲು ಸಹಾಯಕವಾಗಿದೆ.

9.     ದೈಹಿಕ ಮತ್ತು ಮಾನಸಿಕ ಪಕ್ವತೆ ಹೊಂದಿದ ಮಕ್ಕಳನ್ನು ಆಯ್ಕೆ ಮಾಡಿ ಆಸಕ್ತಿ, ಆಭಿರುಚಿಗೆ ತಕ್ಕಂತೆ ಸೃಜನಾತ್ಮಕ ಶಕ್ತಿಯನ್ನು ಮಗುವಿನಿಂದ ಹೊರಹಾಕಿಸುವುದರಲ್ಲಿ ಉಪಯುಕ್ತವಾಗಿದೆ.

10.   ಪಕ್ವತೆ ಮತ್ತು ಕಲಿಕೆಯು ಸಂಬಂಧ ಹೊಂದಿರುತ್ತದೆ ಎಂಬ ಅರಿವನ್ನು ಶಿಕ್ಷಕರು ತಿಳಿಯುವುದಕ್ಕೆ ಸಾಧ್ಯವಿದೆ.

ಅಭಿಪ್ರೇರಣೆ

           Motivation ಎಂಬ ಪದವು ಲ್ಯಾಟಿನ್‌ ಭಾಷೆಯ Movers ಎಂಬ ಪದದಿಂದ ಬಂದಿದೆ.  Movers ಎಂದರೆ ʼಚಲಿಸುವಂತೆ ಮಾಡುʼ, ಕಾರ್ಯೋನ್ಮುಖವಾಗುವಂತೆ ಮಾಡುʼ ಎಂದರ್ಥ. ಅಭಿಪ್ರೇರಣೆ ಎಂದರೆ ಜೀವಿಯನ್ನು ಸಕ್ರೀಯವಾಗುವಂತೆ ಮಾಡುವ ಪ್ರಕ್ರಿಯೆ. ಜೀವಿಯನ್ನು ಕ್ರಿಯಾಶೀಲಗೊಳಿಸಿ, ಅವನು ಶಕ್ತಿಯುತವಾಗಿ ಕಾರ್ಯ ನಿರ್ವಹಿಸುವಂತೆ ಮಾಡುವ ಪ್ರಕ್ರಿಯೆಯೇ ಅಭಿಪ್ರೇರಣೆ.

ವ್ಯಾಖ್ಯಾನಗಳು:

  1. ಕ್ರೋ ಮತ್ತು ಕ್ರೋ: - “ಪ್ರೇರಣೆಯು ಕಲಿಕೆಯಲ್ಲಿ ಆಸಕ್ತಿಯನ್ನು ಹುಟ್ಟಿಸುವ ಅಂಶವಾಗಿದ್ದು ಕಲಿಕೆಗೆ ಆಧಾರವಾಗಿದೆ”.
  2. ಮೋರ್‌ ಮತ್ತು ಮ್ಯಾಕ್ಸ್: -‌ “ಅಭಿಪ್ರೇರಣೆಯು ವರ್ತನೆಯನ್ನು ಹುರಿದುಂಬಿಸುವ, ಪೋಷಿಸುವ ಮಾತ್ತು ನಿರ್ದೇಶಿಸುವ ಸಂಕೀರ್ಣ ಆಂತರಿಕ ಪ್ರಕ್ರಿಯೆಗಳ ಸಂಯೋಜನೆಯಾಗಿದೆ”.
  3. ಸ್ಕಿನ್ನರ್: -‌ “ಶಾಲಾ ಕಲಿಕೆಯಲ್ಲಿ ಅಭಿಪ್ರೇರಣೆಯು ಅಪೇಕ್ಷಿತ ವರ್ತನೆಯನ್ನು ಹುರಿದುಂಬಿಸುವ, ಕಾಪಾಡುವ, ಪೋಷಿಸುವ ಮತ್ತು ನಿರ್ದೇಶಿಸುವುದನ್ನು ಒಳಗೊಂಡಿರುತ್ತದೆ.”
  4. “ಅಭಿಪ್ರೇರಣೆಯೆಂದರೆ ನಿರ್ದಿಷ್ಟ ಗುರಿಯೆಡೆಗೆ ಕಾರ್ಯೋನ್ಮುಖನಾಗುವಂತೆ ಮಾಡುವ ಪ್ರಕ್ರಿಯೆಯಾಗಿದೆ. ಆದರೆ ಈ ಮೊದಲು ಆ ಗುರಿಯ ಕಡೆಗೆ ಅತ್ಯಲ್ಪ ಅಥವಾ ಯಾವುದೇ ಆಕರ್ಷಣೆಯಿಲ್ಲದಿರಬಹುದು”.

                                                                                                      …. ಹೆಚ್. ‌ ಡಬ್ಲು. ಬರ್ನಾರ್ಡ್

  1. ಅಭಿಪ್ರೇರಣೆಯೆಂದರೆ ಒಂದು ಅಥವಾ ಅದಕ್ಕಿಂತ ಹೆಚ್ಚಿನ ಪರಿಣಾಮ ಉಂಟುಮಾಡಲು ವ್ಯಕ್ತಿಯನ್ನು ಕ್ರಿಯಾಶೀಲನಾಗುವಂತೆ ಪ್ರಚೋದಿಸುವುದಾಗಿದೆ”.                 …. ಆಟ್ಕಿನ್ಸನ್
  2. ಅಭಿಪ್ರೇರಣೆಯೆನ್ನುವುದು, ನಿರಂತರ, ಚಲನಶೀಲ ಹಾಗೂ ಸಂಕೀರ್ಣ ಪ್ರಕ್ರಿಯೆಯಾಗಿದೆ ಮತ್ತು ಇದು ಪ್ರತಿಯೊಂದು ಜೀವಿಯಲ್ಲಿಯೂ ಕಂಡುಬರುವ ಸಾಮಾನ್ಯ ಲಕ್ಷಣವಾಗಿದೆ” …. ಮ್ಯಾಸ್ಲೊ
  3. “ಶಾಲಾ ಕಲಿಕೆಯಲ್ಲಿ ಅಭಿಪ್ರೇರಣೆಯು ಅಪೇಕ್ಷಿತ ವರ್ತನೆಯನ್ನು ಹುರಿದುಂಬಿಸುವ, ಪೋಷಿಸುವ ಮತ್ತು ನಿರ್ದೇಶಿಸುವುದನ್ನು ಒಳಗೊಳ್ಳುತ್ತದೆ.”   ……. ಸ್ಕಿನ್ನರ್

 

ಅಭಿಪ್ರೇರಣೆಯ ಕಾರ್ಯಗಳು:

  1. ಅಭಿಪ್ರೇರಣೆಯು ವ್ಯಕ್ತಿಯನ್ನು ಕ್ರಿಯೆಯಲ್ಲಿ ತೊಡಗುವಂತೆ ಮಾಡುತ್ತದೆ. ಅದು ವ್ಯಕ್ತಿಯಲ್ಲಿ ಶಕ್ತಿಯನ್ನು ತುಂಬುತ್ತದೆ. ಅಂದರೆ ವ್ಯಕ್ತಿಯಲ್ಲಿ ಆತನಲ್ಲಿ ಶಕ್ತಿಯನ್ನು ಬಿಡುಗಡೆ ಮಾಡಿ ಅವನು ಕ್ರಿಯಾಶೀಲನಾಗುವಂತೆ ಮಾಡುತ್ತದೆ.
  2. ಅಭಿಪ್ರೇರಣೆಯು ವ್ಯಕ್ತಿಯ ಕ್ರಿಯೆಯನ್ನು ಅಥವಾ ಚಟುವಟಿಕೆಯನ್ನು ನಿರ್ದೇಶಿಸುತ್ತದೆ ಅಥವಾ ಅದರಲ್ಲಿ ಆಸಕ್ತಿ ಉಳಿದುಕೊಳ್ಳುವಂತೆ ಮಾಡುತ್ತದೆ. ಗುರಿಯನ್ನು ತಲುಪಲು ಕಾರ್ಯಗತಿಯಲ್ಲಿ, ಅವನು ಎಲ್ಲಾ ಸಾಧ್ಯ ಪರ್ಯಾಯಗಳನ್ನು ಪ್ರಯತ್ನಿಸಿ ನೋಡುತ್ತಾನೆ ಮತ್ತು ಅಂತಿಮವಾಗಿ ಸೂಕ್ತವಾದುದನ್ನು ಆಯ್ಕೆ ಮಾಡಿಕೊಳ್ಳುತ್ತಾನೆ.
  3. ಗುರಿಯನ್ನು ತಲುಪುವವರೆಗೂ ಅವನು ಚಟುವಟಿಕೆಯಲ್ಲಿ ತೊಡಗಿದ್ದು ಮುಂದುವರಿಯುತ್ತಿರುತ್ತಾನೆ. ಆಗಲೇ ಅವನು ಮನಃ ಶಾಂತಿಯನ್ನು ಹೊಂದಿ ಮಾನಸಿಕ ತುಯ್ತದಿಂದ ಬಿಡುಗಡೆ ಹೊಂದುತ್ತಾನೆ ಮತ್ತು ಮಾನಸಿಕ ಸಮತೋಲನವನ್ನು ಪಡೆದುಕೊಳ್ಳುತ್ತಾನೆ. ಆಭಿಪ್ರೇರಣೆ ವ್ಯಕ್ತಿಯು ಸಾಧಿಸಲು ರೂಪಿಸಿಕೊಂಡಿರುವ ಗುರಿಯ ಕಡೆ ಕೇಂದ್ರೀಕೃತವಾಗಿರುತ್ತದೆ.

ಉದಾ: ಪರೀಕ್ಷೆಯಲ್ಲಿ ಉತ್ತಮ ಶ್ರೇಣಿ ಪಡೆಯಲು ಅಭಿಪ್ರೇರಿತನಾಗಿರುವ ವಿದ್ಯಾರ್ಥಿ, ಆ ಗುರಿಯನ್ನು ಸಾಧಿಸಲು ಸೂಕ್ತ ಮಾರ್ಗವನ್ನು ಆಯ್ದುಕೊಂಡು ತನ್ನ ಸಂಪೂರ್ಣ ಗಮನವನ್ನು ಅದರ ಕಡೆ ಕೇಂದ್ರೀಕರಿಸುತ್ತಾನೆ. ಗುರಿಯ ಸಾಧನೆಯ ನಂತರ ಆ ಪ್ರೇರಣೆ ಕೊನೆಗೊಳ್ಳುತ್ತದೆ.

ಅಭಿಪ್ರೇರಣೆಯ ವಿಧಗಳು:

  1. ಆಂತರಿಕ ಅಥವಾ ಸ್ವಾಭಾವಿಕ ಅಥವಾ ಸಹಜ ಅಭಿಪ್ರೇರಣೆ:

      ಎಲ್ಲಾ ಮನುಷ್ಯರಿಗೂ ಆಂತರಿಕವಾಗಿ ಜನ್ಮದತ್ತವಾದ ಸಹಜ ಪ್ರವೃತ್ತಿಗಳು, ಅವಶ್ಯಕತೆಗಳು, ಆಕಾಂಷೆಗಳು, ಆಸಕ್ತಿಗಳು, ಬಯಕೆಗಳು ಇರುತ್ತವೆ. ವ್ಯಕ್ತಿಯ ಜನ್ಮಜಾತವಾಗಿ ಬಂದಂತಹ ಸಹಜ ಪ್ರವೃತ್ತಿಗಳ ಕಾರಣದಿಂದ ವ್ಯಕ್ತಿ ನಿರ್ಧಿಷ್ಟ ಕಾರ್ಯಗಳನ್ನು ಮಾಡಲು ಸಹಜವಾಗಿ ಪ್ರೇರೇಪಿತನಾಗುತ್ತಾನೆ. ಇದನ್ನು ʼಆಂತರಿಕ ಅಭಿಪ್ರೇರಣೆʼ ಎನ್ನುತ್ತೇವೆ.

        ವ್ಯಕ್ತಿ ಯಾವುದೇ ಒತ್ತಡವಿಲ್ಲದೆ ಸಹಜವಾಗಿ ಸ್ವಾಭಾವಿಕವಾಗಿ ಒಂದು ನಿರ್ದಿಷ್ಠ ಕಾರ್ಯ ಮಾಡಲು ಆಸಕ್ತಿಯಿಂದ ತೊಡಗುತ್ತಾನೆ. ಆ ಕಾರ್ಯ ಮಾಡುವುದರಿಂದ ಅವನಿಗೆ ಸಂತೋಷ, ಸಂತೃಪ್ತಿಗಳು ದೊರೆಯುತ್ತವೆ. ಈ ಸಹಜ ಸಂತೋಷ, ಸಂತೃಪ್ತಿಗಳ ಫಲವಾಗಿ ಆ ಕಾರ್ಯದಲ್ಲಿ ಹೆಚ್ಚಿನ ಸಾಧನೆ ಮಾಡಿ ಗುರಿ ಮುಟ್ಟುವಲ್ಲಿ ಯಶಸ್ವಿಯಾಗುತ್ತಾನೆ.

  1. ಬಾಹ್ಯ ಅಭಿಪ್ರೇರಣೆ:

       ಎಲ್ಲಾ ಮಕ್ಕಳಿಗೂ ಎಲ್ಲಾ ವೇಳೆಯಲ್ಲೂ ಆಂತರಿಕ ಅಭಿಪ್ರೇರಣೆ ಇರುವುದಿಲ್ಲ. ಆಂತರಿಕ ಅಭಿಪ್ರೇರಣೆ ಇಲ್ಲದಿದ್ದಾಗ್ಯೂ ಕಲಿಕಾ ಕಾರ್ಯ ಮುಂದುವರಿಯಬೇಕು. ಭೌತಿಕ ಸಾಮರ್ಥ್ಯದ ಹಾಗೂ ಸಹಜ ಪ್ರವೃತ್ತಿಗಳ ಕೊರತೆಯ ಕಾರಣದಿಂದ ಕಲಿಯುವಲ್ಲಿ ಆಂತರಿಕ ಅಭಿಪ್ರೇರಣೆ ಇಲ್ಲವಾಗುತ್ತದೆ. ಇಂತಹ ಸಂದರ್ಭದಲ್ಲಿ ಬಾಹ್ಯ ಅಂಶಗಳ ಮೂಲಕ ವ್ಯಕ್ತಿಯಲ್ಲಿ ಅಭಿಪ್ರೇರಣೆಯನ್ನು ಮೂಡಿಸಬೇಕು. ಇಂತಹ ಅಭಿಪ್ರೇರಣೆಗಳಿಗೆ ಬಾಹ್ಯ ಅಭಿಪ್ರೇರಣೆ ಎಂದು ಕರೆಯಲಾಗುತ್ತದೆ. ಪ್ರಶಂಸೆ, ಬಹುಮಾನ, ಗೆಲುವಿನ ಆಕಾಂಕ್ಷೆ, ಗೆಲುವಿನ ಇಚ್ಚೆ ಇತ್ಯಾದಿ ಅನೇಕ ಕ್ರಮಗಳ ಮೂಲಕ ಕಲಿಯುವವನಲ್ಲಿ ಬಾಹ್ಯ ಅಭಿಪ್ರೇರಣೆಯನ್ನು ಮೂಡಿಸಬಹುದು.

ಮಕ್ಕಳಲ್ಲಿ ಬಾಹ್ಯ ಅಭಿಪ್ರೇರಣೆಯನ್ನು ಮೂಡಿಸುವ ವಿಧಾನಗಳು:

  1. ಕಲಿಯುವ ಆಶಯ: ಮಕ್ಕಳಲ್ಲಿ ಕಲಿಯುವ ಆಶಯ ಅಥವಾ ಉದ್ದೇಶ ಇಲ್ಲದಿದ್ದರೆ ಕಲಿಕಾ ಕಾರ್ಯ ಪರಿಣಾಮಕಾರಿಯಾಗಿ ಆಗುವುದಿಲ್ಲ. ಎಷ್ಟೋ ವೇಳೆ ಕಲಿಯುವ ಉದ್ದೇಶ ಇಲ್ಲದೇ ಹೋದಾಗ್ಯೂ ಮಕ್ಕಳು ಕಲಿಕೆಯಲ್ಲಿ ತೊಡಗಿರುತ್ತಾರೆ. ಆದರೆ ಮಕ್ಕಳು ಕಲಿಯುವ ಸ್ಪಷ್ಟ ಉದ್ದೇಶ ಅರಿತಿದ್ದರೆ, ಕಲಿಯಲು ಉತ್ತಮ ಪ್ರಯತ್ನಗಳನ್ನು ಮಾಡಿ ಯಶಸ್ವಿಯಾಗುತ್ತಾರೆ.
  2. ಸಾಧನೆ-ಅಭಿಪ್ರೇರಣೆ: ಯಾವುದಾದರೂ ಕಾರ್ಯದಲ್ಲಿ ಯಶಸ್ವಿಯಾಗಬೇಕಾದಲ್ಲಿ ಸಾಧಿಸುವ ಪ್ರೇರಣೆ ಇರಬೇಕಾಗುತ್ತದೆ. ಅತ್ಯುತ್ತಮವಾದುದನ್ನು ಸಾಧಿಸುವ ಆಕಾಂಷೆ, ಛಲ ಇದ್ದಲ್ಲಿ ವ್ಯಕ್ತಿ  ಆ ನಿಟ್ಟಿನಲ್ಲಿ ಕಾರ್ಯೋನ್ಮುಖನಾಗಿ ಸತತ ಪ್ರಯತ್ನಗಳ ಮೂಲಕ ಗುರಿ ಸಾಧಿಸುತ್ತಾನೆ. ಮಕ್ಕಳಲ್ಲಿ ಶಿಕ್ಷಕರು ಸಾಧನೆ ಅಭಿಪ್ರೇರಣೆಯನ್ನು ಮೂಡಿಸಬೇಕು. ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕ ಗಳಿಸುವ ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದುವ ಅಥವಾ ಯಶಸ್ವಿ ವ್ಯಕ್ತಿಯಾಗುವ ಆಕಾಂಷೆಗಳನ್ನು ಮಕ್ಕಳಲ್ಲಿ ಬೆಳೆಸಬೇಕು.
  3. ತೊಂದರೆ ತೆಗೆದುಕೊಳ್ಳುವ ಮನೋಭಾವ: ಜೀವನದಲ್ಲಿ ಯಾವುದಾದರೂ ಸಾಧನೆಗೆ ವ್ಯಕ್ತಿ ತೊಂದರೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಈ ತೊಂದರೆಗಳು ವ್ಯಕ್ತಿ ಎದುರಿಸಲು, ಪರಿಹರಿಸಲು ಸಾಧ್ಯವಾಗುವಂತೆ ಸಾಧಾರಣ ವಾಗಿರಬೇಕು. ಯಾವಾಗಲೂ ಸುಖ, ನೆಮ್ಮದಿಗೆ ಅಂಟಿಕೊಳ್ಳದೆ ಕೆಲವು ತೊಂದರೆಗಳನ್ನು ತೆಗೆದುಕೊಂಡರೆ ಮಾತ್ರ ಯಶಸ್ಸು ಸಾಧ್ಯವಾಗುತ್ತದೆ. ಶಿಕ್ಷಕರು ಮಕ್ಕಳಲ್ಲಿ ತೊಂದರೆ ತೆಗೆದುಕೊಳ್ಳುವ ಮನೋಭಾವವನ್ನು ಬೆಳೆಸಬೇಕು.
  4. ಗೆಲ್ಲುವ ವಿಶ್ವಾಸ, ಸೋಲುವ ಭಯ: ಜೀವನದಲ್ಲಿ ಯಶಸ್ಸಿಗೆ ವಿಶ್ವಾಸ ಮತ್ತು ಪ್ರಯತ್ನ ಮುಖ್ಯ. ಗೆಲ್ಲುವ ವಿಶ್ವಾಸದಮೂಲಕ ಪ್ರಯತ್ನಗಳನ್ನು ಮಾಡಿದರೆ ಉತ್ತಮ ಫಲಿತಾಂಶ ದೊರೆಯುತ್ತದೆ. ಆದರೆ ಅತಿಯಾದ ವಿಶ್ವಾಸ ಒಳ್ಳೆಯದಲ್ಲ. ಈ ಕಾರಣದಿಂದ ಅಲ್ಪ ಪ್ರಮಾಣದ ಸೋಲಿನ ಭಯವು ಸಹಾ ಗೆಲ್ಲುವುದಕ್ಕೆ ಸಹಾಯ ಮಾಡುತ್ತದೆ. ಪರೀಕ್ಷೆಯಲ್ಲಿ ಉತ್ತಮ ಸಾಧನೆಗೆ ವ್ಯಾಪಾರ ಅಥವಾ ಉದ್ದಿಮೆಗಳ ಯಶಸ್ಸಿಗೆ, ಯುದ್ಧದಲ್ಲಿ ಗೆಲುವಿಗೆ ಅಧಿಕ ಗೆಲ್ಲುವ ವಿಶ್ವಾಸ ಮತ್ತು ಅಲ್ಪ ಸೋಲಿನ ಭಯ ಸಹಾಯಕವಾಗುತ್ತದೆ.
  5. ಆಕಾಂಕ್ಷೆಯ ಮಟ್ಟ: “ಆಕಾಂಕ್ಷೆಯ ಮಟ್ಟ” ಪರಿಕಲ್ಪನೆಯನ್ನು ಮೊದಲ ಬಾರಿಗೆ ಬಳಸಿದವರು “ಹಾಪ್” ‌ ಎಂಬ ಜರ್ಮನಿಯ ಮನೋವಿಜ್ಞಾನಿ. ಜೀವನದಲ್ಲಿ ಎಲ್ಲಾ ವ್ಯಕ್ತಿಗಳಿಗೂ ಹಲವು ಗುರಿ ರುತ್ತವೆ. ವ್ಯಕ್ತಿಗೆ ಈ ಗುರಿಯನ್ನು ಸಾಧಿಸುವ ಆಕಾಂಕ್ಷೆಗಳು ಇರುತ್ತವೆ. ಸಾಧಿಸುವ ವೇಳೆ ಒಂದು ನಿರೀಕ್ಷೆ ಮಟ್ಟ ಇರುತ್ತದೆ. ವ್ಯಕ್ತಿಯು ತಾನು ಗುರಿ ಸಾಧಿಸಲು ಇಚ್ಚಿಸುವ ಕಾರ್ಯದ ಮಟ್ಟವನ್ನು “ಆಕಾಂಕ್ಷೆಯ ಮಟ್ಟ” ಎನ್ನುತ್ತೇವೆ. ಆಕಾಂಕ್ಷೆಯ ಮಟ್ಟವು ವ್ಯಕ್ತಿಯ ಆತ್ಮವಿಶ್ವಾಸದ ಮಟ್ಟವನ್ನು ಸೂಚಿಸುತ್ತದೆ. ಆಕಾಂಕ್ಷೆಯ ಮಟ್ಟ ಅತಿ ಕ್ಲಿಷ್ಟವಾಗಿದ್ದರೂ ಯಶಸ್ಸು ಸಾಧ್ಯವಾಗುವುದಿಲ್ಲ. ಅತಿ ಸುಲಭವಾದರೆ ವ್ಯಕ್ತಿಗೆ ಸಂತೋಷ ಸಿಗುವುದಿಲ್ಲ. ವ್ಯಕ್ತಿ ತಾನು ರೂಪಿಸುವ ಆಕಾಂಕ್ಷೆಯ ಮಟ್ಟ ಮಧ್ಯಸ್ಥವಾಗಿರಬೇಕು ಮತ್ತು ವಾಸ್ತವವಾಗಿರಬೇಕು. ಆಗ ಸಾಧನೆ ಸಾಧ್ಯವಾಗುತ್ತದೆ. ಶಿಕ್ಷಣದಲ್ಲಿ ಮಕ್ಕಳು ಸಾಧಿಸಲು ಸಾಧ್ಯವಾಗುವಂತಹ ಗುರಿಗಳನ್ನು ರೂಪಿಸಿಕೊಳ್ಳಲು ನೆರವಾಗಬೇಕು.
  6. ಪ್ರಶಂಸೆ ಮತ್ತು ತೆಗಳಿಕೆ: ಹೊಗಳಿಕೆ, ಪ್ರಶಂಸೆಗಳು ಬುದ್ದಿವಂತ ಮಕ್ಕಳಿಗಿಂತ ಸಾಧಾರಣ ಮತ್ತು ಸಾಧಾರಣಕ್ಕಿಂತ ಕೆಳಗಿರುವ ಮಕ್ಕಳನ್ನು ಪ್ರೇರೇಪಿಸುವ ಮತ್ತು ತೆಗಳಿಕೆಯು ಬುದ್ದಿವಂತ ಮಕ್ಕಳ ಮೇಲೆ ಅಗತ್ಯ ಪ್ರಭಾವ ಬೀರುತ್ತದೆ ಎಂದು ಅದ್ಯಯನಗಳಿಂದ ತಿಳಿದು ಬಂದಿದೆ. ಶಿಕ್ಷಕರು ಯಾವ ಸಂದರ್ಭದಲ್ಲಿ ಯಾವ ಪ್ರಮಾಣದಲ್ಲಿ ಹೊಗಳಿಕೆ ಮತ್ತು ತೆಗಳಿಕೆಗಳನ್ನು ಉಪಯೋಗಿಸಿ ಮಕ್ಕಳನ್ನು ಕಲಿಕೆಗೆ ಪ್ರೇರೇಪಿಸಬೇಕು ಎಂಬುದನ್ನು ನಿರ್ಧರಿಸಿ ಕ್ರಮ ಕೈಗೊಳ್ಳಬೇಕು.
  7. ಬಹುಮಾನ ಮತ್ತು ಶಿಕ್ಷೆ: ಅಪೇಕ್ಷಿತ ವರ್ತನೆ ಮತ್ತು ನಿರ್ಧಿಷ್ಟ ಮಟ್ಟದ ಕಲಿಕೆಯನ್ನು ತೋರ್ಪಡಿಸಿದಾಗ, ಸೂಕ್ತಬಹುಮಾನ ನೀಡುವುದರಿಂದ ಪುಷ್ಟೀಕರಣಗೊಂಡು ಉತ್ತಮ ಸಾಧನೆ ತೋರುತ್ತಾರೆ. ಶಿಕ್ಷಕರು ಯಾವ ಸಾಧನೆಗೆ ಯಾವ ರೀತಿಯ ಬಹುಮಾನ ನೀಡಬೇಕೆಂದು ವಿವೇಚಿಸಿ ತೀರ್ಮಾನ ಕೈಗೊಳ್ಳಬೇಕು.
  8. ಸ್ಪರ್ಧೆ ಮತ್ತು ಸಹಕಾರ: ಮಕ್ಕಳಲ್ಲಿ ಆರೋಗ್ಯಕರ ಸ್ಪರ್ಧೆಗಳನ್ನು ಪ್ರೋತ್ಸಾಹಿಸುವುದರಿಂದ ಪ್ರಯತ್ನಗಳು ಹೆಚ್ಚಿ ಉತ್ತಮ ಫಲಿತಾಂಶ ದೊರೆಯುತ್ತದೆ. ಆದರೆ ತೀವ್ರ ಸ್ಪರ್ಧೆಗಳಿಂದ ಅನಗತ್ಯ ಒತ್ತಡ, ಆತಂಕಗಳು ಬೆಳೆದು ಸ್ಪರ್ಧಿಗಳಲ್ಲಿ ದ್ವೇಷ, ಅಸೂಯೆಯ ಭಾವನೆಗಳು ಬೆಳೆಯಬಹುದು.

      ಆದ್ದರಿಂದ ಸ್ಪರ್ಧೆಯ ಬದಲಾಗಿ ಸಹಕಾರದ ಮೂಲಕ ಮಕ್ಕಳನ್ನು ಕಲಿಕೆಗೆ ಪ್ರೇರೇಪಿಸಬಹುದು. ಮಕ್ಕಳನ್ನು ಚಿಕ್ಕ ಗುಂಪುಗಳಾಗಿ ವಿಂಗಡಿಸಿ ಪ್ರತಿ ಗುಂಪಿಗೆ ನಿರ್ಧಿಷ್ಟ ಯೋಜನಾ ಕಾರ್ಯಗಳನ್ನು ವಹಿಸಬೇಕು. ಪ್ರತಿ ಗುಂಪಿಗೆ ಸಮರ್ಥ ನಾಯಕನನ್ನು ನೇಮಿಸಬೇಕು. ಗುಂಪಿನ ಪ್ರತಿ ಸದಸ್ಯನೂ ಇರರರಿಂದ ಸ್ಪೂರ್ತಿ ಪಡೆದು ಉತ್ತಮ ಸಾಧನೆ ಹೊಂದಬಹುದು.

  1. ಸಾಧನೆಯ ಪ್ರಗತಿಯ ಅರಿವು: ಮಗುವಿಗೆ ತನ್ನ ಸಾಧನೆಯ ಅರಿವು ಇದ್ದರೆ ಮುಂದೆ ಹೆಚ್ಚಿನ ಸಾಧನೆ ಮಾಡಲು ಪ್ರೇರಣೆ ನೀಡುತ್ತದೆ. ಇದಕ್ಕಾಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರಗತಿ ಪತ್ರ ನೀಡುವ ವ್ಯವಸ್ಥೆ ಉತ್ತಮ ಪರಿಣಾಮ ಬೀರುತ್ತದೆ. ವಿದ್ಯಾರ್ಥಿಗಳಿಗೆ ತಮ್ಮ ಪ್ರಗತಿಯ ಯಶಸ್ಸು ತಿಳಿಯಲು ಕಾರ್ಯಕ್ರಮದನ್ವಯ ಬೋಧನಾ ವಿಧಾನವು ಉತ್ತಮ.

ವಿದ್ಯಾರ್ಥಿಗಳಲ್ಲಿ ಪ್ರೇರಣೆಯನ್ನುಂಟು ಮಾಡಲು ಶಿಕ್ಷಕರು ಕೈಗೊಳ್ಳಬೇಕಾದ ಕ್ರಮಗಳು

  1. ಶಿಕ್ಷಕರು ಮಕ್ಕಳಲ್ಲಿ ಆಸಕ್ತಿ, ಅಭಿರುಚಿ, ಸಾಮರ್ಥ್ಯ, ಮನೋಭಾವಗಳಿಗೆ ತಕ್ಕಂತೆ ಕಲಿಕೆಯ ಅನುಭವಗಳನ್ನು ರೂಪಿಸಬೇಕು.
  2. ಶಿಕ್ಷಕರು ಪಠ್ಯ ವಿಷಯವನ್ನು ಸರಳವಾಗಿ ಅರ್ಥಪೂರ್ಣವಾಗಿ ಬೋಧಿಸಬೇಕು. ಬೋಧನಾ ಕಾರ್ಯದಲ್ಲಿ ಅಗತ್ಯವಾದ ಉದಾಹರಣೆಗಳನ್ನು ನಿದರ್ಶನಗಳನ್ನು ಕೊಡಬೇಕು.
  3. ಶಿಕ್ಷಕರು, ಮಕ್ಕಳು ತಾವು ಕಲಿಯುತ್ತಿರುವ ವಿಷಯದ ಗುರಿ ಮಾತ್ತು ಉದ್ದೇಶಗಳನ್ನು ಸ್ಪಷ್ಟವಾಗಿ ತಿಳಿದುಕೊಳ್ಳುವಂತೆ ಮಾಡಬೇಕು.
  4. ಪರಿಣಾಮಕಾರಿ ಪ್ರಾಯೋಗಿಕ ಬೋಧನಾ ಪದ್ಧತಿಗಳನ್ನು ಅಳವಡಿಸಬೇಕು.
  5. ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಆತ್ಮೀಯತೆಯಿಂದ ಪ್ರೀತಿಯಿಂದ ವರ್ತಿಸಬೇಕು.
  6. ತರಗತಿಯ ಕಲಿಕೆಯ ಅನುಭವಗಳು ಸಂತೋಷಕರವಾಗಿರುವಂತೆ ನೋಡಿಕೊಳ್ಳಬೇಕು.
  7. ತರಗತಿಯ ಬೋಧನೆಯಲ್ಲಿ ದೃಕ್-ಶ್ರವಣ ಉಪಕರಣಗಳನ್ನು ಬಳಸಬೇಕು.
  8. ವಿದ್ಯಾರ್ಥಿಗಳಿಗೆ ತಮ್ಮ ಸಾಧನೆಯ, ಪ್ರಗತಿಯ ಅರಿವನ್ನು ಮೂಡಿಸಬೇಕು.
  9. ವಿದ್ಯಾರ್ಥಿಗಳ ಕಲಿಕೆಯ ಸಾಧನೆಗೆ ಸೂಕ್ತ ಬಹುಮಾನಗಳನ್ನು ಸಾಂದರ್ಭಿಕವಾಗಿ ನೀಡಬೇಕು.
  10. ವಿದ್ಯಾರ್ಥಿಗಳಿಗೆ ಉಗ್ರ, ದೈಹಿಕ ಶಿಕ್ಷೆ ನೀಡುವುದು ಮತ್ತು ಅವಹೇಳನಕಾರಿಯಾಗಿ ಬಯ್ಯುವುದು ಸಲ್ಲದು.
  11. ಶಿಕ್ಷಕರು ತಾವು ನೀಡುವ ಶಿಕ್ಷೆಯ ಕಾರಣಗಳನ್ನು ವಿವರಿಸಬೇಕು.
  12. ವಿದ್ಯಾರ್ಥಿಗಳ ನಡುವೆ ಆರೋಗ್ಯಕರ ಸ್ಪರ್ಧೆಗೆ ಪ್ರೋತ್ಸಾಹ ನೀಡಬೇಕು.

ಅವಧಾನ

     ಕಲಿಯುವವನ ಗಮನ ಕಲಿಯುವ ವಸ್ತುವಿನ ಮೇಲೆ ಕೇಂದ್ರೀಕೃತವಾಗಿದ್ದರೆ ಮಾತ್ರ ಕಲಿವು ಸಿದ್ದಿಸುತ್ತದೆ. ಹೀಗೆ ನಿರ್ದಿಷ್ಟ ವಸ್ತುವಿನ ಕಡೆಗೆ ಗಮನ ಕೇಂದ್ರೀಕರಿಸುವಿಕೆಯನ್ನು ಅವಧಾನ ಎನ್ನುತ್ತೇವೆ. ನಿರ್ದಿಷ್ಟ ಉದ್ದೀಪನಗಳ ಕಡೆಗೆ ಗಮನ ಹರಿಸುವ ಪ್ರಕ್ರಿಯೆಯೇ ಅವಧಾನ.  ನಮ್ಮ ಸುತ್ತಮುತ್ತಲಿನ ವಾತಾವರಣದಲ್ಲಿ ಹಲವಾರು ಉದ್ದೀಪನಗಳು ಇರುತ್ತವೆ. ಯಾವ ಉದ್ದೀಪನ ನಮ್ಮ ಇಂದ್ರೀಯಗಳನ್ನು ಜಾಗೃತಗೊಳಿಸಿ ಅದರ ಕಡೆಗೆ ನಮ್ಮ ಗಮನವನ್ನು ಕೇಂದ್ರೀಕರಿಸುವಂತೆ ಮಾಡುತ್ತದೆಯೋ ಅದೇ ಅವಧಾನ. ಅವಧಾನ ಪ್ರಕ್ರಿಯೆ ಎಂದರೆ ಸಂವೇದನೆಗೆ ಅಥವಾ ಗ್ರಹಿಕೆಗೆ ಸಿದ್ದತೆಯಾಗಿದೆ ಎಂದರ್ಥ. ಅದು ಒಂದು ಕ್ರಿಯಾಶೀಲ ಪ್ರಕ್ರಿಯೆ. ಅದು ಕೆಲವು ಸಲ ಇಂದ್ರಿಯಗಳ ಮತ್ತು ಇಡೀ ನರವ್ಯೂಹದ ಹೊಂದಾಣಿಕೆಯನ್ನು ಒಳಗೊಂಡಿರುತ್ತದೆ.

ಅವಧಾನದ ಅರ್ಥ:

ʼನಮ್ಮ ಮನಃ ಶಕ್ತಿಯನ್ನು ವಿಚಾರ ವಸ್ತುವಿನ ಮೇಲೆ ಕೇಂದ್ರೀಕರಿಸುವ ಕ್ರಿಯೆಯೇ ಅವಧಾನ.”

ʼಗ್ರಹಿಕೆಗೆ ಅಗತ್ಯವಾದ ಪೂರ್ವ ಸಿದ್ದತಾ ಸ್ಥಿತಿಯೇ ಅವಧಾನ.”

ʼಅವಧಾನ ಅನುಭವದ ಕೇಂದ್ರಬಿಂದುವನ್ನು ಆಯುವ ಒಂದು ವ್ಯವಸ್ಥೆ.”

ʼತೀಕ್ಷ್ಣಗೊಂಡ ಚೇತನಾವಸ್ಥೆಯೇ ಅವಧಾನ.”

ʼಚೇತನಾವಸ್ಥೆಯ ಕ್ಷೇತ್ರದಲ್ಲಿರುವ ಒಂದು ಅಥವಾ ಎರಡು ವಸ್ತುಗಳ ಮೇಲಿನ ಮನಃಶಕ್ತಿಯ ಕೇಂದ್ರೀಕರಣವೇ ಅವಧಾನ.”

ಅವಧಾನದ ವ್ಯಾಖ್ಯಾನಗಳು:

  1. “ಒಂದು ವಸ್ತುವಿನ ಬದಲು ಮತ್ತೊಂದು ವಸ್ತುವಿನ ಮೇಲೆ ಪ್ರಜ್ಞಾನುಭವದ ಕೇಂದ್ರೀಕರಣವೇ ಅವಧಾನ. ಎಲ್ಲಾ ಸೃಜನಾತ್ಮಕ ಚಟುವಟಿಕೆಗಳಲ್ಲಿ ಇದು ಅಗತ್ಯವಾದ ಅಂಶವಾಗಿದೆ”.   ……ಡಮ್‌ವಿಲ್ಲೆ.
  2. “ಆಲೋಚನೆಯಲ್ಲಿ ಬರುವ ವಸ್ತುವನ್ನು ಮನಸ್ಸಿನಲ್ಲಿ ಸ್ಪಷ್ಟವಾಗಿ ಮೂಡಿಸುವ ವಿಧಾನವೇ ಅವಧಾನ.”

                                                                                                               …..ಜೇಮ್ಸ್ ರಾಸ್.‌

  1. “ಪರಿಸರದಲ್ಲಿರುವ ಅಸಂಖ್ಯ ಉದ್ದೀಪನಗಳಲ್ಲಿ ತನ್ನ ಆಸಕ್ತಿ ಮತ್ತು ಮನೋಧೋರಣೆಗೆ ಅನುಗುಣವಾದ ಯಾವುದಾದರೂ ಒಂದು ನಿರ್ದಿಷ್ಟುದ್ದೀಪನವನ್ನು ಆಯ್ದುಕೊಳ್ಳುವಂತೆ ಮಾಡುವ ಪ್ರಕ್ರಿಯೆಯೇ ಅವಧಾನ”.   ……. ರಾಮ್‌ನಾಥ ಶರ್ಮ.

ಅವಧಾನದ ಗುಣಲಕ್ಷಣಗಳು:

  1. ಅವಧಾನವು ಜ್ಞಾನಾತ್ಮಕವಾಗಿದ್ದು, ಎಲ್ಲಾ ವಿಧವಾದ ಮಾನಸಿಕ ಚಟುವಟಿಕೆಗಳಿಗೂ ಅತ್ಯಗತ್ಯವಾಗಿದೆ, ಉದಾ: ಅರಿಯಲು, ಭಾವಿಸುವುದಕ್ಕೆ ಹಾಗೂ ಸಂತೋಷದಿಂದ ಒಪ್ಪುವುದು. ಸಂಕ್ಷಿಪ್ತವಾಗಿ ಹೇಳುವುದಾದರೆ ಪರಿಪೂರ್ಣ ವ್ಯಕ್ತಿತ್ವದ ಚಟುವಟಿಕೆಯಾಗಿದೆ.
  2. ಅವಧಾನವು ಯಾವುದೇ ಯೋಚನೆಯನ್ನು ಕಾರ್ಯರೂಪಕ್ಕೆ ತರುವಂತೆ ಮಾಡುವ ಸಕ್ರಿಯ ಹೆಜ್ಜೆಯಾಗಿದೆ.
  3. ʼಭಾಟಿಯಾʼರವರು ಹೇಳುವಂತೆ ಅವಧಾನವು ಪ್ರಜ್ಞೆಯ ಕೇಂದ್ರಬಿಂದುವಾಗಿದೆ. ಅದೇ ಕೊನೆಯಲ್ಲ, ಬೇರೊಂದು ಕಾರಣಕ್ಕಾಗಿ ಇರುವಂತಹುದು, ಇದು ಸಿದ್ದತೆಯ ಮನೋಭಾವ ಅಥವಾ ಕ್ರಿಯೆಗೆ ಸನ್ನದ್ದವಾಗಿದೆ.
  4. ಅವಧಾನವುಒಂದು ಕ್ರಿಯೆ ಮತ್ತು ನಿರಂತರವಾಗಿ ಒಂದು ವಸ್ತುವಿನಿಂದ ಮತ್ತೊಂದು ವಸ್ತುವಿಗೆ ವರ್ಗಾಯಿಸಲ್ಪಡುತ್ತದೆ, ಜೀವನದ ಎಲ್ಲಾ ಹಂತಗಳಲ್ಲಿಯೂ ಕಂಡುಬರುತ್ತದೆ.
  5. ಅವಧಾನದ ಪ್ರತಿಯೊಂದು ಕ್ರಿಯೆಗೂ ಸೂಕ್ತ ಪ್ರಯತ್ನದ ಅಗತ್ಯವಿದೆ. ಇದು ದೈಹಿಕ ಮತ್ತು ಮಾನಸಿಕ ಶಕ್ತಿಯ ಅಗತ್ಯತೆಯನ್ನು ನಿರೀಕ್ಷಿಸುತ್ತದೆ. ಆದ್ದರಿಂದ ಉತ್ತಮವಾಗಿ ಗಮನ ಹರಿಸಲು ಸರಿಯಾದ ಭಂಗಿ ಮತ್ತು ಒಳ್ಳೆಯ ಮನಸ್ಥಿತಿಯ ಅಗತ್ಯವಿದೆ.
  6. ಅವಧಾನವು ಒಂದು ಆಯ್ಕೆ ಅಂದರೆ ಇದು ಒಂದು ಅವಧಿಗೆ/ಸಮಯಕ್ಕೆ ಒಂದು ವಸ್ತು ಅಥವಾ ಒಂದು ವಿಷಯದ ಮೇಲೆ ಕೇಂದ್ರೀಕೃತವಾಗುತ್ತದೆ.
  7. ಅವಧಾನದ ಹಿಂದೆ ಸರಿಯಾದ ಉದ್ದೇಶ, ಗುರಿ ಅಥವಾ ಸಂಕಲ್ಪ ಅಂಶಗಳು ಇರಬೇಕಾಗುತ್ತದೆ, ಅವಧಾನಕ್ಕೋಸ್ಕರ ಅವಧಾನವಿರಬಾರದು, ತರಗತಿಯ ಅವಧಾನ ಉಳಿಸಿಕೊಳ್ಳಲು ಅದಕ್ಕೆ ಪೂರಕವಾಗಿ ಅಗತ್ಯವಾದ, ಗುರಿ ಅಥವಾ ಉದ್ದೇಶವನ್ನು ಅದರ ಮುಂದೆ ಇಡಬೇಕಾಗುತ್ತದೆ.
  8. ವರ್ಗಾವಣೆಯ ಗುಣದಿಂದ ಅವಧಾನವು ಬಿಡುವಿಲ್ಲದಂತೆ ಒಂದೇ ವಸ್ತುವಿನ ಮೇಲೆ ಸ್ಥಿರವಾಗಿ ಇರುವುದಿಲ್ಲ ಇದು ಒಂದು ವಸ್ತುವಿನಿಂದ ಮತ್ತೊಂದು ವಸ್ತುವಿಗೆ ಕ್ಷಿಪ್ರಅನುಕ್ರಮವಾಗಿ ಚಲಿಸುತ್ತದೆ.

ಅವಧಾನದ ವಿಧಗಳು

       ಅವಧಾನ ಒಂದು ಕೇಂದ್ರೀಕೃತವಾದಂತಹ ಮನಃಶಕ್ತಿ. ಮನಸ್ಸು ಒದಗಿಸಬಹುದಾದ ಈ ಶಕ್ತಿಗೆ ಒಂದು ಮಿತಿ ಇದೆ. ಆದ್ದರಿಂದ ಶಿಕ್ಷಕನು ಇದನ್ನು ಅನಾವಶ್ಯಕವಾಗಿ ಬಳಸಿಕೊಳ್ಳದೆ, ಉಪಯುಕ್ತ ರೀತಿಯಲ್ಲಿ ಬಳಸಿಕೊಳ್ಳುವುದು ತನ್ನ ಆದ್ಯ ಕರ್ತವ್ಯವಾಗಿರುತ್ತದೆ.

      ಅವಧಾನವನ್ನು ಅನೈಚ್ಚಿಕ ಅವಧಾನ, ಐಚ್ಚಿಕ ಅವಧಾನ ಮತ್ತು ಅಭ್ಯಾಸ ಅವಧಾನ ಎಂದು ಮೂರು ವಿಧಗಳಾಗಿ ವಿಂಗಡಿಸಲಾಗಿದೆ.

  1. ಅನೈಚ್ಚಿಕ ಅವಧಾನ: ಬಹಳ ತೀವ್ರವಾದ ಉದ್ದೀಪನ, ಭಾರೀ ಶಬ್ಧ ಅಥವಾ ಪ್ರಖರವಾದ ಬೆಳಕು ಇವುಗಳು ವ್ಯಕ್ತಿಗೆ ಅವುಗಳ ಬಗ್ಗೆ ಇಚ್ಚೆ ಅಥವಾ ಆಸಕ್ತಿಯಿಲ್ಲದಿದ್ದರೂ ಅವನ ಗಮನವನ್ನು ಸೆಳೆಯುತ್ತದೆ. ಇದನ್ನು ಅನೈಚ್ಚಿಕ ಅವಧಾನ ಎನ್ನುವರು. ಆದರೆ ಇಂತಹ ಅವಧಾನ ಹೆಚ್ಚು ಕಾಲ ಉಳಿಯುವುದಿಲ್ಲ.
  2. ಐಚ್ಚಿಕ ಅವಧಾನ: ನಾವು ಯಾವಾಗ ಉದ್ದೇಶ ಪೂರ್ವಕವಾಗಿ ನೋಡುತ್ತೇವೆಯೋ ಅಥವಾ ಕೇಳುತ್ತೇವೆಯೋ ಅದನ್ನು ಐಚ್ಚಿಕ ಅವಧಾನ ಎನ್ನುವರು. ನಮ್ಮ ಹೆಚ್ಚಿನ ಭಾಗದ ಅವಧಾನ ಐಚ್ಚಿಕವಾಗಿರುತ್ತದೆ. ಯಾವುದು ನಮ್ಮ ವರ್ತನೆಗಳನ್ನು ನಿಯಂತ್ರಿಸುತ್ತದೆಯೋ ಅಂತಹ ಅಂಶಗಳಾದ ಆಸಕ್ತಿ, ಮನೋಧೋರಣೆ, ಅಭಿಪ್ರೇರಣೆ ಇವುಗಳು ಐಚ್ಚಿಕ ಅವಧಾನ ಸ್ಪಷ್ಟವಾಗಿ ಸಂಬಂಧಪಟ್ಟಿರುತ್ತದೆ.

ಉದಾ: 1. ಒಬ್ಬ ಉದ್ಯೋಗವನ್ನು ಅರಸುತ್ತಿರುವ ವ್ಯಕ್ತಿ ದಿನಪತ್ರಿಕೆಯಲ್ಲಿ ಉದ್ಯೋಗಗಳ ಪ್ರಕಟಣೆಗಳ ಮೇಲೆಯೇ ಗಮನ ಹರಿಸುತ್ತಾನೆ.

2.  ಪರೀಕ್ಷಾ ಕೊಠಡಿಯಲ್ಲಿ ವಿದ್ಯಾರ್ಥಿ ಪ್ರಶ್ನೆಗಳಿಗೆ ಉತ್ತರಿಸುವುದರ ಬಗ್ಗೆಯೇ ಗಮನ ಹರಿಸುತ್ತಾನೆ.

     3.  ಅಭ್ಯಾಸ ಅವಧಾನ: ಕೆಲವೊಮ್ಮೆ ಐಚ್ಚಿಕ ಅವಧಾನವು ಅಭ್ಯಾಸ ಅವಧಾನವಾಗಿ ಮಾರ್ಪಡುತ್ತದೆ.   

           ಒಂದು ನಿರ್ದಿಷ್ಟ ಚಟುವಟಿಕೆಯಲ್ಲಿ ವ್ಯಕ್ತಿ ಆಸಕ್ತಿ ಬೆಳೆಸಿಕೊಂಡು, ಅದನ್ನು ಅಳವಡಿಸಿಕೊಂಡರೆ   

          ಅದು ಅಭ್ಯಾಸವಾಗಿ ಬೆಳೆಯುತ್ತದೆ. ನಾವು ಗಳಿಸಿದ ಅಭ್ಯಾಸಗಳು ಅಥವಾ ಕಲಿತ ಅಭ್ಯಾಸಗಳು ನಾವು

         ಯಾವುದರತ್ತ ನಮ್ಮ ಅವಧಾನವನ್ನು ಕೇಂದ್ರೀಕರಿಸಬೇಕಾಗಿರುತ್ತದೆಯೋ ಅಂತಹ ಪ್ರಚೋದನೆಗಳನ್ನು

           ಆಯ್ದುಕೊಳ್ಳುತ್ತವೆ.    

         ಉದಾ:

          1. ರಿಕ್ಷಾ ಚಾಲಕ ಒಬ್ಬ ವ್ಯಕ್ತಿ ಬಾಡಿಗೆಗೆ ರಿಕ್ಷಾ ಹುಡುಕುತ್ತಿರುವುದನ್ನು ಶೀಘ್ರವಾಗಿ ಗಮನಿಸುತ್ತಾನೆ.

          2. ಬೂಟು ಪಾಲೀಷ್‌ ಮಾಡುವ ಹುಡುಗನು ಅವನ ಮುಂದೆ ಹಾದುಹೋಗುವ ವ್ಯಕ್ತಿಗಳ ಬೂಟುಗಳನ್ನು    

              ಗಮನಿಸುತ್ತಾನೆ.

ಅವಧಾನದ ನಿರ್ಧಾರಕಗಳು:

     ವ್ಯಕ್ತಿಯ ಅವಧಾನವನ್ನು ನಿರ್ಧರಿಸುವಂತಹ ಪ್ರಮುಖ ಅಂಶಗಳನ್ನು ಈ ಕೆಳಗೆ ಚರ್ಚಿಸಲಾಗಿದೆ.

  1. ಬದಲಾವಣೆ: ಉದ್ದೀಪನಗಳಲ್ಲಿ ಯಾವುದೇ ಬದಲಾವಣೆಯಾದಲ್ಲಿ ಅದು ನಮ್ಮ ಗಮನ ಸೆಳೆಯುತ್ತದೆ. ತರಗತಿಯಲ್ಲಿ ಆಗಾಗ್ಗ ಬಣ್ಣದ ಸೀಮೆಸುಣ್ಣದಿಂದ ಮುಖ್ಯಾಂಶಗಳನ್ನು ಕಪ್ಪು ಹಲಗೆಯ ಮೇಲೆ ಬರೆಯುವ ಮೂಲಕ ಮಕ್ಕಳ ಗಮನ ಸೆಳೆಯಬಹುದು. ತರಗತಿಯಲ್ಲಿ ಧ್ವನಿಯಲ್ಲಿ ಏರಿಳಿತ ಮಾಡುವ ಮೂಲಕ ಶಿಕ್ಷಕ ಪಾಠದೆಡೆಗೆ ಮಕ್ಕಳ ಅವಧಾನವನ್ನು ಸೆಳೆಯಬಹುದು.
  2. ತೀವ್ರತೆ: ಯಾವುದೇ ತೀವ್ರತೆ ಹೊಂದಿರುವ ಉದ್ದೀಪನ ದುರ್ಬಲ ಉದ್ದೀಪನಗಳಿಗಿಂತ ಬೇಗ ನಮ್ಮ ಅವಧಾನವನ್ನು ಸೆಳೆಯುತ್ತದೆ. ಪ್ರಖರ ಬಣ್ಣಗಳು ತೆಳು ಬಣ್ಣಗಳಿಗಿಂತ ಬೇಗ ನಮ್ಮ ಗಮನ ಸೆಳೆಯುತ್ತವೆ. ಇದೇ ರೀತಿ ಗಟ್ಟಿಯಾದ ಮಾತು, ಪ್ರಖರ ಬೆಳಕು ಮುಂತಾದ ಉದ್ದೀಪನಗಳ ತೀವ್ರತೆ ಹೆಚ್ಚಾಗಿರುವುದರಿಂದ ಅವುಗಳ ಮೇಲೆ ನಮ್ಮ ಅವಧಾನ ಕೇಂದ್ರೀಕರಿಸಲ್ಪಡುತ್ತದೆ.
  3. ಗಾತ್ರ: ಉದ್ದೀಪನಗಳಲ್ಲಿ ಗಾತ್ರದಲ್ಲಿ ದೊಡ್ಡದಾದ ಉದ್ದೀಪನ ಸುಲಭವಾಗಿ ನಮ್ಮ ಅವಧಾನವನ್ನು ಆಕರ್ಷಿಸುತ್ತದೆ. ಉದಾ: ಎತ್ತರವಾದ ಕಟ್ಟಡ, ದಿನಪತ್ರಿಕೆಗಳಲ್ಲಿನ ದೊಡ್ಡ ಜಾಹಿರಾತುಗಳು, ದಿನಪತ್ರಿಕೆಯಲ್ಲಿನ ಶೀರ್ಷಿಕೆಗಳು ಮುಂತಾದವುಗಳು ಬೇಗ ನಮ್ಮ ಗಮನ ಸೆಳೆಯುತ್ತವೆ.
  4. ಭಿನ್ನತೆ: ಯಾವ ವಸ್ತು ಸುತ್ತಮುತ್ತಲಿನ ವಸ್ತುಗಳಿಗಿಂತ ಭಿನ್ನವಾಗಿರುತ್ತದೆಯೋ ಅದು ಬೇಗ ನಮ್ಮ ಗಮನವನ್ನುಸೆಳೆಯುತ್ತದೆ ಮತ್ತು ನಮ್ಮ ಅವಧಾನವನ್ನು ಹಿಡಿದಿಡುತ್ತದೆ. ಕುಳ್ಳನೆಯ ವ್ಯಕ್ತಿಗಳ ಗುಂಪಿನಲ್ಲಿ ಒಬ್ಬ ಎತ್ತರವಾಗಿರುವ ಹುಡುಗ ಬೇಗ ನಮ್ಮ ಗಮನ ಸೆಳೆಯುತ್ತಾನೆ. ಹುಡುಗರ ಗುಂಪಿನಲ್ಲಿ ಒಬ್ಬಳೇ ಹುಡುಗಿ ಇರುವುದು ಬೇಗ ಅವಧಾನವನ್ನು ಸೆಳೆಯುತ್ತದೆ.
  5. ಚಲನೆ: ಚಲಿಸುತ್ತಿರುವ ಉದ್ದೀಪನವು ನಮ್ಮ ಅವಧಾನವನ್ನು ಸೆಳೆಯುತ್ತದೆ. ತರಗತಿಯಲ್ಲಿ ನಾವು ಬಳಸುವ ಮಾದರಿಗಳಲ್ಲಿ ನಿಶ್ಚಲ ಮಾದರಿಗಳಿಗಿಂತ ಚಲನ ಸ್ಥಿತಿಯಲ್ಲಿರುವ ಮಾದರಿಗಳು ಬೇಗ ಮಕ್ಕಳ ಗಮನ ಸೆಳೆಯುತ್ತವೆ. ತರಗತಿಯ ಅಧ್ಯಾಪಕ ತರಗತಿಯಲ್ಲಿ ಅರ್ಥಪೂರ್ಣವಾಗಿ ಆಗಾಗ್ಗೆ ಚಲಿಸುವುದರಿಂದ ಮಕ್ಕಳ ಗಮನವನ್ನು ಪಾಠದೆಡೆಗೆ ಸೆಳೆಯಬಹುದು.
  6. ನಾವೀನ್ಯತೆ: ಶಿಕ್ಷಕ ದಿನನಿತ್ಯ ಬಳಸುವ ವಿಧಾನಗಳಿಗಿಂತ ಒಂದು ಹೊಸ ವಿಧಾನವನ್ನುತನ್ನ ಬೋಧನೆಯಲ್ಲಿ ಅಳವಡಿಸಿದರೆ ಮಕ್ಕಳ ಗಮನವನ್ನು ಪಾಠದೆಡೆಗೆ ಸೆಳೆಯಬಹುದು. ಯಾವಾಗಲೂ ಚಿತ್ರಪಟಗಳ ಸಹಾಯದಿಂದ ವಿಜ್ಞಾನ ವಿಷಯಗಳನ್ನು ಬೋಧಿಸುವ ಶಿಕ್ಷಕ ತರಗತಿಯಲ್ಲಿ ಒಂದು ಪ್ರಯೋಗವನ್ನು ಮಾಡುವ ಮೂಲಕ ಒಂದು ಪರಿಕಲ್ಪನೆಯನ್ನು ಬೋಧಿಸಲು ಪ್ರಯತ್ನಿಸುವ ಮೂಲಕ ತರಗತಿಯಲ್ಲಿ ನಾವೀನ್ಯತೆಯನ್ನು ಉಂಟುಮಾಡಬಹುದು. ಇದು ವಿದ್ಯಾರ್ಥಿಗಳ ಗಮನವನ್ನು ಬೇಗ ಸೆಳೆಯುತ್ತದೆ.    
  7. ಸಾಮಾಜಿಕ ಸಲಹೆ: ಅವಧಾನದ ಮೇಲೆ ಇತರ ವ್ಯಕ್ತಿಗಳ ಪ್ರಭಾವ, ನಿರ್ದಿಷ್ಟ ಸಲಹೆಗಳು ಇಲ್ಲಿ ನೋಡಿ, ಇತ್ತ ಗಮನಕೊಡಿ, ಎಚ್ಚರದಿಂದ ಕೇಳಿ ಮುಂತಾದವುಗಳು ಉದಾಹರಣೆಯನ್ನು ರೂಪಿಸುವವರೆಗೆ ನೆರವಾಗುತ್ತವೆ. ಒಂದು ವೇಳೆ ಶಿಕ್ಷಕ ಭೂಪಟದತ್ತ ತಿರುಗಿದರೆ ವಿದ್ಯಾರ್ಥಿಗಳು ಹಾಗೆ ಮಾಡಬೇಕು. ಒಂದು ವೇಳೆ ಮಾಡದಿದ್ದರೆ ಆ ರೀತಿ ಮಾಡುವಂತೆ ಹೇಳಬೇಕು.
  8. ಪುನರಾವರ್ತನೆ: ಪುನರಾವರ್ತಿತ ಉದ್ದೀಪನ ಕೇವಲ ಒಂದ ಬಾರಿ ಪ್ರದರ್ಶಿಸಿದ ಉದ್ದೀಪನಕ್ಕಿಂತ ಹೆಚ್ಚು ಅವಧಾನ ಸೆಳೆಯುವ ಮೌಲ್ಯವನ್ನು ಹೊಂದಿದೆ. ಒಂದು ಪದದ ಉಚ್ಚಾರಣೆಯ ಕಡೆಗೆ ವಿದ್ಯಾರ್ಥಿಗಳ ಗಮನವನ್ನು ಸೆಳೆಯಬೇಕಾದಾಗ ಶಿಕ್ಷಕ ಆ ಪದವನ್ನು 3-4 ಬಾರಿ ಸ್ಪಷ್ಟವಾಗಿ ಪುನರುಚ್ಚರಿಸಬೇಕು. ಆಗ ಮಕ್ಕಳ ಗಮನವನ್ನು ಆ ಶಬ್ಧದ ಕಡೆಗೆ ಸೆಳೆಯಲು ಸಾಧ್ಯಾವಾಗುತ್ತದೆ.
  9. ಅಭಿಪ್ರೇರಣೆ ಮತ್ತು ಅಗತ್ಯತೆಗಳು: ಅಗತ್ಯತೆಗಳನ್ನು ಪೂರೈಸಬಲ್ಲ ವಸ್ತುಗಳ ಕಡೆಗೆ ನಮ್ಮ ಅವಧಾನವನ್ನು ಸುಲಭವಾಗಿ ಕೇಂದ್ರೀಕರಿಸುವುದು. ಸಹಜವಾಗಿ ಹಸಿದ ವ್ಯಕ್ತಿಯ ಗಮನ ಆಹಾರದ ಕಡೆಗೆ ಸೆಳೆಯಲ್ಪಡುತ್ತದೆ. ಕಾರನ್ನು ಕೊಳ್ಳಲು ಬಯಸುವ ವ್ಯಕ್ತಿಯ ಗಮನ ದಿನಪತ್ರಿಕೆಗಳನ್ನು ಓದುವಾಗ ಕಾರಿನ ಜಾಹಿರಾತುಗಳ ಕಡೆ ಸೆಳೆಯಲ್ಪಡುತ್ತದೆ.
  10. ಆಸಕ್ತಿಗಳು: ನಾವು ಆಸಕ್ತಿ ಹೊಂದಿರುವ ವಿಷಯಗಳು ನಮ್ಮ ಗಮನವನ್ನು ಬೇಗ ಸೆಳೆಯುತ್ತವೆ. ಕ್ರಿಯೆಯಲ್ಲಿ ಆಸಕ್ತಿಯೇ ಅವಧಾನ ಎಂದು ಹೇಳಬಹುದು. ವಿಲೋಮವಾಗಿ ಆಸಕ್ತಿಯನ್ನು ಗುಪ್ತಾವಧಾನ ಎಂತಲೂ ಕರೆಯುವರು. ಉದಾ: ಟಿ.ವಿ. ಯಲ್ಲಿ ವಾರ್ತೆಯನ್ನುನೋಡುತ್ತಿರುವಾಗ ಕ್ರಿಕೆಟ್ ನಲ್ಲಿ ಆಸಕ್ತಿಯಿರುವ ವ್ಯಕ್ತಿ ಕೇವಲ ಕ್ರಿಕೆಟ್‌ ನ ವಿವರಣೆಯ ಬಗ್ಗೆ ಹೆಚ್ಚು ಗಮನ ಹರಿಸುತ್ತಾನೆ.

ಕಲಿವಿನ ಮೇಲೆ ಅವಧಾನದ ಪ್ರಭಾವ:

    ಅವಧಾನ ಕಲಿಕೆಗೆ ಅಗತ್ಯವಾದ ಪೂರ್ವಸಿದ್ದತಾ ಸ್ಥಿತಿಯನ್ನು ತಂದುಕೊಡುತ್ತದೆ. ಅವಧಾನವು ಕೇವಲ ಕಲಿಕೆಗೆ ಸಿದ್ದತೆಯೇ ವಿನಃ ಕಲಿಕೆ ಅಲ್ಲ. ಆದ್ದರಿಂದ ಯಶಸ್ವಿ ಕಲಿಕೆಗೆ ಅವಧಾನ ಅತ್ಯಾವಶ್ಯಕ. ಶಿಕ್ಷಕನು ಮಕ್ಕಳಲ್ಲಿ ಅವಧಾನವನ್ನು ಕೇಂದ್ರೀಕರಿಸುವ ಕೌಶಲ್ಯಗಳನ್ನು ಬಳಸಬೇಕು.

ಶಿಕ್ಷಕನು ತನ್ನ ತರಗತಿಯಲ್ಲಿ ಅವಧಾನ ಕದಡದಂತೆ ಮಾಡಲು ಕೆಲವು ಸಲಹೆಗಳು:

        ಶಿಕ್ಷಕನು ಒಮ್ಮೆ ಗಳಿಸಿದ ಅವಧಾನವನ್ನು ಪಾಠದ ಅಂತ್ಯದವರೆಗೂ ಕಾಪಾಡಿಕೊಳ್ಳಬೇಕು. ಈ ಅವಧಾನದ ವ್ಯಾಪ್ತಿ ಚಿಕ್ಕ ವಯಸ್ಸಿನಲ್ಲಿ ಕಡಿಮೆ ಇದ್ದು ವಯಸ್ಸಾದಂತೆ ಹೆಚ್ಚುತ್ತಾ ಹೋಗುತ್ತದೆ. ಅವಧಾನ ಕದಡದಂತಿರಲು ಕೆಲವು ಸನ್ನಿವೇಶಗಳು ಸಹಾಯಕವಾಗಿವೆ.

  1. ಆಕರ್ಷಕಯುತವಾದಂತಹ ವಸ್ತು, ಶಬ್ದ, ಸಂಗತಿಗಳನ್ನು ಮಕ್ಕಳಿಂದ ಆದಷ್ಟೂ ದೊರವಾಗಿಸುವುದು:

         ತರಗತಿಯಲ್ಲಿ ಮಕ್ಕಳ ಅವಧಾನ ಪಾಠದ ಕಡೆ ಇರುವಾಗ, ಪಾಠಕ್ಕಿಂತ ಹೆಚ್ಚು ಆಕರ್ಷಕ ವಸ್ತು ಗೋಚರಿಸಿದರೆ ಮಕ್ಕಳ ಅವಧಾನ ಕದಡುತ್ತದೆ. ಇದರಿಂದಾಗಿ ಶಿಕ್ಷಕನ ಶ್ರಮ ವ್ಯಯವಾಗುತ್ತದೆ. ಈ ಕಾರಣದಿಂದಾಗಿ ತರಗತಿಯಲ್ಲಿ ಮಕ್ಕಳ ಗಮನವನ್ನು ಸೆಳೆಯುವಂತಹ ವಸ್ತುಗಳನ್ನು ಇಡಬಾರದು.

ಉದಾ: ಚಿತ್ರಪಟಗಳು, ಹೊಳೆಯುವಂತಹ ವಸ್ತುಗಳು, ಕಿಟಕಿ-ಬಾಗಿಲುಗಳ-ವಾಹನಗಳ ಶಬ್ದಗಳು, ಯಾರಾದರೂ ಮದ್ಯೆ ಪ್ರವೇಶಿಸುವುದು.

  1. ನಿರ್ದಿಷ್ಟ ಉತ್ತರ ಬಯಸುವ ಪ್ರಶ್ನೆಗಳನ್ನು ಬಳಸಬೇಕು: ಶಿಕ್ಷಕನು ಕೇಳುವ ಪ್ರಶ್ನೆಗಳಿಗೆ ವಿದ್ಯಾರ್ಥಿಗಳಿಂದ ನಿರ್ದಿಷ್ಟ ಉತ್ತರ ಬರುವಂತಿರಬೇಕು. ಪ್ರಶ್ನೆ ಎರಡು-ಮೂರು ಉತ್ತರಗಳಿಂದ ಕೂಡಿದ್ದರೆ ಆಲೋಚಿಸುವಾಗ ಅವಧಾನ ಚದುರತ್ತದೆ.
  2. ಬೋಧನೆಯಲ್ಲಿ ವೈವಿದ್ಯತೆ ಇರಬೇಕು: ಶಿಕ್ಷಕನು ಒಂದೇ ರೀತಿಯಲ್ಲಿ ಬೋಧಿಸುವುದರಿಂದ ಅವಧಾನ ಕೇಂದ್ರೀಕರಿಸುವುದು ಕಷ್ಟ. ಪ್ರಾರಂಭದಿಂದ ಕೊನೆಯವರೆಗೂ ತನ್ನ ಬೋಧನೆ ಒಂದೇ ರೀತಿಯಾಗಿರದೆ, ಧ್ವನಿಯಲ್ಲಿ ಏರಿಳಿತ, ಮಧ್ಯದಲ್ಲಿ ಬರೆಯುವುದು, ಪ್ರಶ್ನಿಸುವಿಕೆ, ವಸ್ತುಗಳನ್ನು ತೋರಿಸುವುದು, ಮೊದಲಾದ ಸನ್ನಿವೇಶಗಳ ಮೂಲಕ ಅವಧಾನ ಕೇಂದ್ರೀಕರಿಸಬಹುದು.
  3. ನಿರ್ದಿಷ್ಟವಾದ ಹಾಗೂ ಸ್ಪಷ್ಟವಾದ ವಿಷಯ ವಿಶ್ಲೇಷಣೆ ಇರಬೇಕು: ವಿಷಯವನ್ನು ಸರಳ ಭಾಷೆಯಲ್ಲಿ ಅರ್ಥವಾಗುವ ರೀತಿಯಲ್ಲಿ ಮಾಕ್ಕಳ ಮಾನಸಿಕ ಮಟ್ಟಕ್ಕನುಗುಣವಾಗಿ ಬೋಧಿಸಿದರೆ, ಅವದಾನ ವಿಷಯದ ಕಡೆ ಕೇಂದ್ರೀಕರಿಸಲ್ಪಟ್ಟು ಕಲಿಕೆ ಪರಿಣಾಮಕಾರಿಯಾಗುತ್ತದೆ.
  4. ಪುನರಾವರ್ತನೆ: ಬೊಧನಾ ಸಮಯದಲ್ಲಿ ಬೇರೆಡೆ ಸರಿದಿದ್ದ ಮಕ್ಕಳ ಮನಸ್ಸನ್ನು ಪುನರಾವರ್ತನೆಯ ಸಂದರ್ಭದಲ್ಲಿ ಪಾಠ ವಿಷಯದ ಕಡೆ ತಂದು ಅವಧಾನ ಮೂಡಿಸಬಹುದು.

ಅವಧಾನದ ಶೈಕ್ಷಣಿಕ ನಿಹಿತಾರ್ಥಗಳು

  1. ಕಲಿಕೆಯು ಪ್ರದರ್ಶಿಸಲ್ಪಟ್ಟ ಉತ್ತೇಜಕವಾಗಿದೆ. ಬೋಧನೆಯಲ್ಲಿ ಹೊಸತನ ಮತ್ತು ನಿಕಟತೆ ಸೃಷ್ಠಿಸಬೇಕು.
  2. ಬೋಧನೆಯಲ್ಲಿ ವೈವಿದ್ಯತೆಯನ್ನು ತರುವ ಮೂಲಕ ಅವಧಾನವನ್ನು ಮಕ್ಕಳು ಪಡೆದುಕೊಳ್ಳುವರು.
  3. ಬೋಧನೆಯ ಸ್ಪಷ್ಟತೆಯು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ವಿದ್ಯಾರ್ಥಿತು ಏನನ್ನು ಕಲಿಯುತ್ತಿರುವನು ಎಂಬ ಸ್ಪಷ್ಟತೆ ಇದ್ದರೆ ಆಗ ಅವನು ಹೆಚ್ಚು ಬೋದನೆಯೆಡೆ ಗಮನ ಹರಿಸಲು ಸಾಧ್ಯವಾಗುತ್ತದೆ.
  4. ಪುನರಾವರ್ತನೆಯ ಅಭ್ಯಾಸವು ಅವಧಾನ ಹೊಂದಲು ಸಹಕಾರಿಯಾಗಿದೆ. ಆದ್ದರಿಂದ ಶಿಕ್ಷಕನು ಮಾಡಿದ ಪಾಠವನ್ನು ಅವಧಿಯ ಕೊನೆಯಲ್ಲಿ ಪುನರಾವರ್ತಿಸಬೇಕು.
  5. ತರಗತಿಗೆ ಉತ್ತಮ/ಸೂಕ್ತವಾದ ವೇಳಾಪಟ್ಟಿಯನ್ನು ತಯಾರಿಸಬೇಕಾಗುತ್ತದೆ. ಯಾವ ವಿಷಯಗಳು ಮಾನಸಿಕ ಚಟುವಟಿಕೆಗಳನ್ನು ಬಯಸುತ್ತವೆಯೋ ಅಂತಹ ವಿಷಯಗಳನ್ನು ಮೊದಲ ಅವಧಿಯಲ್ಲಿ ಬೇಧಿಸಬೇಕು, ಆ ರೀತಿಯಾಗಿ ವೇಳಾಪಟ್ಟಿ ರಚಿಸಬೇಕು.
  6. ಶಿಕ್ಷಕರು ಬೇಧನಾ ವಿಧಾನವನ್ನು ಹೇಗೆ ಅಳವಡಿಸಿಕೊಳ್ಳಬೇಕೆಂದರೆ ಅದು ಮಕ್ಕಳಲ್ಲಿ ಆಸಕ್ತಿಯನ್ನು ಪ್ರಚೋದಿಸುವಂತಿರಬೇಕು. ಶಿಕ್ಷಕರು ಬೋಧನೆಯಲ್ಲಿ ಹೋಲಿಕೆ ಮತ್ತು ವ್ಯತ್ಯಾಸಗಳನ್ನು ತಿಳಿಸುವುದರಿಂದ ಮಕ್ಕಳ ಅನುಮಾನಗಳು ದೂರವಾಗುತ್ತವೆ.
  7. ತರಗತಿಯಲ್ಲಿ ಚೆನ್ನಾಗಿ ಓದುವ ಹುಡುಗರನ್ನು ಅನುಕರಿಸಲು ಶಿಕ್ಷಕರು ವಿದ್ಯಾರ್ಥಿಗಳಿಗೆ ಪ್ರೋತ್ಸಾಗಿಸಬೇಕು.
  8. ಅವಧಾನವು ದಕ್ಷತೆ ಮತ್ತು ಸಂವೇದನಾ ತಾರತಮ್ಯವನ್ನು ಸುಧಾರಿಸುತ್ತದೆ. ಗಮನವಿಟ್ಟು ಕೆಲಸವನ್ನು ಮಾಡಿದಾಗ ಮನಸ್ಸಿಗೆ ತೃಪ್ತಿಕೊಡುತ್ತದೆ.
  9. ಅವಧಾನವು ಸೃತಿಯನ್ನು ಹೆಚ್ಚಿಸುತ್ತದೆ.
  10. ಬೆರಳಚ್ಚು ಮಾಡುವಾಗಿ, ಬೈಸಿಕಲ್‌ ತುಳಿಯುವಾಗ, ಟೆನ್ನೀಸ್‌ ತರಹಾದ ಆಟಗಳನ್ನು ಆಡುವಾಗ ಅವಧಾನದ ಅವಶ್ಯಕತೆ ಇರುತ್ತದೆ.

ಸ್ಮೃತಿ/ಸ್ಮರಣೆ

       ಅರ್ಥ: “ಹಿಂದೆ ಕಲಿತಿದ್ಧನ್ನು ಪ್ರಜ್ಞಾಪೂರ್ವಕವಾಗಿ ಜಾಗೃತಾವಸ್ಥೆಗೆ ತಂದುಕೊಳ್ಳುವ ಪ್ರಕ್ರಿಯೆಯೇ ನೆನಪು”.

‌        ಕಲಿತ ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳುವ ಪ್ರಕ್ರಿಯೆಯೇ ಸ್ಮೃತಿ. ಇದು ಬುದ್ಧಿವಂತ ವರ್ತನೆಯ ಅಗತ್ಯ ಅಂಶವಾಗಿದೆ. ಸ್ಮೃತಿ ಶಕ್ತಿಯಿಲ್ಲದೇ ನಾವು ಏನನ್ನೂ ಕಲಿಯಲು ಸಾಧ್ಯವಿಲ್ಲ. ಕಲಿತದ್ದನ್ನು ಧಾರಣೆ ಮಾಡಿಕೊಳ್ಳುವುದಕ್ಕೆ ಸ್ಮೃತಿ ಎಂದು ಹೆಸರು. ಸ್ಮೃತಿಯ ನಂತರದ ಪುನಃಸ್ಮರಣೆ, ಗುರುತಿಸುವಿಕೆ ಅಥವಾ ಪುನರ್‌ ಕಲಿಕೆಯಲ್ಲಿ ಸುಲಭವಾಗುವಿಕೆ ಇವುಗಳಲ್ಲಿ ಕಾಣಬಹುದು.

ವ್ಯಾಖ್ಯಾನಗಳು:

  1. “ಹಿಂದೆ ಕಲಿತಂತಹ ವಿಷಯಗಳನ್ನು ಅಥವಾ ಅನುಭವಗಳನ್ನು ಪುನಃಸ್ಮರಣೆಗೆ ತರುವುದೇ ಸ್ಮೃತಿ”.

                                                                                               …..ವುಡ್‌ ವರ್ತ್‌ ಮತ್ತು ಮಾರ್ಕ್ವಿಸ್.

  1. ನಾವು ಪಡೆದ ಅನುಭವಗಳನ್ನು ಸಂಗ್ರಹಿಸಿಡುವ ಶಕ್ತಿ ಮತ್ತು ಅನುಭವಗಳು ಜರುಗಿದ ಸ್ವಲ್ಪ ಕಾಲಾನಂತರ ಪ್ರಜ್ಞಾನಾನುಭವಕ್ಕೆ ತಂದುಕೊಳ್ಳುವ ಸಾಮರ್ಥ್ಯವೇ ಸ್ಮೃತಿ.”  …ರೈಬರ್ನ್

 

ಸ್ಮರಣೆಯ ಪ್ರಕ್ರಿಯೆ

     ಸ್ಮರಣೆಯು ಅನೇಕ ಕ್ರಿಯೆಗಳನ್ನು ಒಳಗೊಂಡಿರುವ ಒಂದು ವ್ಯವಸ್ಥಿತ ಪ್ರಕ್ರಿಯೆಯಾಗಿದೆ. ಸ್ಮರಿಸಿಕೊಳ್ಳುವ ಪ್ರಕ್ರಿಯೆಯು ನಾಲ್ಕು ಹಂತಗಳಲ್ಲಿ ಜರುಗುತ್ತದೆ. ಅವುಗಳೆಂದರೆ:

  1. ಕಲಿಕೆ
  2. ಧಾರಣೆ
  3. ಪುನಃಸ್ಮರಣೆ
  4. ಅಭಿಜ್ಞಾನ

1.ಕಲಿಕೆ: ನೆನಪಿನ ಸಾಮರ್ಥ್ಯವು ಕಲಿಕೆಯನ್ನು ಅವಲಂಬಿಸಿದೆ. ನೀವು ವಿಷಯವನ್ನು ಪರಿಣಾಮಕಾರಿಯಾಗಿ ಕಲಿತಿದ್ದರೆ, ಅದು ಉತ್ತಮವಾಗಿ ನೆನಪಿನಲ್ಲಿರುತ್ತದೆ. ಇಲ್ಲಿ ಕಲಿಕೆ ಎಂದರೆ ವಿಷಯಗಳ ಗ್ರಹಿಕೆ ಎಂದರ್ಥವಲ್ಲ, ಅನೇಕ ಅನುಭವಗಳು, ಜೀವನದಲ್ಲಿ ಜರುಗುವ ಅನೇಕ ಸಂಗತಿಗಳನ್ನು ಇದು ಒಳಗೊಂಡಿರುತ್ತದೆ. ಅನುಭವಗಳು ತೀವ್ರವಾಗಿದ್ದು ಮನಸ್ಸಿನ ಮೇಲೆ ಪ್ರಭಾವ ಮತ್ತು ಪರಿಣಾಮ ಬೀರಿದರೆ ಹೆಚ್ಚುಕಾಲ ನೆನಪಿನಲ್ಲಿರುತ್ತದೆ.

        ನಾವು ಕಲಿಯುವ ವಿಷಯ ಅಥವಾ ನಮಗೆ ಆಗುವ ಅನುಭವಗಳು ನಮ್ಮ ಸಂವೇದನಾ ಮತ್ತು ಅರ್ಥ ಗ್ರಹಿಕೆಯನ್ನು ಅವಲಂಬಿಸುತ್ತದೆ. ನಾವು ಕಲಿಯುವ ವೇಳೆಯಲ್ಲಿ ಅಥವಾ ನಮಗೆ ಅನುಭವವಾಗುವ ವೇಳೆಯಲ್ಲಿ ನಮ್ಮ ಇಂದ್ರಿಯಗಳು ಯಾವ ರೀತಿ ಪ್ರತಿಕ್ರಿಯಿಸುತ್ತದೆ ಎಂಬುದು ಮುಖ್ಯವಾಗುತ್ತದೆ. ಆದ್ಧರಿಂದ ಕಲಿಯುವ ವಿಷಯದ ಕಡೆಗೆ ಅವಧಾನ ಇರುವುದು ಅವಶ್ಯವಾಗುತ್ತದೆ.

2.ಧಾರಣೆ: ನಾವು ಕಲಿತಂತಹ ವಿಷಯವನ್ನು ಮನಸ್ಸಿನಲ್ಲಿ ನೆನಪಿನ ಬಿಂಬಗಳಾಗಿ, ಸಂಕೇತಗಳಾಗಿ, ದಾಖಲಾಗಿ ಶೇಖರಿಸಲ್ಪಡುತ್ತವೆ. ಈ ಶೇಖರಿಸಲ್ಪಡುವ ಕ್ರಿಯೆಯೇ ಧಾರಣೆ. ಶೇಖರಿಸಲ್ಪಡುವ ಸಂಕೇತ ಅಥವಾ ಬಿಂಬಗಳು ಎಲ್ಲಿಯವರೆಗೆ ಮಿದುಳಿನಲ್ಲಿ ದಾಖಲಾಗಿರುತ್ತವೆಯೋ ಅಲ್ಲಿಯವರೆಗೆ ವ್ಯಕ್ತಿ ಸಂದರ್ಭ ಬಂದಾಗ ಅವುಗಳನ್ನು ಪುನಃಸ್ಮರಣೆ ಮಾಡಿಕೊಳ್ಳುತ್ತಾನೆ. ಆದರೆ ಈ ವಾದವನ್ನು ಮನೋವಿಶ್ಲೇಷಣಾ ವಾದಿಗಳು ಒಪ್ಫುವುದಿಲ್ಲ, ಅವರ ಪ್ರಕಾರ ಕಲಿತಂತಹ ವಿಷಯವನ್ನು ಯಾವಾಗಲೂ ಮರೆಯಲು ಸಾಧ್ಯವಿಲ್ಲ. ನೆನಪಿನ ಬಿಂಬಗಳು ಅಳಿಸಿ ಹೋದಲ್ಲಿ ಅವು ಮನಸ್ಸಿನ ಸುಪ್ತಸ್ಥಿತಿಗೆ ತಳ್ಳಲ್ಪಡುತ್ತವೆ. ವ್ಯಕ್ತಿಯನ್ನು ಸಂಮೋಗಿನಿ ಸ್ಥಿತಿಗೆ ಒಳಪಡಿಸಿದಾಗ ಅವುಗಳನ್ನು ಪುನಃಸ್ಮರಣೆಗೆ ತಂದುಕೊಳ್ಳಲು ಸಾಧ್ಯವಿದೆ ಎಂದು ಅಭಿಪ್ರಾಯ ಪಡುತ್ತಾರೆ.

3.ಪುನಃಸ್ಮರಣೆ: ನಾವು ಕಲಿತಂತಹ ವಿಷಯವನ್ನು ಮಾನಸಿಕವಾಗಿ ಹುಡುಕಿ ತೆಗೆಯುವ ಪ್ರಕ್ರಿಯೆಯೇ ಪುನಃಸ್ಮರಣೆ. ಪುನಃಸ್ಮರಣೆಯು ಧಾರಣೆಯನ್ನು ಅವಲಂಬಿಸಿರುತ್ತದೆ.

       ಒಂದು ವಿಷಯವು ಉತ್ತಮವಾಗಿ ಕಲಿಯಲ್ಪಟ್ಟು ಸಮರ್ಪಕವಾಗಿ ಧಾರಣೆಗೊಳಪಟ್ಟಿದ್ದರೆ ಪುನಃಸ್ಮರಣೆ ಸುಲಭವಾಗುತ್ತದೆ. ಆದರೂ ಕೆಲವೊಮ್ಮೆ ಕಲಿಕೆ ಮತ್ತು ಧಾರಣೆ ಸಮರ್ಪಕವಾಗಿ ಆಗಿದ್ಧರೂ ಮಾನಸಿಕ ಆತಂಕ, ಒತ್ತಡಗಳ ಕಾರಣದಿಂದ ಪುನಃಸ್ಮರಣೆ ಸಾಧ್ಯವಾಗದೇ ಹೋಗಬಹುದು.

     ಉದಾಹರಣೆಗೆ ಭಯ ಮತ್ತು ಆತಂಕಕ್ಕೆ ಒಳಗಾದ ವಿದ್ಯಾರ್ಥಿಯು ಉತ್ತಮವಾಗಿ ಕಲಿತಿದ್ದರೂ ಪುನಃಸ್ಮರಣೆ ಸಾಧ್ಯವಾಗುವುದಿಲ್ಲ. ವಿಚಾರ ಸಹಸಂಬಂಧದಿಂದ ಪುನಃಸ್ಮರಣೆಯು ಸಮಂಜಸವಾಗಿ ಆಗುತ್ತದೆ.

4.ಅಭಿಜ್ಞಾನ: ಧಾರಣೆಗೊಳಪಟ್ಟ ವಿಷಯ ಅಥವಾ ವಸ್ತುವನ್ನು ನಾವು ಸ್ವತಃ ನೋಡಿದಾಗ ಗುರ್ತಿಸುವ ಕ್ರಿಯೆಯೇ ಅಭಿಜ್ಞಾನ. ಈ ಹಿಂದೆ ನೋಡಿದಂತಹ ವ್ಯಕ್ತಿ ಅಥವಾ ವಿಷಯ ನಮ್ಮ ಕಣ್ಣೆದುರಿಗೆ ಬಂದಾಗ ಅಭಿಜ್ಞಾನ ಸಾಧ್ಯವಾಗುತ್ತದೆ.

       ಪುನಃಸ್ಮರಣೆ ಮತ್ತು ಅಭಿಜ್ಞಾನ ಎರಡೂ ಕ್ರಿಯೆಗಳ ಕಾರ್ಯ ಒಂದೇ ಆದರೂ ಎರಡರ ನಡುವೆ ವ್ಯತ್ಯಾಸ ಇರುವುದನು ಗಮನಿಸಬಹುದು. ಅಭಿಜ್ಞಾನದಲ್ಲಿ ಕಲಿತ ವ್ಯಕ್ತಿ ಅಥವಾ ವಸ್ತು ಕಣ್ಣೆದುರಿಗೆ ಇರುತ್ತದೆ. ಆದರೆ ಪುನಃಸ್ಮರಣೆಯಲ್ಲಿ ಕಣ್ಣೆದುರಿಗೆ ಇರುವುದಿಲ್ಲ. ಪುನಃಸ್ಮರಣೆಯಿಂದ ನೆನಪಿಸಿಕೊಳ್ಳುವಿಕೆಯ ಕ್ರಿಯೆ ನಡೆಯದಿದ್ದರೆ, ಅಭಿಜ್ಞಾನದಿಂದ ಸಾಧ್ಯವಾಗುತ್ತದೆ.

       ಉದಾಹರಣೆಗೆ ನಿಮ್ಮ ಜೊತೆ ಬಾಲ್ಯದಲ್ಲಿ ಕಲಿತ ಸ್ನೇಹಿತನ ಬಗ್ಗೆ ಇನ್ನೊಬ್ಬ ಸ್ನೇಹಿತ ಪ್ರಸ್ತಾಪಿಸಿದಾಗ ನಿಮಗೆ ನೆನಪಾಗದಿರಬಹುದು, ಆದರೆ ಅವನ ಭಾವಚಿತ್ರ ನೋಡಿದಾಗ ನೆನಪು ಉಂಟಾಗುತ್ತದೆ.

(ಉಂಗುರ ನೋಡಿ ನೆನಪು ಮಾಡಿಕೊಂಡಿದಕ್ಕೆ ಅವಳಿಗೆ ʼಅಭಿಜ್ಞಾನ ಶಾಕುಂತಲೆʼ ಎಂಬ ಹೆಸರು ಬಂತು)

ಉತ್ತಮ ಸ್ಮೃತಿಯ ಲಕ್ಷಣಗಳು:

ಮನೋವಿಜ್ಞಾನಿಗಳು ಉತ್ತಮ ಸ್ಮೃತಿಯ 5 ಲಕ್ಷಣಗಳನ್ನು ಗುರುತಿಸಿರುತ್ತಾರೆ. ಅವುಗಳೆಂದರೆ-

1.     ಕ್ಷಿಪ್ರಗತಿ: ಕಲಿಯುವ ವ್ಯಕ್ತಿ ಎಷ್ಟು ಬೇಗ ಹಿಂದಿನ ಅನುಭವಗಳನ್ನು ಪುನಃಸ್ಮರಣೆ ಮಾಡಿಕೊಳ್ಳುತ್ತಾನೆ ಎಂಬುದನ್ನು ಸೂಚಿಸುತ್ತದೆ. ಉತ್ತಮ ಸ್ಮೃತಿ ಶಕ್ತಿಯುಳ್ಳ ವ್ಯಕ್ತಿ ಕ್ಷಿಪ್ರಗತಿಯಲ್ಲಿ ಪುನಃಸ್ಮರಣೆ ಮಾಡಿಕೊಳ್ಳುತ್ತಾನೆ.

2.     ನಿಖರತೆ: ಪುನಃಸ್ಮರಣೆ ಮಾಡಿಕೊಂಡ ಅನುಭವಗಳು ಮತ್ತು ವಿಷಯಗಳ ನಿಖರತೆ ಹೊಂದಿರುವುದು.

3.     ಧಾರಣೆಯ ಕಾಲ: ಹಿಂದೆ ಪಡೆದ ಅನುಭವಗಳನ್ನು ಎಷ್ಟು ಕಾಲ ನೆನಪಿನಲ್ಲಿಟ್ಟುಕೊಳ್ಳಬಲ್ಲನು ಮತ್ತು ಅಗತ್ಯ ಬಿದ್ದಾಗ ನೆನಪಿಗೆ ತಂದಕೊಳ್ಳಬಲ್ಲನು ಎಂಬುದನ್ನು ಸೂಚಿಸುತ್ತದೆ.

4.     ಚುರುಕುತನ(ಶೀಘ್ರತೆ): ಹಿಂದಿನ ಅನುಭವಗಳನ್ನು ಯಾವುದೇ ಅಡಚಣೆಯಿಲ್ಲದೇ ನಿರಂತರವಾಗಿ ಪುನಃಸ್ಮರಣೆಗೆ ತಂದುಕೊಳ್ಳುವ ಸಾಮರ್ಥ್ಯ.

5.     ಉಪಯುಕ್ತತೆ: ಅಗತ್ಯವಾದುದ್ದನ್ನು ಸರಿಯಾದ ಕಾಲಕ್ಕೆ ಸರಿಯಾದ ಸ್ಥಳದಲ್ಲಿ ಪುನಃಸ್ಮರಣೆಗೆ ತಂದುಕೊಳ್ಳುವುದಾಗಿದೆ. ಆಗ ಮಾತ್ರ ಸ್ಮೃತಿಯ ಉಪಯುಕ್ತತೆ ಹೆಚ್ಚಾಗಲು ಸಾಧ್ಯ.

ಸ್ಮೃತಿಯ ವಿಧಗಳು

ಸ್ಮೃತಿಯನ್ನು 3 ವಿಧಗಳಾಗಿ ವಿಂಗಡಿಸುತ್ತೇವೆ. ಅವುಗಳೆಂದರೆ:

  1. ಇಂದ್ರಿಯ ಸ್ಮೃತಿ
  2. ಅಲ್ಪಕಾಲದ ಸ್ಮೃತಿ.
  3. ದೀರ್ಘಕಾಲದ ಸ್ಮೃತಿ.

1. ಇಂದ್ರಿಯ ಸ್ಮೃತಿ:  ಅತ್ಯಂತ ಅಲ್ಪಕಾಲದವರೆಗಿನ ಮಾಹಿತಿಯನ್ನು ಮೂಲ ಸಂವೇದನೆಯ ರೊಪದಲ್ಲಿ ಕಾಯ್ದುಕೊಂಡರೆ ಅದನ್ನು ʼಸಂವೇದನಾ ನೆನಪುʼ ಎನ್ನುತ್ತೇವೆ.

    ನಾವು ಹಲವು ವಸ್ತುಗಳನ್ನು ಮುಟ್ಟುತ್ತೇವೆ, ಕೆಲವು ಶಬ್ಧಗಳನ್ನು ಕೇಳುತ್ತೇವೆ. ಕೆಲವು ವಸ್ತುಗಳನ್ನು ನೋಡುತ್ತೇವೆ. ಈ ಕ್ರಿಯೆಗಳಲ್ಲಿ ಸಂವೇದನಾ ಉದ್ದೀಪನಾ ಮುಗಿದ ಮೇಲೂಅತ್ಯಲ್ಪ ಅವಧಿಯವರೆಗೆ ಆ ಕ್ರಿಯೆಗಳು ಸಂವೇದನಾ ನೆನಪಿನ ರೂಪದಲ್ಲಿ ಇರುತ್ತವೆ.

2. ಅಲ್ಪಕಾಲದ ಸ್ಮೃತಿ: ಕೇವಲ 20 ರಿಂದ 30 ಸೆಕೆಂಡುಗಳವರೆಗೆ ಮಾತ್ರ ಪುನರಾವರ್ತಿಸದ ಮಾಹಿತಿಯನ್ನು ಕಾಯ್ದುಕೊಳ್ಳಲು ಸಾಧ್ಯವಾಗುವ ಸೀಮಿತ ಸಾಮರ್ಥ್ಯದ ಶೇಖರಣೆಯನ್ನು ಅಲ್ಪಕಾಲದ ನೆನಪು ಎನ್ನುತೇವೆ. ಕೆಲವು ಸಂಗತಿಗಳನ್ನು 30 ಸೆಕೆಂಡಿಗಿಂತಲೂ ಹೆಚ್ಚು ಅವಧಿಯವರೆಗೆ ನೆನಪಿಟ್ಟುಕೊಳ್ಳಲು ಸಾಧ್ಯವಾಗುತ್ತದೆ. ಮಾಹಿತಿಯನ್ನು ಹಲವಾರು ಬಾರಿ ಪುನರಾವರ್ತಿಸಿದರೆ ಸಾಧ್ಯವಾಗುತ್ತದೆ.

   ಉದಾಹರಣೆ: ಬಸ್‌ ಟಿಕೇಟ್‌, ಬಸ್‌ ಸಂಖ್ಯೆ, ಸಿನಿಮಾ ಮಂದಿರದ ಸೀಟಿನ ಸಂಖ್ಯೆ ಇತ್ಯಾದಿ

3.ದೀರ್ಘಕಾಲದ ಸ್ಮೃತಿ: ಅತ್ಯಧಿಕ ಸಮಯದವರೆಗೆ ಮಾಹಿತಿಯನ್ನು ಶೇಖರಿಸುವ ಸೀಮಾತೀತ ಸಾಮರ್ಥ್ಯದ ಧಾರಣೆಯನ್ನು ʼದೀರ್ಘಕಾಲದ ನೆನಪುʼ ಎನ್ನುತ್ತೇವೆ. ಸಂವೇದನಾ ಮತ್ತು ಅಲ್ಪಕಾಲದ ನೆನಪುಗಳು ತ್ವರಿತ ಗತಿಯಿಂದ ಮಾಸಿದರೆ, ದೀರ್ಘಕಾಲದ ನೆನಪು ಹೆಚ್ಚು ಸಮಯದವರೆಗೆ ಉಳಿಯುತ್ತದೆ.

     ವ್ಯಕ್ತಿಯ ತಾನು ಹುಟ್ಟಿದ ದಿನಾಂಕ, ಮದುವೆಯ ದಿನಾಂಕ ಮತ್ತು ತನ್ನ ಯಾವುದಾದರೂ ಸಾಧನೆಗಾಗಿ ಶ್ರೇಷ್ಠ ಪ್ರಶಸ್ತಿ ಪಡೆದ ಅನುಭವ ವ್ಯಕ್ತಿಯ ಜೀವಿತಾವಧಿಯವರೆಗೆ ನೆನಪಿನಲ್ಲಿ ಉಳಿಯುತ್ತದೆ.

ಅಲ್ಪಕಾಲದ ಮತ್ತು ದೀರ್ಘಕಾಲದ ನೆನಪುಗಳಿಗಿರುವ ವ್ಯತ್ಯಾಸಗಳು

ಅಲ್ಪಕಾಲದ ನೆನಪು

ದೀರ್ಘಕಾಲದ ನೆನಪು

1.ಕೇವಲ 20 ರಿಂದ 30 ಸೆಕೆಂಡುಗಳವರೆಗೆ ಮಾತ್ರ ಮಾಹಿತಿಯನ್ನು ಕಾಯ್ದುಕೊಳ್ಳಲು ಸಾಧ್ಯವಾಗುವ ಸೀಮಿತ ಸಾಮರ್ಥ್ಯದ ಶೇಖರಣೆಯನ್ನು ಅಲ್ಪಕಾಲದ ನೆನಪು ಎನ್ನುತೇವೆ.

1. ಅತ್ಯಧಿಕ ಸಮಯದವರೆಗೆ ಮಾಹಿತಿಯನ್ನು ಶೇಖರಿಸುವ ಸೀಮಾತೀತ ಸಾಮರ್ಥ್ಯದ ಧಾರಣೆಯನ್ನು ʼದೀರ್ಘಕಾಲದ ನೆನಪುʼ ಎನ್ನುತ್ತೇವೆ

2. ಇದು ತಾತ್ಕಾಲಿಕವಾದ ಸ್ಮರಣೆಯಾಗಿದೆ.

2.ಇದು ಶಾಶ್ವತವಾದ ಸ್ಮರಣೆಯಾಗಿದೆ.

3.ಉದಾ: ಸಿನಿಮಾ ಟಾಕೀಸಿನ ಸೀಟ್‌ ಸಂಖ್ಯೆ, ಬಸ್‌ ಸಂಖ್ಯೆ ಇತ್ಯಾದಿ.

3.ಜನ್ಮ ದಿನಾಂಕ, ಪೋಷಕರ ಹೆಸರು ಇತ್ಯಾದಿ

4. ನೆನಪಿಸಿಕೊಳ್ಳಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ.

4. ನೆನಪಿಸಿಕೊಳ್ಳಲು ಹೆಚ್ಚಿನ ಸಮಯದ ಅಗತ್ಯವಿಲ್ಲ.

 

ಸ್ಮೃತಿಯ ಮೇಲೆ ಪ್ರಭಾವ ಬೀರುವ ಅಂಶಗಳು

     ಕಲಿಕೆಯ ಮೇಲೆ ಪ್ರಭಾವ ಬೀರುವಂತಹ ಹಲವಾರು ಅಂಶಗಳು ಸ್ಮೃತಿಯ ಮೇಲೂ ಸಹ ಪ್ರಭಾವ ಬೀರುತ್ತವೆ. ಅವುಗಳೆಂದರೆ,

  1. ವೈಯಕ್ತಿಕ ಭಿನ್ನತೆಗಳು: ವ್ಯಕ್ತಿಗಳು ಹೊಂದಿರುವ ಭಿನ್ನವಾದ ಸಾಮರ್ಥ್ಯಗಳು ಅವರ ಸ್ಮೃತಿಯ ಮೇಲೆ ಪ್ರಭಾವ ಬೀರುತ್ತವೆ. ಸಾಮಾನ್ಯವಾಗಿ ಹೆಚ್ಚು ಬುದ್ಧಿಶಕ್ತಿ ಹೊಂದಿರುವ ಮಕ್ಕಳ ಸ್ಮೃತಿ ಸಾಮರ್ಥ್ಯ ಕಡಿಮೆ ಬುದ್ದಿಶಕ್ತಿಯುಳ್ಳವರಿಗಿಂತ ಹೆಚ್ಚಿರುತ್ತದೆ.
  2. ಆಸಕ್ತಿ: ಯಾವ ವಿಷಯದ ಕಲಿಕೆಯಲ್ಲಿ ತಮಗೆ ಆಸಕ್ತಿಯಿದೆಯೋ ಆ ವಿಷಯಗಳು ನಮ್ಮಲ್ಲಿ ಬೇಗ ನೆಲೆಗೊಳ್ಳುತ್ತವೆ. ಮತ್ತು ಹೆಚ್ಚು ಕಾಲ ನೆನಪಿನಲ್ಲಿರುತ್ತವೆ. ನಮಗೆ ಆಸಕ್ತಿಯಿಲ್ಲದ ಮತ್ತು ನಮಗೆ ಸಂತೋಷವನ್ನುಂಟು ಮಾಡದ ಅನುಭವಗಳು ಹೆಚ್ಚು ಕಾಲ ನಮ್ಮಲ್ಲಿ ಉಳಿಯಲಾರವು. ಉದಾ: ಕ್ರಿಕೆಟ್‌ ನಲ್ಲಿ ಆಸಕ್ತಿಯಿರುವ ಮಗುವಿಗೆ ಭಾರತ ಕ್ರಿಕೆಟ್‌ ತಂಡದ ಆಟಗಾರರ ಎಲ್ಲಾ ಹೆಸರು ನೆನಪಿನಲ್ಲಿರುತ್ತದೆ, ಆದರೆ ಹಾಕಿ ಆಟಗಾರರ ಹೆಸರು ನೆನಪಿನಲ್ಲಿರುವುದಿಲ್ಲ.
  3. ಅಭಿಪ್ರೇರಣೆ: ಕೇವಲ ಕಲಿಕೆಗಾಗಿ ಕಲಿಯುವುದಕ್ಕಿಂತ ಅದನ್ನು ನೆನಪಿನಲ್ಲಿಟ್ಟುಕೊಳ್ಳಬೇಕೆಂಬ ಆಂತರಿಕ ಪ್ರೇರಣೆಯಿಂದ ಕಲಿತರೆ ಕಲಿತ ವಿಷಯಗಳು ಹೆಚ್ಚು ಕಾಲ ಧಾ್ಣೆಗೊಳ್ಳುತ್ತವೆ.
  4. ಕಲಿಯುವವನ ಮನೋಧೋರಣೆ: ಕಲಿಯುವ ವ್ಯಕ್ತಿ ಕಲಿಯುವಂತಹ ವಸ್ತು ಅಥವಾ ಚಟುವಟಿಕೆಯ ಬಗ್ಗೆ ಧನಾತ್ಮಕ ಮನೋಧೋರಣೆ ಹೊಂದಿದ್ದರೆ ಅದು ಧಾರಣೆಯ ಮೇಲೆ ಧನಾತ್ಮಕ ಪ್ರಭಾವ ಬೀರುತ್ತದೆ. ವ್ಯಕ್ತಿ ಕಲಿಯುವ ವಿಷಯದ ಬಗ್ಗೆ ಋಣಾತ್ಮಕ ಮನೋಧೋರಣೆ ಹೊಂದಿದ್ದರೆ ಕಲಿಯುವ ವಿಷಯಗಳು ಧಾರಣೆಗೊಳ್ಳುವುದಿಲ್ಲ.
  5. ಕಲಿಕೆಯ ಪ್ರಮಾಣ: ಕಲಿಯುವ ವಿಷಯವನ್ನು ಹೆಚ್ಚಿನ ಪ್ರಮಾಣದಲ್ಲಿ ಕಲಿಯಲು ಪ್ರಯತ್ತಿಸಿದರೆ ಧಾರಣೆ ಹೆಚ್ಚಾಗುತ್ತದೆ. ಕಲಿಯುವಾಗ ವ್ಯಕ್ತಿ ಕ್ರಿಯಾಶೀಲನೂ, ಹೆಚ್ಚು ಗಮನ ಕೊಡುವವನಾಗಿದ್ದು, ಸಂಪೂರ್ಣ ಕಲಿಯುವವರೆಗೆ ಪ್ರಯತ್ನಶೀಲನಾಗಿರುತ್ತಾನೆ. ಆದ್ದರಿಂದ ಹೆಚ್ಚಿನ ಪ್ರಮಾಣದ ಕಲಿಕೆ ಸ್ಮೃತಿಯನ್ನು ಹೆಚ್ಚಿಸುತ್ತದೆ.
  6. ಕಲಿಯುವ ವಿಷಯ: ಕಲಿಯುವ ವಿಷಯ ಅರ್ಥಪೂರ್ಣವಾಗಿದ್ದಷ್ಟೂ ಧಾರಣೆಯ ಪ್ರಮಾಣ ಹೆಚ್ಚಾಗುತ್ತದೆ. ಕಲಿಯುವ ವಿಷಯವನ್ನು ಅರ್ಥಪೂರ್ಣವಾಗಿ ಸಂಘಟಿಸಿಕೊಂಡಾಗ ಮಾತ್ರ ಕಲಿಕೆ ಹೆಚ್ಚಾಗುತ್ತದೆ ಮತ್ತು ಅದನ್ನು ಹೆಚ್ಚು ಕಾಲ ನೆನಪಿನಲ್ಲಿಟ್ಟುಕೊಳ್ಳಲು ಸಾಧ್ಯವಾಗುತ್ತದೆ.
  7. ಪುನರಾವರ್ತನೆ: ಕಲಿತ ವಿಷಯಗಳು ಆಗಾಗ್ಗೆ ಪುನರಾವರ್ತನೆಯಾಗುತ್ತಿದ್ದರೆ ಅಥವಾ ಮುಂದಿನ ಸನ್ನಿವೇಶಗಳಲ್ಲಿ ಅವು ಹೆಚ್ಚು ಬಳಕೆಯಾದಲ್ಲಿ ಧಾರಣೆಯ ಸಾಮರ್ಥ್ಯ ಹೆಚ್ಚಾಗುತ್ತದೆ.

ಸ್ಮರಣೆಯ ವಿಧಾನಗಳು:

 

  1. ಅಂತರ ಮತ್ತು ನಿರಂತರ ಅಭ್ಯಾಸ: ಕಲಿಕೆಯ ಪ್ರಯತ್ನಗಳ ನಡುವೆ ಸ್ವಲ್ಪ ಅವಧಿಯ ವಿಶ್ರಾಂತಿ ತೆಗೆದುಕೊಂಡು ಕಲಿಯುವ ವಿಧಾನವೇ ಅಂತರ ವಿಧಾನ. ಪ್ರಯತ್ನಗಳ ನಡುವೆ ವಿರಾಮ ಅವಧಿ ಎಷ್ಟಿರಬೇಕು ಎಂಬುದನ್ನು ಕಲಿಯಬೇಕಾದ ವಸ್ತುವಿನ ಸ್ವರೂಪ ಮತ್ತು ಕಲಿಯುವ ವ್ಯಕ್ತಿಯ ಸಾಮರ್ಥ್ಯವನ್ನು ಆಧರಿಸಿ ನಿರ್ಧರಿಸಬೇಕು.

ಉದಾ: ಒಂದು ಪದ್ಯ ಕಲಿಯಲು ಇಚ್ಚಿಸುವ ವ್ಯಕ್ತಿ ಮೊದಲು ಪದ್ಯವನ್ನು ಕಲಿಯುತ್ತಾನೆ, ನಂತರ ಸ್ವಲ್ಪ ಅವಧಿಯ ವಿರಾಮ ಪಡೆಯುತ್ತಾನೆ. ನಂತರ ಮತ್ತೆ ಕಲಿಯಲು ಪ್ರಯತ್ನಿಸುತ್ತಾನೆ ಮತ್ತೆ ವಿರಾಮ ಪಡೆಯುತ್ತಾನೆ. ಹೀಗೆ ಕಲಿಯಬೇಕಾದ ಪದ್ಯದ ಮೇಲೆ ಸಂಪೂರ್ಣ ಪ್ರಭುತ್ವ ಸ್ಥಾಪಿಸುವವರೆಗೆ ಕಲಿಯುತ್ತಿರುತ್ತಾನೆ.

                   ಕಲಿಯಬೇಕಾದ ವಿಷಯಗಳನ್ನು ಪ್ರಯತ್ನಗಳ ನಡುವೆ ವಿಶ್ರಾಂತಿ ಪಡೆಯದೇ ಒಮ್ಮೆಲೇ ಕಲಿಯಲು      

            ಪ್ರಯತ್ನಿಸುವುದಕ್ಕೆ ನಿರಂತರ ಅಭ್ಯಾಸ ಎಂದು ಹೆಸರು. ಈ ವಿಧಾನದಲ್ಲಿ ಕಲಿಯಲು ಪ್ರಾರಂಭಿಸಿದ ನಂತರ    

            ಸಂಪೂರ್ಣ ವಿಶ್ರಾಂತಿ ಪಡೆಯದೇ ಕಲಿಯಬೇಕಾಗುತ್ತದೆ. ಆಸಕ್ತಿ ಮತ್ತು ಅಭಿಪ್ರೇರಣೆ ಹೆಚ್ಚಾಗಿದ್ದಾಗ ಮತ್ತು

            ಕಲಿಯುವ ವಸ್ತು ಸುಲಭ ಮತ್ತು ಅರ್ಥಪೂರ್ಣವಾಗಿದ್ದಾಗ ನಿರಂತರ ವಿಧಾನ ಹೆಚ್ಚು   

              ಉಪಯುಕ್ತವಾಗುತ್ತದೆ.

                 ಪ್ರಾಯೋಗಿಕ ಸಂಶೋಧನೆಗಳು ಅಂತರ ಕಲಿಕೆ ನಿರಂತರ ವಿಧಾನದ ಕಲಿಕೆಗಿಂತ ಹೆಚ್ಚು

         ಸೂಕ್ತವಾದುದು ಎಂದು ತೋರಿಸಿಕೊಟ್ಟಿವೆ. ಚಿಕ್ಕಮಕ್ಕಳಿಗೆ ಕಲಿಕೆಯಲ್ಲಿ ಅಂತರ ವಿಧಾನ ಹೆಚ್ಚು

       ಸೂಕ್ತವಾಗಿದೆ. ನಿರಂತರೆ ವಿಧಾನದ ಕಲಿಕೆ ವಿದ್ಯಾರ್ಥಿಗಳಲ್ಲಿ ಆಯಾಸವನ್ನುಂಟುಮಾಡುತ್ತದೆ ಮತ್ತು

       ಕಲಿಯುವ ವ್ಯಕ್ತಿ ಆಸಕ್ತಿ ಮತ್ತು ಪ್ರೇರಣೆಯನ್ನು ಕಳೆದುಕೊಳ್ಳಬಹುದು ಮತ್ತು ಕಲಿಕೆ ಯಾಂತ್ರಿಕವಾಗುತ್ತದೆ.

 

  1. ಇಡಿ ಮತ್ತು ಬಿಡಿ ವಿಧಾನ: ಕಲಿಯಬೇಕಾದ ಸಂಪೂರ್ಣ ವಸ್ತುವನ್ನು ಒಂದು ಘಟಕವಾಗಿ ಪರಿಗಣಿಸಿ ಒಟ್ಟಿಗೆ ಕಲಿಯಲು ಯತ್ನಿಸುವ ವಿಧಾನವೇ ಇಡಿ ವಿಧಾನ. ಘಟಕಗಳ ನಡುವೆ ಉತ್ತಮ ಸಂಬಂಧ ಇರುವ, ವ್ಯವಸ್ಥಿತ ರಚನೆ ಇರುವ ವಸ್ತುವಿನ ಕಲಿಕೆಗೆ ಈ ವಿಧಾನ ಉತ್ತಮ.

      ಕಲಿಯಬೇಕಾದ ವಸ್ತುವನ್ನು ಅರ್ಥಪೂರ್ಣ ಭಾಗಗಳಾಗಿ ವಿಂಗಡಿಸಿ ಒಂದೊಂದೇ ಭಾಗವನ್ನು ಕಲಿಯುವ ವಿಧಾನವೇ ಬಿಡಿ ವಿಧಾನ, ಘಟಕಗಳ ನಡುವೆ ಹೆಚ್ಚಿನ ಸಂಬಂಧ ಇರದ, ವ್ಯವಸ್ಥಿತ ರಚನೆ ಇಲ್ಲದ ವಸ್ತುಗಳ ಕಲಿಕೆಗೆ ಇದು ಉತ್ತಮ ವಿಧಾನವಾಗಿದೆ.

       ಉದಾ: ಒಂದು ಪದ್ಯವನ್ನು ಕಂಠಪಾಠ ಮಾಡುವಾಗ ಅದನ್ನು ಇಡಿಯಾಗಿ ಕಲಿಯಬೇಕೆನ್ನುವುದು ಆದರೆ ಒಂದು ವೇಳೆ ಪದ್ಯ ತೀರಾ ದೊಡ್ಡದಾಗಿದ್ದರೆ ಬಿಡಿವಿಧಾನ ಉಪಯುಕ್ತವಾಗುತ್ತದೆ. ಚಿಕ್ಕ ಪದ್ಯಗಳಿಗೆ ಇಡೀ ವಿಧಾನ ಸೂಕ್ತ. ಪದ್ಯ ಅಥವಾ ಯಾವುದೇ ಕಲಿಕಾ ವಸ್ತು ದೊಡ್ಡದಾಗಿದ್ದರೆ ಬಿಡಿ ವಿಧಾನದೊಂದಿಗೆ ಇಡೀ ವಿಧಾನವನ್ನು ಸಂಯೋಜಿಸಿ ಪ್ರಯೋಗಿಸಬಹುದು.

  1. ಅರ್ಥಪೂರ್ಣಕಲಿಕೆ ಮತ್ತು ಕಂಠಪಾಠ: ಈ ವಿಧಾನದಲ್ಲಿ ಕಲಿಯುವ ವ್ಯಕ್ತಿ ಕಲಿಯಬೇಕಾದ ವಿಷಯಗಳನ್ನು ಒಂದು ಅಥವಾ ಎರಡು ಬಾರಿ ಓದುತ್ತಾನೆ. ಅದನ್ನು ಕಂಠಪಾಠ ಮಾಡುತ್ತಾನೆ, ನಂತರ ಅದನ್ನು ಪುನಃಸ್ಮರಣೆಗೆ ತಂದುಕೊಳ್ಳಲು ಪ್ರಯತ್ನಿಸುತ್ತಾನೆ. ಹೀಗೆ ಮಾಡುವಾಗ ಎರಡನೇ ಸಾರಿ ಓದುವಾಗ ಯಾವ ಅಂಶಗಳನ್ನು ಪುನರ್ ಸ್ಮರಣೆಗೆ ತಂದುಕೊಳ್ಳಲು ಸಾಧ್ಯವಾದಾಗ ಕಲಿಯುವ ವ್ಯಕ್ತಿಗೆ ತೃಪ್ತಿ ದೊರೆಯುತ್ತದೆ.

ಉದಾ: ನಾವು ಕಲಿತ ಕೆಲವು ನರ್ಸರಿ ಪದ್ಯಗಳು ಅಥವಾ ಪಾಠಗಳು ಈಗಲೂ ನೆನಪಿನಲ್ಲಿರುವುದು.

     ನಾವು ಕಲಿಯಬೇಕಾದ ವಿಷಯವನ್ನು ಚೆನ್ನಾಗಿ ಅರ್ಥಮಾಡಿಕೊಂಡು ಕಲಿಯಲು ಯತ್ನಿಸಿದಾಗ ಅರ್ಥಪೂರ್ಣ ಕಲಿಕೆ ನಡೆಯುತ್ತದೆ. ಇಂತಹ ಕಲಿಕೆ ಹೆಚ್ಚು ಕಾಲ ಧಾರಣೆಗೊಳ್ಳುತ್ತದೆ ಮತ್ತು ಬೇಕಾದಾಗ ನೆನಪಿಗೆ ತಂದುಕೊಳ್ಳಲು ಸಾಧ್ಯವಾಗುತ್ತದೆ.

  1. ಸಂಯೋಜನಾ ವಿಧಾನ: ಒಂದು ಅಂಶದ ಪುನಃಸ್ಮರಣೆ ಮತ್ತೊಂದು ಅಂಶದ ಪುನಃಸ್ಮರಣೆಗೆ ನೆರವಾಗುವ ಪ್ರಕ್ರಿಯೆಯನ್ನು ಸಂಯೋಜೆ ಎನ್ನುತ್ತೇವೆ. ನೀವು ಹಿಂದೆ ಅಧ್ಯಯನ ಮಾಡಿದ ಶಾಲೆಯನ್ನು ನೆನಪಿಗೆ ತಂದುಕೊಂಡಾಕ್ಷಣ ಶಾಲೆಯ ಹಲವಾರು ಘಟನೆಗಳು, ಸ್ನೇಹಿತರು ಹಾಗೂ ಅಧ್ಯಾಪಕರು ನಮ್ಮ ನೆನಪಿಗೆ ಬರುತ್ತಾರೆ. ಸಂಯೋಜನಾ ಕಲಿಕೆ ಕೆಲವು ನಿಯಮಗಳಿಗನುಗುಣವಾಗಿನಡೆಯುತ್ತದೆ. ಅವುಗಳೆಂದರೆ,

·         ಸಾಮ್ಯತೆಯ ನಿಯಮ: ಒಂದು ವೇಳೆ ಎರಡು ಅಥವಾ ಹೆಚ್ಚು ವಸ್ತುಗಳು ಇದ್ದರೆ, ಒಂದರ ಪುನಃಸ್ಮರಣೆ ಮತ್ತೊಂದು ಅಥವಾ ಇನ್ನಿತರ ವಸ್ತುಗಳನ್ನು ಪುನಃ ಸ್ಮರಿಸಲು ಸಹಾಯಕವಾಗುತ್ತದೆ.

ಉದಾ: ನಾವು ಒಂದು ಜಲಾಶಯವನ್ನುನೋಡಿದಾಕ್ಷಣ ನಾವು ಹಿಂದೆ ನೋಡಿದ್ದ ಮತ್ತೊಂದು ಜಲಾಶಯ ನಮ್ಮ ಕಣ್ಣ ಮುಂದೆ ನಿಲ್ಲುತ್ತದೆ ಮತ್ತು ಅವುಗಳನ್ನು ಹೋಲಿಸಲು ಪ್ರಾರಂಭಿಸುತ್ತೇವೆ.

·         ಸಾಮಿಪ್ಯತೆಯ ನಿಯಮ: ಈ ನಿಯಮದ ಪ್ರಕಾರ ಯಾವಾಗ ಒಂದು ಅಥವಾ ಹೆಚ್ಚಿನ ಅಂಶಗಳು ಕಾಲ ಅಥವಾ ಸ್ಥಳದಲ್ಲಿ ಸಂಯೋಜನೆಗೊಳ್ಳುತ್ತವೆಯೋ ಆಗ ಒಂದು ಅಂಶದ ಪುನಃಸ್ಮರಣೆ ಮತ್ತೊಂದು ಅಂಶದ ಪುನರ್‌ ಸ್ಮರಣೆಗೆ ಅನುಕೂಲ ಮಾಡುತ್ತದೆ. ಉದಾ: ನೀವು ಭಾರತದ ಈಗಿನ ಕ್ರಿಕೆಟ್‌ ತಂಡದಲ್ಲಿರುವ ಒಬ್ಬರ ಹೆಸರನ್ನು ಪುನಃಸ್ಮರಿಸಿದರೆ ಉಳಿದ ಆಟಗಾರರ ಹೆಸರುಗಳೂ ಸಹ ನೆನಪಿಗೆ ಬರುತ್ತವೆ.

·         ಭಿನ್ನತೆ ನಿಯಮ: ಸಾಮ್ಯತೆಯ ನಿಯಮದಂತೆ ಭಿನ್ನತೆಯ ಅಂಶಗಳೂ ಸಹ ಪುನಃಸ್ಮರಣೆಯಲ್ಲಿ ನೆರವಾಗುತ್ತವೆ. ವಿರುದ್ಧ ಪದಗಳನ್ನು ನೆನಪಿಗೆ ತಂದುಕೊಳ್ಳುವಲ್ಲಿ ಈ ನಿಯಮ ನೆರವಾಗುತ್ತದೆ. ಉದಾ: ಅತಿ ದೊಡ್ಡ ಪ್ರಾಣಿಯೊಂದಿಗೆ ಅತಿ ಚಿಕ್ಕ ಪ್ರಾಣಿ ನೆನಪಾಗುವುದು. ಅತಿ ಎತ್ತರದ ವ್ಯಕ್ತಿ ಅತಿ ಕುಬ್ಜ ವ್ಯಕ್ತಿಯನ್ನು ನೆನಪಿಗೆ ತರುವುದು ಇತ್ಯಾದಿ.

 

ವಿದ್ಯಾರ್ಥಿಗಳ ಸ್ಮರಣೆಯನ್ನು ಉತ್ತಮಪಡಿಸಲು ಬಳಸಬಹುದಾದ ತಂತ್ರಗಳು

  1. ದೃಶ್ಯ ಚಿತ್ರಗಳನ್ನು ಮತ್ತು ಇತರೇ ಸ್ಮರಣಾ ತಂತ್ರಗಳನ್ನು ಬಳಸಿ ವಿದ್ಯಾರ್ಥಿಗಳಿಗೆ ಬೊಧಿಸಬೇಕು.
  2. ಪ್ರಶ್ನೆಗಳನ್ನು ಕೇಳುವುದು.
  3. ಕಲಿಕೆಯನ್ನು ಉತ್ತೇಜಕ ಅನುಭವವಾಗಿ ಬದಲಾಯಿಸುವ ಮೂಲಕ
  4. ನೈಜ ಜೀವನದ ಉದಾಹರಣೆಗಳನ್ನು ಬೊದನೆಯಲ್ಲಿ ಬಳಸುವ ಮೂಲಕ
  5. ಮನಸ್ಸಿನ ನಕ್ಷೆಯನ್ನು ಸೃಷ್ಠಿಸುವ ಮೂಲಕ
  6. ಬಹು ಇಂದ್ರೀಯ ಅನುಭವವನ್ನು ಅಳವಡಿಸಿಕೊಳ್ಳುವ ಮೂಲಕ
  7. ಮುಖ್ಯ ಪದಗಳನ್ನು ಪಟ್ಟಿ ಮಾಡುವುದರಿಂದ
  8. ಮಾಹಿತಿಯನ್ನು ತುಣುಕುಗಳಾಗಿ ಮಾಡಿ ಬೊಧಿಸುವುದರಿಂದ
  9. ಪ್ರಸ್ತುತಪಡಿಸುವ ಕೌಶಲ್ಯದಿಂದ ವಿಷಯವನ್ನು ಒತ್ತಿ ಹೇಳುವುದರ ಮೂಲಕ
  10. ಕಲಿಕೆಯೊಂದಿಗೆ ಶಿಶು ಗೀತೆಗಳು ಮತ್ತು ಹಾಡುಗಳನ್ನು ಸೇರಿಸುವ ಮೂಲಕ

 


Comments

Popular posts from this blog

ಬಾಲ್ಯಾವಸ್ಥೆ

ಶೈಕ್ಷಣಿಕ ಮನೋವಿಜ್ಙಾನ-ಅರ್ಥ