ಅಭಿಪ್ರೇರಣೆ

 ಅಭಿಪ್ರೇರಣೆ

 ಅರ್ಥ:

           Motivation ಎಂಬ ಪದವು ಲ್ಯಾಟಿನ್‌ ಭಾಷೆಯ Movers ಎಂಬ ಪದದಿಂದ ಬಂದಿದೆ.  Movers ಎಂದರೆ ʼಚಲಿಸುವಂತೆ ಮಾಡುʼ, ಕಾರ್ಯೋನ್ಮುಖವಾಗುವಂತೆ ಮಾಡುʼ ಎಂದರ್ಥ. ಅಭಿಪ್ರೇರಣೆ ಎಂದರೆ ಜೀವಿಯನ್ನು ಸಕ್ರೀಯವಾಗುವಂತೆ ಮಾಡುವ ಪ್ರಕ್ರಿಯೆ. ಜೀವಿಯನ್ನು ಕ್ರಿಯಾಶೀಲಗೊಳಿಸಿ, ಅವನು ಶಕ್ತಿಯುತವಾಗಿ ಕಾರ್ಯ ನಿರ್ವಹಿಸುವಂತೆ ಮಾಡುವ ಪ್ರಕ್ರಿಯೆಯೇ ಅಭಿಪ್ರೇರಣೆ.

ವ್ಯಾಖ್ಯಾನಗಳು:

1. ಕ್ರೋ ಮತ್ತು ಕ್ರೋ: - “ಪ್ರೇರಣೆಯು ಕಲಿಕೆಯಲ್ಲಿ ಆಸಕ್ತಿಯನ್ನು ಹುಟ್ಟಿಸುವ ಅಂಶವಾಗಿದ್ದು ಕಲಿಕೆಗೆ ಆಧಾರವಾಗಿದೆ”.

2. ಮೋರ್‌ ಮತ್ತು ಮ್ಯಾಕ್ಸ್:- “ಅಭಿಪ್ರೇರಣೆಯು ವರ್ತನೆಯನ್ನು ಹುರಿದುಂಬಿಸುವ, ಪೋಷಿಸುವ ಮಾತ್ತು ನಿರ್ದೇಶಿಸುವ ಸಂಕೀರ್ಣ ಆಂತರಿಕ ಪ್ರಕ್ರಿಯೆಗಳ ಸಂಯೋಜನೆಯಾಗಿದೆ”.

3. ಸ್ಕಿನ್ನರ್:- “ಶಾಲಾ ಕಲಿಕೆಯಲ್ಲಿ ಅಭಿಪ್ರೇರಣೆಯು ಅಪೇಕ್ಷಿತ ವರ್ತನೆಯನ್ನು ಹುರಿದುಂಬಿಸುವ, ಕಾಪಾಡುವ, ಪೋಷಿಸುವ ಮತ್ತು ನಿರ್ದೇಶಿಸುವುದನ್ನು ಒಳಗೊಂಡಿರುತ್ತದೆ.”

ಅಭಿಪ್ರೇರಣೆಯ ವಿಧಗಳು:

1. ಆಂತರಿಕ ಅಥವಾ ಸ್ವಾಭಾವಿಕ ಅಥವಾ ಸಹಜ ಅಭಿಪ್ರೇರಣೆ:

      ಎಲ್ಲಾ ಮನುಷ್ಯರಿಗೂ ಆಂತರಿಕವಾಗಿ ಜನ್ಮದತ್ತವಾದ ಸಹಜ ಪ್ರವೃತ್ತಿಗಳು, ಅವಶ್ಯಕತೆಗಳು, ಆಕಾಂಷೆಗಳು, ಆಸಕ್ತಿಗಳು, ಬಯಕೆಗಳು ಇರುತ್ತವೆ. ವ್ಯಕ್ತಿಯ ಜನ್ಮಜಾತವಾಗಿ ಬಂದಂತಹ ಸಹಜ ಪ್ರವೃತ್ತಿಗಳ ಕಾರಣದಿಂದ ವ್ಯಕ್ತಿ ನಿರ್ಧಿಷ್ಟ ಕಾರ್ಯಗಳನ್ನು ಮಾಡಲು ಸಹಜವಾಗಿ ಪ್ರೇರೇಪಿತನಾಗುತ್ತಾನೆ. ಇದನ್ನು ʼಆಂತರಿಕ ಅಭಿಪ್ರೇರಣೆʼ ಎನ್ನುತ್ತೇವೆ.

        ವ್ಯಕ್ತಿ ಯಾವುದೇ ಒತ್ತಡವಿಲ್ಲದೆ ಸಹಜವಾಗಿ ಸ್ವಾಭಾವಿಕವಾಗಿ ಒಂದು ನಿರ್ದಿಷ್ಠ ಕಾರ್ಯ ಮಾಡಲು ಆಸಕ್ತಿಯಿಂದ ತೊಡಗುತ್ತಾನೆ. ಆ ಕಾರ್ಯ ಮಾಡುವುದರಿಂದ ಅವನಿಗೆ ಸಂತೋಷ, ಸಂತೃಪ್ತಿಗಳು ದೊರೆಯುತ್ತವೆ. ಈ ಸಹಜ ಸಂತೋಷ, ಸಂತೃಪ್ತಿಗಳ ಫಲವಾಗಿ ಆ ಕಾರ್ಯದಲ್ಲಿ ಹೆಚ್ಚಿನ ಸಾಧನೆ ಮಾಡಿ ಗುರಿ ಮುಟ್ಟುವಲ್ಲಿ ಯಶಸ್ವಿಯಾಗುತ್ತಾನೆ.

2. ಬಾಹ್ಯ ಅಭಿಪ್ರೇರಣೆ:

       ಎಲ್ಲಾ ಮಕ್ಕಳಿಗೂ ಎಲ್ಲಾ ವೇಳೆಯಲ್ಲೂ ಆಂತರಿಕ ಅಭಿಪ್ರೇರಣೆ ಇರುವುದಿಲ್ಲ. ಆಂತರಿಕ ಅಭಿಪ್ರೇರಣೆ ಇಲ್ಲದಿದ್ದಾಗ್ಯೂ ಕಲಿಕಾ ಕಾರ್ಯ ಮುಂದುವರಿಯಬೇಕು. ಭೌತಿಕ ಸಾಮರ್ಥ್ಯದ ಹಾಗೂ ಸಹಜ ಪ್ರವೃತ್ತಿಗಳ ಕೊರತೆಯ ಕಾರಣದಿಂದ ಕಲಿಯುವಲ್ಲಿ ಆಂತರಿಕ ಅಭಿಪ್ರೇರಣೆ ಇಲ್ಲವಾಗುತ್ತದೆ. ಇಂತಹ ಸಂದರ್ಭದಲ್ಲಿ ಬಾಹ್ಯ ಅಂಶಗಳ ಮೂಲಕ ವ್ಯಕ್ತಿಯಲ್ಲಿ ಅಭಿಪ್ರೇರಣೆಯನ್ನು ಮೂಡಿಸಬೇಕು. ಇಂತಹ ಅಭಿಪ್ರೇರಣೆಗಳಿಗೆ ಬಾಹ್ಯ ಅಭಿಪ್ರೇರಣೆ ಎಂದು ಕರೆಯಲಾಗುತ್ತದೆ. ಪ್ರಶಂಸೆ, ಬಹುಮಾನ, ಗೆಲುವಿನ ಆಕಾಂಕ್ಷೆ, ಗೆಲುವಿನ ಇಚ್ಚೆ ಇತ್ಯಾದಿ ಅನೇಕ ಕ್ರಮಗಳ ಮೂಲಕ ಕಲಿಯುವವನಲ್ಲಿ ಬಾಹ್ಯ ಅಭಿಪ್ರೇರಣೆಯನ್ನು ಮೂಡಿಸಬಹುದು.

ವಿದ್ಯಾರ್ಥಿಗಳಲ್ಲಿ ಪ್ರೇರಣೆಯನ್ನುಂಟು ಮಾಡಲು ಶಿಕ್ಷಕರು ಕೈಗೊಳ್ಳಬೇಕಾದ ಕ್ರಮಗಳು

1. ಶಿಕ್ಷಕರು ಮಕ್ಕಳಲ್ಲಿ ಆಸಕ್ತಿ, ಅಭಿರುಚಿ, ಸಾಮರ್ಥ್ಯ, ಮನೋಭಾವಗಳಿಗೆ ತಕ್ಕಂತೆ ಕಲಿಕೆಯ ಅನುಭವಗಳನ್ನು ರೂಪಿಸಬೇಕು.

2. ಶಿಕ್ಷಕರು ಪಠ್ಯ ವಿಷಯವನ್ನು ಸರಳವಾಗಿ ಅರ್ಥಪೂರ್ಣವಾಗಿ ಬೋಧಿಸಬೇಕು. ಬೋಧನಾ ಕಾರ್ಯದಲ್ಲಿ ಅಗತ್ಯವಾದ ಉದಾಹರಣೆಗಳನ್ನು ನಿದರ್ಶನಗಳನ್ನು ಕೊಡಬೇಕು.

3. ಶಿಕ್ಷಕರು, ಮಕ್ಕಳು ತಾವು ಕಲಿಯುತ್ತಿರುವ ವಿಷಯದ ಗುರಿ ಮಾತ್ತು ಉದ್ದೇಶಗಳನ್ನು ಸ್ಪಷ್ಟವಾಗಿ ತಿಳಿದುಕೊಳ್ಳುವಂತೆ ಮಾಡಬೇಕು.

4. ಪರಿಣಾಮಕಾರಿ ಪ್ರಾಯೋಗಿಕ ಬೋಧನಾ ಪದ್ಧತಿಗಳನ್ನು ಅಳವಡಿಸಬೇಕು.

5. ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಆತ್ಮೀಯತೆಯಿಂದ ಪ್ರೀತಿಯಿಂದ ವರ್ತಿಸಬೇಕು.

6. ತರಗತಿಯ ಕಲಿಕೆಯ ಅನುಭವಗಳು ಸಂತೋಷಕರವಾಗಿರುವಂತೆ ನೋಡಿಕೊಳ್ಳಬೇಕು.

7. ತರಗತಿಯ ಬೋಧನೆಯಲ್ಲಿ ದೃಕ್-ಶ್ರವಣ ಉಪಕರಣಗಳನ್ನು ಬಳಸಬೇಕು.

8. ವಿದ್ಯಾರ್ಥಿಗಳಿಗೆ ತಮ್ಮ ಸಾಧನೆಯ, ಪ್ರಗತಿಯ ಅರಿವನ್ನು ಮೂಡಿಸಬೇಕು.

9. ವಿದ್ಯಾರ್ಥಿಗಳ ಕಲಿಕೆಯ ಸಾಧನೆಗೆ ಸೂಕ್ತ ಬಹುಮಾನಗಳನ್ನು ಸಾಂದರ್ಭಿಕವಾಗಿ ನೀಡಬೇಕು.

10. ವಿದ್ಯಾರ್ಥಿಗಳಿಗೆ ಉಗ್ರ, ದೈಹಿಕ ಶಿಕ್ಷೆ ನೀಡುವುದು ಮತ್ತು ಅವಹೇಳನಕಾರಿಯಾಗಿ ಬಯ್ಯುವುದು ಸಲ್ಲದು.

11. ಶಿಕ್ಷಕರು ತಾವು ನೀಡುವ ಶಿಕ್ಷೆಯ ಕಾರಣಗಳನ್ನು ವಿವರಿಸಬೇಕು.

12. ವಿದ್ಯಾರ್ಥಿಗಳ ನಡುವೆ ಆರೋಗ್ಯಕರ ಸ್ಪರ್ಧೆಗೆ ಪ್ರೋತ್ಸಾಹ ನೀಡಬೇಕು.


Comments

Popular posts from this blog

ಬಾಲ್ಯಾವಸ್ಥೆ

ಶೈಕ್ಷಣಿಕ ಮನೋವಿಜ್ಙಾನ-ಅರ್ಥ

ಕಲಿಕೆ